ಮುಧೋಳ: 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಜನಹಿತ ಟ್ರಸ್ಟ್ ಹಮ್ಮಿಕೊಂಡಿರುವ ವಿಶ್ವಭಾರತಿಗೆ ಕನ್ನಡದಾರತಿ ಅಭಿಯಾನ ಜನಮನ ಸೆಳೆದಿದೆ. ನಗರದ 75 ಕುಡಿಯುವ ನೀರಿನ ಟ್ಯಾಂಕ್‌ಗಳ ಮೇಲೆ ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರ ಚಿತ್ರ ಬಿಡಿಸಲಾಗುತ್ತಿದೆ.
ಆ ಮೂಲಕ ನಗರದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ಅವರ ಆದರ್ಶಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಸ್ವಚ್ಛಗೊಂಡ ಟ್ಯಾಂಕ್‌ಗಳು: ಬಣ್ಣವೇ ಕಾಣದೆ ಅದೆಷ್ಟೋ ದಿನದಿಂದ ಹಲವು ನೀರಿನ ಟ್ಯಾಂಕ್‌ಗಳ ಸುತ್ತ ಕಸ ಬೆಳೆದಿತ್ತು. ಇದನ್ನು ಗಮನಿಸಿದ ಜನಹಿತ ಟ್ರಸ್ಟ್‌ನವರು ಕಸ ಸ್ವತ್ಛಗೊಳಿಸಿ ಬಣ್ಣಬಳಿದು ನೀರಿನ ಟ್ಯಾಂಕ್‌ಗಳು ಕಂಗೊಳಿಸುವಂತೆ ಮಾಡಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದೇ ಜನಹಿತ ಟ್ರಸ್ಟ್ ಮಾಡಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹತ್ತು-ಹಲವು ಸಮಾಜಮುಖಿ ಕಾರ್ಯ: 2011ರಲ್ಲಿ ಅಸ್ತಿತ್ವಕ್ಕೆ ಬಂದ ಜನಹಿತ ಟ್ರಸ್ಟ್ ಹತ್ತು ಹಲವಾರು ಕಾರ್ಯಗಳಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಕೊರೊನಾ ವೇಳೆಯಲ್ಲಿ ಫ್ರಂಟ್‌ಲೈನ್ ವಾರಿಯರ್, ಕ್ವಾರಂಟೈನ್ ಆಗಿರುವವರಿಗೆ ಸೇರಿದಂತೆ ಸಾವಿರಾರು ಜನರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿ ರುವುದು, 2020ರಲ್ಲಿ ಮುಧೋಳ-ಜಮ ಖಂಡಿ ತಾಲೂಕಿನಲ್ಲಿ ಏಕಕಾಲಕ್ಕೆ 25ಲಕ್ಷ ಬೀಜದುಂಡೆ ತಯಾರಿಸಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು. ನಗರದ ಗಡದನ್ನವರ ವೃತ್ತದಿಂದ ಮಾಸರಡ್ಡಿ ಆಸ್ಪತ್ರೆವರೆಗೆ ನಿರ್ಮಾಣಗೊಂಡಿರುವ ರಸ್ತೆಯ ಮಧ್ಯದಲ್ಲಿ ಡಿವೈಡರ್‌ನಲ್ಲಿ ಸಸಿ ಬೆಳೆಸುವ ಕಾರ್ಯ ಸೇರಿದಂತೆ ಹತ್ತಾರು ಕಾರ್ಯ ಕೈಗೊಂಡು ಜನಹಿತಕ್ಕಾಗಿ ಶ್ರಮಿಸುತ್ತಿದೆ. ಜನಹಿತ ಟ್ರಸ್ಟ್ ನಡಿಯಲ್ಲಿ ನಾರಾಯಣ(ರಾಜು) ಯಡಹಳ್ಳಿ, ಬಸವರಾಜ ಗಣಿ, ವಿಠ್ಠಲ ಪರೀಟ, ಸಂಜು ನಿಗಡೆ, ಸಂತೋಷ ಬಾಡಗಿ, ಹನಮಂತ ನಲಗೆ, ಪ್ರಕಾಶ ಲಿಂಬಿಕಾಯಿ, ಶಿವು ಐನಾಪುರ, ಕಿರಣ ಜುನ್ನು, ಮಹೇಶ ಕಬ್ಬೂರ, ರಾಹುಲ ಕೊಲ್ಹಾರ, ಸಾಗರ ಕರೆಹೊನ್ನ, ರಮೇಶ ಮೇತ್ರಿ, ಮೌನೇಶ ಸೋನಾರ ಮತ್ತಿತರ ಯುವಕರ ತಂಡ ಅಭಿಯಾನದ ಯಶಸ್ಸಿಗೆ ಶ್ರಮಿಸುತ್ತಿದೆ.
ಸರ್ವರ ಹಿತಕ್ಕಾಗಿ ಶ್ರಮಿಸುತ್ತಿರುವ ಜನಹಿತ ಟ್ರಸ್ ಸಾರ್ವ ಜನಿಕರ ಸೇವೆ ಸದಾ ಸಿದ್ಧ. ಜನರಿಗೆ ಸ್ವಚ್ಛತೆ ಹಾಗೂ ನೀರಿನ ಮಹತ್ವದೊಂದಿಗೆ ಸ್ವಾತಂತ್ರ್ಯೋತ್ಸವ ಮಹತ್ವ ತಿಳಿಸಲು ವಿಶ್ವಭಾರತಿಗೆ ಕನ್ನಡದಾರತಿ ಅಭಿಯಾನ ಹಮ್ಮಿಕೊಂಡಿದ್ದೇವೆ. –
ಶಿವಾನಂದ ಗುರವ, ಜನಹಿತ ಟ್ರಸ್ಟ್‌ನ ಟ್ರಸ್ಟಿ
ಗೋವಿಂದಪ್ಪ ತಳವಾರ