Advertisement
ನವ್ಯತೆಯ ವ್ಯಾಖ್ಯಾನವನ್ನು ಬಯಸಿದವರಿಗೆ ಯಾವುದೋ ವೇದಾಂತದ ವ್ಯಾಖ್ಯಾನದಂತೆ ಈ ಮಾತುಗಳು ಕಳಿಸಿದರೂ, ಅನುಭವದ ತದ್ರೂಪವಾಗಬಲ್ಲ ಯೋಗ್ಯತೆಯ ಪದವೊಂದಕ್ಕಾಗಿ ಕಾಯುವ ಸಹನೆ, ಕವಿಗೆ, ಬದುಕು-ಸಾವುಗಳ ಸಂಬಂಧದ ಪಾಠವೇ ಆಗಿಬಿಟ್ಟಿದೆ. “”ಇಂದಿನವರ ಮೌಲ್ಯ ನಾಳಿನವರು ಕಟ್ಟಬೇಕು ಸ್ವಾಮಿ; ನಾವು ಉಣ್ಣುವುದು ನಿನ್ನಿನ ಫಲ” ಎಂದು ಬೇಂದ್ರೆಯವರು ಹೇಳಿದ್ದು ನೆನಪಾಗುತ್ತದೆ. ನವೋದಯ ಮತ್ತು ನವ್ಯ-ಕನ್ನಡ ಕಾವ್ಯದ ಈ ಎರಡು ವಿಭಿನ್ನ ನಡೆಗಳು ಹೇಗೆ ಕೆಲವೆಡೆ ಪರಸ್ಪರ ಸೇರಿಕೊಳ್ಳುತ್ತವೆ ಎಂದು ವಿಸ್ಮಯವಾಗುತ್ತದೆ.
ಆರು ಕಂಡವರು ತೋರಿರಯ್ನಾ
ಊರಿಗೆ ದೂರುವೆನಗುಸೆಯನಿಕ್ಕುವೆ;
ಅರಸುವೆನೆನ್ನ ಬೇಂಟೆಯ
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು
ಅರಸಿಕೊಡಾ-ಚೆನ್ನಮಲ್ಲಿಕಾರ್ಜುನ
ಅದ್ಭುತ ವಚನವಿದು. ಮೊದಲಿಗೆ ಬೇಟೆಯ ಸುದ್ದಿಯನ್ನು ಹೇಳುವಳು ಅಕ್ಕ. ಬೇಂಟೆಯೊಂದು ಬಿದ್ದರೆ ಊರೆಲ್ಲ ಅತ್ತ ನುಗ್ಗುವುದು. ಇಲ್ಲಿ ಊರ ನಡುವೆಯೇ ಬೇಂಟೆ ಬಿದ್ದಿದೆ. ಆದರೆ ಕಂಡವರು ಮಾತ್ರ ಯಾರೂ ಇಲ್ಲ. ಏಕೆ ಈ ಸುದ್ದಿಯನ್ನಾದರೂ ಅಕ್ಕ ಹೇಳುವಳು? ಏಕೆಂದರೆ-ಯಾರು ಈ ಬೇಟೆಯನ್ನು ಕಂಡರೋ ಅದು ಅವರದೇ ಆಗಿಬಿಡುವುದು! ಹೊಡೆದವರದಲ್ಲ ಬೇಟೆ! ಹೊಡೆದುದನ್ನು ಕಂಡವರದು! ಆದರೆ ಕಂಡವರಿಲ್ಲ! ಆದುದರಿಂದ ತಾನೇ ಬೇಟೆಯನ್ನು ಅರಸುವೆನೆನ್ನುವಳು. ಬೇಟೆಯೊಂದು ಬಿದ್ದದ್ದು ಗೊತ್ತಾಗಿ ಅದನ್ನು ಅರಸುವ ಪ್ರಾಮಾಣಿಕತೆ ಇದ್ದರೆ ಸಾಕು, ಇಷ್ಟು ಸೂಕ್ಷ್ಮತೆ ಇದ್ದರೆ ಸಾಕು-ಬೇಟೆ ಅವರದೇ ಆಗಿಬಿಡುವುದು! ಇಷ್ಟಾದ ಮೇಲೆ ಈಗ ಹೇಳುವಳು- ಅದು ನನ್ನದೇ ಬೇಂಟೆ ಎಂದು! ಏಕೆ ಇದನ್ನು ಮೊದಲೇ ಹೇಳಿಲ್ಲ? ಏಕೆಂದರೆ ಇದು ಅರಿತು ಆಡಿದ ಬೇಟೆ ಎನ್ನುವಂತಿಲ್ಲ. ಹಾಗೆಂದು ಪೂರ್ತಿ ಅರಿಯದ್ದೂ ಅಲ್ಲ. ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು.
