ಕಾಸರಗೋಡು: ದೇಶದಲ್ಲಿ ಉತ್ತಮ ಚಲನ ಚಿತ್ರಗಳು ಬರುತ್ತಿದ್ದರೂ ಬೆಡಗಿಗೆ ಮಾರು ಹೋಗುವ ಈ ಸಂದರ್ಭದಲ್ಲಿ ಚಿತ್ರ ಸಮಾಜ ಸೊರಗಿದೆ. ಚಳವಳಿ ಕುಸಿದಿದೆ ಎಂದು ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಯಾದ ರಂಗಚಿನ್ನಾರಿ ಕಾಸರಗೋಡು ಇದರ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರ ದೊಂದಿಗೆ ಕರಂದಕ್ಕಾಡಿನ “ಪದ್ಮಗಿರಿ’ ಕುಟಿರದಲ್ಲಿ “ಕಾಸರವಳ್ಳಿ ಫಿಲ್ಮ್ ಫೆಸ್ಟಿವಲ್’ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಹುಟ್ಟು ಹಾಕುವ ವಿವೇಚನೆ ಇಂದು ಬದಿಗೆ ಸರಿಯುತ್ತಿದೆ. ಈ ಮಧ್ಯೆ ನಿರಂತರವಾಗಿ ಸಾಂಸ್ಕೃತಿಕ ಚಟು ವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ರಂಗಚಿನ್ನಾರಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಹೊಸ ಹೊಸ ಚಿಂತನೆಯ, ಹೊಸ ಪ್ರಯೋಗದ ಚಿತ್ರಗಳು ಬರುತ್ತಿದ್ದರೂ ಚಿತ್ರಗಳನ್ನು ಆಸ್ವಾದಿಸುವ ಮನಸ್ಸು ಬದಲಾಗುತ್ತಿದೆ. ಈ ಮೂಲಕ ಉತ್ತಮ ಚಿತ್ರ ಪ್ರೇಕ್ಷಕರು ಕುಸಿಯುತ್ತಿದ್ದಾರೆ. ಉತ್ತಮ ಚಿತ್ರ ವೀಕ್ಷಕರು ಸೀಮಿತಗೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಚಿತ್ರ ಪ್ರೇಕ್ಷಕರನ್ನು ತಯಾರಿಸುವ ಹೊಣೆಗಾರಿಕೆ ಬಲು ದೊಡ್ಡದು. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಸಂಸ್ಥೆಯ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಬೇಕು. ಚಿತ್ರ ಪ್ರೇಕ್ಷಕರು ಬೆಡಗಿಗೆ ಮಾರುಹೋಗುತ್ತಿರುವುದು ದುರದೃಷ್ಟಕರ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾದೇಶಿಕ ಚಿತ್ರಗಳಲ್ಲಿ ಮಾತ್ರ ದೇಶದ ಜೀವನದ ಸೆಲೆಯನ್ನು ಸಾಂಸ್ಕೃ ತಿಕ ಮೌಲ್ಯಗಳನ್ನು ಹಿಡಿದಿಡುವ ಪ್ರಯತ್ನಗಳು ನಡೆಯುತ್ತಿವೆ. ಅಂತಹ ಮೌಲ್ಯಗಳು ಚಿತ್ರಗಳಲ್ಲಿ ಹಾಸು ಹೊಕ್ಕಾಗಿರುತ್ತವೆ. ಜೀವನ ಮೌಲ್ಯ ಗಳನ್ನು ಸಾರುತ್ತವೆ ಎಂದು ಅಭಿಪ್ರಾಯ ಪಟ್ಟ ಅವರು ರಂಗಚಿನ್ನಾರಿಯಂತಹ ಸಾಂಸ್ಕೃತಿಕ ಸಂಘಟನೆಗಳು ನೀಡುತ್ತಿರುವ ಕೊಡುಗೆ ಅಪಾರ ಎಂದರು.