Related Articles
ಯಾವುದಕ್ಕೋ ಕಾದು ಮರಸು ಕೂತು ಬಂದ ಇನ್ನಾವುದೋ ಮೃಗಕ್ಕೆ ಈಡು ಹೊಡೆದಂತೆ, ಇದು ತಾನು ಕಾದುಕೂತ ಮೃಗ ಹೌದೋ ಅಲ್ಲವೋ ಎಂದು ಎಂದೆಂದೂ ತಿಳಿಯಲಾಗದ ಸ್ಥಿತಿಯಲ್ಲಿ ಬೇಟೆ ಸಂಭವಿಸಿದಂತೆ, ನಮ್ಮ ಒಳಮನದ ಗುಟ್ಟುಗಳು ನಮಗೆ ತಿಳಿದಾಗ ಇತರರ ಗುಟ್ಟುಗಳೂ ತಿಳಿದುಬರುವಂತೆ, ನಮ್ಮ ಗುಟ್ಟುಗಳೇನು ಎನ್ನುವುದು ಅವು ಪ್ರಕಟವಾದಾಗಲೇ ತಿಳಿದುಬರುವುದಲ್ಲದೆ- ಪ್ರಕಟಿಸುವಂತೆ ಮಾಡುವುದು ನಮ್ಮ ಕೈಯಲ್ಲಿರುವ ಸಂಗತಿಯಲ್ಲವೆನ್ನುವಂತೆ ಭೂತದಲ್ಲಿ ಭವಿಷ್ಯವಡಗಿರುವುದು ತಿಳಿದುಬಂದಂತೆ- ಹೀಗೆ ಅನೇಕ ಅರ್ಥ ಪರಂಪರೆಗಳನ್ನು ಸೃಜಿಸುವ ವಚನವಿದು.
Advertisement
ಕಾವ್ಯದ ಅರ್ಥ ಯಾರಿಗೆ ಹೊಳೆಯಿತೋ- ಆ ಕಾವ್ಯ ಅವನದೇ ಆಯಿತು ಎಂದರೆ ತಪ್ಪೇನು? ಕಾವ್ಯದಲ್ಲಿಯೇ ತಾನು ಎತ್ತಿಕೊಂಡವರ ಕೈಗೂಸು ಎನ್ನುವ ತಬ್ಬಲಿತನವಿರಬೇಕು; ಅಂಥ ಆಸ್ಪದವಿರಬೇಕು; ಮುಂದಿನ ಕಾಲವನ್ನೂ ತನ್ನೊಳಗಿಟ್ಟುಕೊಂಡ ಕವಿತೆಯಲ್ಲಿ ಇಂಥ ಕೈಗೂಸುತನ ಸಹಜವಲ್ಲವೆ? ಬೇಟೆಯನ್ನು ಯಾರು ಕಂಡನೋ ಬೇಟೆ ಅವನದೇ ಆಗುತ್ತದೆ ಎನ್ನುವ ಮಾತಿನ ಅರ್ಥವಿದು! “ನಿಮ್ಮ ಕವಿತೆ ಅರ್ಥವಾಗಲೊಲ್ಲದು. ಸ್ವಲ್ಪ ಬಿಡಿಸಿ ಹೇಳ್ರಿ’ ಎಂದೊಬ್ಬರು ಬೇಂದ್ರೆಯವರನ್ನು ಕೇಳಿದರಂತೆ. “ನನಗೇನು ಗೊತ್ತದ? ನಾ ಬೇಂದ್ರೆ. ನಿಮ್ಮಷ್ಟೇ ನನಗ್ಗೊತ್ತು. ಹೋಗಿ ಅಂಬಿಕಾತನಯದತ್ತನನ್ನ ಕೇಳಿ’-ಎಂದರಂತೆ ಬೇಂದ್ರೆ! ಇದು ಅರ್ಧ ತಮಾಷೆ-ಅರ್ಧ ಸತ್ಯ. ಅರ್ಧ ಸ್ವ-ಪಲಾಯನ ವಾದ. ಅರ್ಧ-ಪರ ಪಲಾಯನವಾದ. ಬೇಂದ್ರೆ ನಾನೊಬ್ಬನೇ. ಆದರೆ ಅಂಬಿಕಾತನಯದತ್ತ ನಿಮ್ಮಲ್ಲೂ ಇರಬಹುದು- ಎಂದಂತೆಯೂ ಒಂದಂತೂ ನಿಜ. ಅತ್ಯುತ್ತಮ ಕವಿತೆ ಅದನ್ನು ಎದೆಯಲ್ಲಿ ಹಾಕಿಕೊಂಡವರ ಸೊತ್ತು; ಬಿತ್ತು! ಮತ್ತೆ ಅಕ್ಕನ ವಚನಕ್ಕೆ ಮರಳಿದರೆ- ಅಕ್ಕ ಹೇಳುತ್ತಿರುವುದು, ತಾನು ಸಂಸಾರವನ್ನೇ ಬೇಟೆಗೊಂಡೆ. ಅದನ್ನೀಗ ನೀನು (ಚೆನ್ನ ಮಲ್ಲಿಕಾರ್ಜುನ) ಹೌದೆನ್ನಬೇಕು. ಏಕೆಂದರೆ ನಿನಗೊಬ್ಬನಿಗೇ ಅದು ತಿಳಿದೀತು. ತನಗೂ ಪೂರ್ತಿ ತಿಳಿದಿಲ್ಲ. ಅರಿತು-ಅರಿಯದೆ ಆಡಿದ ಬೇಟೆ ತಿಳಿದೀತು ಹೇಗೆ? ತಿಳಿಯಿತು, ನಾ ತಿಳಿದುಬಿಟ್ಟೆ ಎನ್ನುವುದೇ ಸಂಸಾರ. ಇದೇ ಸಂಸಾರದ ಭಾಷೆ. ಈ ಭಾಷೆಯಲ್ಲಿ ಸಾಕ್ಷಿ ನುಡಿವ ಜನ ಸಂಸಾರದ ತುಂಬ ಇದ್ದಾರೆ. ಅರಿತು-ಅರಿಯದೆ ನಡೆದುದಕ್ಕೆ ಸಾಕ್ಷಿ ನೀನೊಬ್ಬನೇ. ನೀನು ಮಾತ್ರ ಅಂಥ ಸೂಕ್ಷ್ಮಜ್ಞ ! ನೀನು ಸಾಕ್ಷಿ ನುಡಿದರೆ ನನ್ನ ಜೊತೆ ನೀನೂ ಬೇಟೆಯಲ್ಲಿ ಪಾಲ್ಗೊಂಡುದನ್ನು ನಾ ನಂಬುವೆ ಎನ್ನುವಳು ಅಕ್ಕ. ಅರಿತು ಮಾತಾಡಿ ಎಂದು ಬೊಬ್ಬಿರಿವ ಜನರ ನಡುವೆ ಅರಿತು-ಅರಿಯದೆ ಮಾತಾಡುವುದೇ ಕಾವ್ಯ ಎಂದು ಅಕ್ಕ ಬಲ್ಲಳು, ನಿಜವಾದ ಕವಿಗಳು ಬಲ್ಲರು.
ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನ ಸಾಕ್ಷಿ ಬೇಕು. ಅಂದರೆ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ “ನಾನು’ವಿಗೆ “ನೀನು’ ಬೇಕು. ನಾನು- ನೀನು ಈ ಎರಡು ಸಾಕು. ನವೋದಯ ಸಂದರ್ಭದಲ್ಲಿ ನಾನು-ನೀನು ಎನ್ನುವ ಎರಡು ಪರಿಕಲ್ಪನೆಗಳು ಗಂಡು-ಹೆಣ್ಣುಗಳನ್ನು ಸಂಕೇತಿಸಿ ಹೆಚ್ಚಾಗಿ ಪ್ರಣಯದ ಆವರಣವನ್ನು ಸೃಜಿಸುತ್ತದಾದರೆ ಅಡಿಗರಲ್ಲಿ ಪ್ರೇಮ-ಕಾಮಗಳನ್ನು ಒಳಗೊಂಡು ಇನ್ನಷ್ಟು ಆಳದ ಸ್ತರಗಳತ್ತ ಸಾಂದ್ರವಾಗಿ ಹಬ್ಬುವುದನ್ನು ನೋಡುತ್ತೇವೆ. ಅದಕ್ಕಿಂತ ಮುನ್ನ ಬೇಂದ್ರೆಯವರನ್ನು ನೋಡಬೇಕು. ಬೇಂದ್ರೆಯವರಲ್ಲಿ ನಾನು-ನೀನು ಮತ್ತೆರಡು ಟಿಸಿಲೊಡೆದು ಆನು-ತಾನುಗಳಾಗಿ “ನಾಕುತಂತಿ’ಯ ಮಿಡಿತವಾಗುತ್ತದೆ. ಬೇಂದ್ರೆಯವರದು ಹೆಚ್ಚಾಗಿ ಚತುರಶ್ರ ನಡೆ. ಉಪನಿಷತ್ತು ಹೇಳಿತ್ತು: “ಸೋ—ಯಮಾತ್ಮಾ ಚತುಷ್ಪಾತ್’-ಆತ್ಮನಿಗೆ ನಾಲ್ಕು ಪದಗಳು-ಎಂದು. ಎಚ್ಚರ, ಕನಸು, ನಿದ್ದೆಗಳೆಂಬ ಇಂದ್ರಿಯಾನುಭವ ವೇದ್ಯವಾದ ಮೂರು ಮತ್ತು ಈ ಮೂರನ್ನೂ ಒಳಗೊಂಡು ಅದರಾಚೆಗೆ ದಾಟಿಕೊಂಡ, ನಾಲ್ಕನೆಯದು ಎನ್ನುವುದೇ ಅರ್ಥವಾದ “ತುರೀಯ’ ಎಂಬ ಪ್ರಜ್ಞಾಸ್ತರ. ಆದುದರಿಂದ, ಎಚ್ಚರ-ಕನಸುಗಳೆಂಬ ಸ್ತರಗಳು ಕಾವ್ಯದಲ್ಲಿ ಒಂದುಗೂಡಬೇಕೆನ್ನುವ ತುಡಿತ ಉಪನಿಷತ್ತಿಗೆ ಹತ್ತಿರವೇ ಇದೆ. ಅದಿರಲಿ. ಸೌಂದರ್ಯಾನುಭವದ ನಾಲ್ಕು ಸ್ತರಗಳನ್ನು ಹೇಳುವ ಅರವಿಂದರ ಪ್ರೇರಣೆಗಳೂ ಕಾರಣವಾಗಿ ಬೇಂದ್ರೆಯವರು ಚತುರ್ಮುಖ ಸೌಂದರ್ಯೋಪಾಸಕರು. ಇವೆಲ್ಲ ಈಗಾಗಲೇ ಹಳತಾದ ವಿಷಯಗಳೇ ಸರಿ. ಕಲ್ಪವೃಕ್ಷ ವೃಂದಾವನಂಗಳಲಿ ಕವಿತೆಯಲ್ಲಿ ಬರುವ, ಅಲ್ಲಿ ಎಲ್ಲರಿಗೆ ನಾಲ್ಕು-ಕೈಗಳ್ಳೋ-ಮಾಟ ತಪ್ಪದಿಹವು ಎನ್ನುವಲ್ಲಿಯೇ ನಾಲ್ಕರ ಹೊಳಹು ಇದೆ. ನಿಜ. ಆದರೆ, ನಾವು ಉಣ್ಣುವುದು ನಿನ್ನಿನ ಫಲ ಎಂದು ಬೇಂದ್ರೆಯವರು ಹೇಳಿದ್ದನ್ನು ಇನ್ನೊಮ್ಮೆ ಕೇಳಿಸಿಕೊಂಡು-ಏನೋ ಹೊಳೆದಂತಾಗಿ-ಬೇಂದ್ರೆಯವರ ನಾಕುತಂತಿಗೆ ಪ್ರೇರಣೆ ಎಲ್ಲಿರಬಹುದು ಎಂದು ತುಸು ಹುಡುಕಾಡಿದೆ. ಅಕ್ಕನ ವಚನವೊಂದರಲ್ಲಿ ಆನು-ತಾನು- ನಾನು-ನೀನು ಬಂದಿರುವುದು ನೋಡಿದೆ. ಆಶ್ಚರ್ಯವಾಯಿತು. ಒಂದು ಉಪಮಾನದ ನಡುವೆ ಬಂದಿವೆ. ವಚನ ಹೀಗಿದೆ:
ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆತನ್ನ ನೆಳಲಿಂಗೆ ತಾನೇ ಹೋರಿ ಸಾವಂತೆ
ಆನೆಯ ಗತಿ, ಆನೆಯ ಮತಿ.