ಗಿರೀಶ್ ಕಾಸರವಳ್ಳಿ ಅವರಂತಹ ಮಹಾನ್ ವ್ಯಕ್ತಿಗಳ ಸಿನಿಮಾ ನಾವು ಕಾಣುವಂತಹದ್ದು ಒಂದು ಸಂಸ್ಕೃತಿಯ ಮೈಲುಗಲ್ಲು. ಕಾಸರಗೋಡಿನ ಸಂಸ್ಕೃತಿ ಎಂಬುದು ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಹಲವು ಭಾಷೆ, ಸಂಸ್ಕೃತಿ ಒಂದು ರೀತಿಯ ವಿಶ್ವವಿದ್ಯಾಲಯ ಎಂದೇ ಬಣ್ಣಿಸಬಹುದು. ಇಂತಹ ಅಪರೂಪದ ಮೌಲ್ಯಗಳು ಎಲ್ಲೂ ಸಿಗವು. ಯುವ ತಲೆಮಾರಿಗೆ ಭಾರತೀಯ ಸಂಸ್ಕೃತಿಯ ಅರಿವನ್ನು ದಾಟಿಸಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ರಂಗಚಿನ್ನಾರಿ ಪ್ರಯತ್ನ ಶ್ಲಾಘನೀಯ. ಎಂಡೋಸಲ್ಫಾನ್ ವಿರುದ್ಧ ಹೋರಾಟ, ಆ ಮೂಲಕ ಪ್ರಕಾಶನಗೊಂಡ ಕೃತಿಯ ಬಿಡುಗಡೆಯ ಕೆಲವೇ ದಿನಗಳ ಬಳಿಕ ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ ಪರಿಹಾರ ನೀಡಬೇಕೆನ್ನುವ ತೀರ್ಪು ಈ ಪ್ರಯತ್ನಕ್ಕೆ ಸಿಕ್ಕಿದ ಮಾನ್ಯತೆ ಎಂದು ತಿಳಿದು ಕೊಂಡಿದ್ದೇನೆ ಎಂದು ಪ್ರಶಸ್ತಿ ವಿಜೇತ ಕೃತಿಕಾರ, ನಿರ್ದೇಶಕ ಪ್ರೊ|ಎಂ.ಎ. ರೆಹಮಾನ್ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಗೋಪಾಲಕೃಷ್ಣ ಪೈ, ಹಿರಿಯ ಸಿನಿಮಾ ಪತ್ರಕರ್ತ ಬಿ.ಎನ್. ಸುಬ್ರಹ್ಮಣ್ಯ, ನಟ ಅನಿಲ್ ಕುಮಾರ್, ಸತ್ಯನಾರಾಯಣ ಕೆ. ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಪ್ರೊ| ಎಂ.ಎ. ರೆಹಮಾನ್ ಅವರನ್ನು ಗಿರೀಶ್ ಕಾಸರವಳ್ಳಿ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ರಂಗಚಿನ್ನಾರಿ ನಿರ್ದೇಶಕ ಕಾಸರ ಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ರಂಗಚಿನ್ನಾರಿ ಕಳೆದ ಹತ್ತು ವರ್ಷಗಳಿಂದ ನಡೆದು ಬಂದ ಹಾದಿಯ ಬಗ್ಗೆ ವಿವರ ನೀಡಿದರು. ಮುಂದಿನ ದಿನಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜಿಸುವುದಾಗಿ ಹೇಳಿದರು.
ಪ್ರತೀ ತಿಂಗಳು ಖ್ಯಾತ ನಿರ್ದೇಶಕರ ಹಾಗು ಪ್ರಶಸ್ತಿ ವಿಜೇತ ಚಿತ್ರಗಳ ಪದರ್ಶನ ಏರ್ಪಡಿಸುವುದಾಗಿ ಹೇಳಿದರು.
ಟಿ.ವಿ. ಗಂಗಾಧರನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಸರವಳ್ಳಿ ಅವರ ನಿರ್ದೇಶನದ ರಾಷ್ಟ್ರೀಯ, ರಾಜ್ಯ ಫಿಲ್ಮ್ ಪ್ರಶಸ್ತಿ ಪಡೆದ ದ್ವೀಪ ಸಿನಿಮಾ ಪ್ರದರ್ಶನಗೊಂಡಿತು. ರವಿವಾರ “ಗುಲಾಬಿ ಟಾಕೀಸ್’ ಮತ್ತು “ತಾಯಿ ಸಾಹೇಬ’ ಚಿತ್ರಗಳು ಪ್ರದರ್ಶನಗೊಂಡು ಸಂವಾದ ಕಾರ್ಯಕ್ರಮ ಜರಗಿತು.