ಆನೆಯಹುದು-ಆನೆಯಲ್ಲ, ಅದನೇನೆಂಬೆ !
ನೀನೆನ್ನ ಕರಸ್ಥಲದಲ್ಲಿ ಸಿಲುಕಿದೆಯಾಗಿ ನೀ ನಾನೆಂಬ ಭಾತೇಕೆ? ನಾನು ನೀನಲ್ಲದೆ ತೆರಹಿಲ್ಲ-ಚೆನ್ನಮಲ್ಲಿಕಾರ್ಜುನ.
ಈ ವಚನವನ್ನೀಗ ಅರ್ಥವಿಸಲು ಹೊರಡುತ್ತಿಲ್ಲ. ಆದರೆ ಆನೆಯ ಗತಿ, ಆನೆಯ ಮತಿ ತನ್ನದೇ ಗತಿಮತಿಯಾದುದರಿಂದ ಆನೆ ಎಂದರೆ ಆನು ಎಂದಂತೆಯೇ. ಆಗ ಆನು-ತಾನು-ನೀನುಗಳೆಲ್ಲ ಏಕತ್ರ ಈ ಒಂದು ವಚನದಲ್ಲಿ ಕಾಣಿಸಿಕೊಂಡವು. ಮಾಟ ತಪ್ಪದೆ ನಾಲ್ಕು ಸರ್ವನಾಮಗಳೂ ಏಕತ್ರ ಮೇಳೈಸಿದವು. ಇದು ಬೇಂದ್ರೆಯವರಿಗೆ ಮೂಲವಿರಬಹುದೆ? ಪ್ರೇರಕವಿರಬಹುದೆ? ಆದರೆ ಈ ಕುರಿತು ಎಲ್ಲೋ ನಾನಾಡಿದ ಮಾತುಗಳನ್ನು ಕೇಳಿಸಿಕೊಂಡ ನನ್ನ ಕಿರಿಯ ಮಿತ್ರ ರಾಕೇಶ್ ಇನ್ನಷ್ಟು ಸ್ಪಷ್ಟವಾಗಿ ನಾನು-ನೀನು-ಆನು-ತಾನುಗಳ ಬಳಕೆಯಾದ ದಾಸರ ಕೀರ್ತನೆಯೊಂದಿದೆ ಎಂದು ರಂಗೇಶವಿಠಲ ದಾಸರ ಕೀರ್ತನೆಯೊಂದನ್ನು ಓದಿಸಿದರು. ಈ ಕೀರ್ತನೆ ಇದು: ಅದರೊಂದು ಸೊಲ್ಲು. ಸಕಲ ಕರ್ಮಗಳ ಮಾಡಿ ಮಾಡಿಸುವೆ ನೀನು
ವಿಕಳ ಮತಿಗಳಿದನರಿಯರೇನೆಂಬೆ ನಾನು
ತೇನ ವಿನಾ ತೃಣಮಪಿ ನಚಲತಿ’ ಎಂಬುದನು
ಆನು ಪೂರ್ವಕದಿಂದ ತಿಳಿದು ತಿಳಿಯದಂತೆ
ತಾನು ಪುಣ್ಯ ಕರ್ಮಗಳನು ಮಾಳ್ಪವನೆಂದು
ನೀನು ಪಾಪಕೆಳಸುವೆನೆಂಬರಧಮ ಜನರು
ಕೀರ್ತನೆಯ ಅರ್ಥ ಪ್ರಸ್ತುತಿ ಏನೂ ವಿಶೇಷವಾಗಿ ಬೇಕಿಲ್ಲ. ಮೂರು ಬಗೆಯ, ಅಧಮ-ಮಧ್ಯಮ-ಉತ್ತಮ ವ್ಯಕ್ತಿತ್ವದ ಜನ ಇದ್ದಾರೆ ಎನ್ನುತ್ತದೆ ಕೀರ್ತನೆ. ಮತ್ತು ಮುಖ್ಯವಾಗಿ ದೇವರನ್ನು “ನೀನು’ ಆಗಿಸಿ, ಮೂರು ಬಗೆಯ ಜನರನ್ನು ಸೂಚಿಸಲು “ನಾನು’ ಎನ್ನುವುದನ್ನೆ ಮತ್ತೆ ಮೂರಾಗಿಸಿದೆ. ನಾನು-ಆನು-ತಾನಾಗಿಸಿದೆ. ಆಗಿಸಿ, ಒಂದರಿಂದ ಇನ್ನೊಂದು ವಿಶಿಷ್ಟ ಎಂದೂ ಸೂಚಿಸಿದೆ. ವಿಶಿಷ್ಟವಾಗಿಯೂ ಈ ಮೂರೂ “ನಾನು’ವಿನದೇ ಮೂರು ಮುಖಗಳಂತೆ ಎಂದೂ ಹೇಳುತ್ತದೆ. “ನೀನು’ ಇದ್ದರೆ ಮಾತು ಉಳಿದ ಈ ಮೂರೂ ಇವೆ, ಎನ್ನುತ್ತ, “ನೀನೂ’ ಸೇರಿ ಇವೆಲ್ಲ ಒಂದೇ ವಾದ್ಯದ ನಾಕುತಂತಿಗಳಂತೆ- ಎಂದು ಧ್ವನಿಸುತ್ತದೆ; ನಾಕುತಂತಿ ಎಂಬ ಪದವಿಲ್ಲದಿದ್ದರೂ.
ಇಲ್ಲೂ “ತಿಳಿದು ತಿಳಿಯದಂತೆ’ ಎಂಬ ಪದಗಳಿವೆ. ಅಕ್ಕನ ವಚನದ “ಅರಿತು ಅರಿಯದೆ’ ನೆನಪಾಯಿತು. ಅಕ್ಕನ ವಚನದಲ್ಲಿ ಅದು ಮುಗ್ಧತೆಗೆ ಸೂಚಕವಾದ ಪದ. ಕೀರ್ತನೆಯಲ್ಲಿಯಾದರೋ “ತಿಳಿದು ತಿಳಿಯದಂತೆ’ ಎಂಬುದು ಅಜ್ಞಾನವನ್ನು , ಮರೆವನ್ನು ಸೂಚಿಸುವ ಪದ. ಒಂದೇ ಅರ್ಥದ ಪದಗಳಾದರೂ ಸ್ತರಗಳ ವ್ಯತ್ಯಾಸದಿಂದ ಅರ್ಥಗಳೇ ಬೇರೆಯಾದವು! “ನಾನು’ ಎನ್ನುವ ತಂತಿಯನ್ನು ಮಿಡಿದರೆ “ನೀನು’ ಎನ್ನುವ ಅರ್ಥ ತರಂಗವು ಚಿಮ್ಮಬಹುದು. ಅಥವಾ ನಾನು-ಆನು-ತಾನುಗಳೆಂಬ ಯಾವ ತರಂಗಗಳಾದರೂ ಹೊಮ್ಮಬಹುದು. ಕವಿತೆಯು ಎದುರಿಸುವ ಸವಾಲುಗಳಿಗೆ ಕೊನೆ ಎಲ್ಲಿ? ಲಕ್ಷ್ಮೀಶ ತೋಳ್ಪಾಡಿ