Advertisement
ನಾನು ಬಡವರ ಮನೆಯ ಹುಡುಗಿ. ಸ್ವಲ್ಪ ಕುಳ್ಳಗಿದ್ದೆ. ಸ್ವಲ್ಪ ಕಪ್ಪಗಿದ್ದೆ. ನನ್ನ ಅಪ್ಪ- ಅಮ್ಮ ಇಬ್ರೂ ಕೂಲಿ ಕೆಲಸಕ್ಕೆ ಹೋಗ್ತಿದ್ರು. ಇಬ್ಬರಿಗೂ ವಾರಕ್ಕೊಮ್ಮೆ ಸಂಬಳ ಸಿಗುತ್ತಿತ್ತು. ದಿನವೂ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ಹಾಗಾಗಿ, ಕೆಲಸ ಇದ್ದ ದಿನ ರೊಟ್ಟಿ ಅಥವಾ ಅನ್ನ ತಿನ್ನುವುದು, ಉಳಿದ ದಿನಗಳಲ್ಲಿ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳುವುದು ನಮಗೆ ಅಭ್ಯಾಸವಾಗಿ ಹೋಗಿತ್ತು.
Related Articles
Advertisement
ದಿನಗಳು, ವಾರಗಳು, ತಿಂಗಳುಗಳು ಹೀಗೇ ಉರುಳುತ್ತಾ ಇದ್ದವು. ಆಗಲೇ ನಮ್ಮ ಬಂಧುವೊಬ್ಬರು ಗಡಿಬಿಡಿಯಿಂದ ಮನೆಗೆ ಬಂದು- “ಒಬ್ಬ ಹುಡುಗ ಬಂದಿದಾನೆ. ಊರಿಂದಾಚೆ ಇರುವ ಮರದ ಕೆಳಗೆ ಕುಳಿತಿದ್ದಾನೆ. ಅಲ್ಲಿಗೇ ನೀನೂ ಬಾ. ಅವನೊಮ್ಮೆ ನಿನ್ನನ್ನು ನೋಡಬೇಕಂತೆ. ಅವನಿಗೆ ಒಪ್ಪಿಗೆಯಾದ್ರೆ ಮುಂದುವರಿಯೋಣ. ನೀನು ಬೇಗ ರೆಡಿಯಾಗು’ ಅಂದರು! ವಧುಪರೀಕ್ಷೆಯ ಕಾರಣಕ್ಕೆ ಅಲಂಕಾರ ಮಾಡಿಕೊಂಡು ಅಷ್ಟು ದೂರ ಹೋಗಿ ಅವನ ಮುಂದೆ ನಿಲ್ಲುವುದಾ? ಇಂಥದಕ್ಕೆಲ್ಲ ನಾನು ರೆಡಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟೆ. ಆಗ ನನ್ನ ಬಂಧು ಹೇಳಿದ್ರು: “ನೋಡೂ, ಅವನು ಮನೆಗೇ ಬಂದ್ರೆ ಕಾಫಿ, ತಿಂಡಿ ಎಂದೆಲ್ಲಾ ಖರ್ಚು ಬರುತ್ತೆ. ಕೂಲಿ ಕೆಲಸದಿಂದ ಬದುಕುವ ನಮಗೆ ಇಷ್ಟು ಖರ್ಚು ಭರಿಸುವುದೂ ಕಷ್ಟಾನೇ. ಮಿಗಿಲಾಗಿ, ಹುಡುಗ ಮನೆಗೇ ಬಂದು ಹೋದರೆ ಅದನ್ನು ಹತ್ತು ಮಂದಿ ಗಮನಿಸ್ತಾರೆ. ನಾಳೆಯಿಂದಾನೇ ತಮ್ಮ ಮೂಗಿನ ನೇರಕ್ಕೇ ಕಾಮೆಂಟ್ ಶುರುಮಾಡ್ತಾರೆ. ಇಂಥದೇನೂ ಆಗಬಾರ್ಧು ಅನ್ನುವುದಾದ್ರೆ ಊರಾಚೆಗೆ ಇರುವ ಮರದ ಬಳಿಗೆ ಒಮ್ಮೆ ಹೋಗಿ ಬಾ. ಹುಡುಗ ಏನಾದ್ರೂ ಕೇಳಿದ್ರೆ ನಿನಗೆ ತೋಚಿದಂತೆ ಉತ್ತರ ಹೇಳು…’
ಇರಲಿ. ಇದೂ ಒಂದು ಪರೀಕ್ಷೆ ಆಗಿಯೇ ಹೋಗಲಿ ಎಂದು ನಿರ್ಧರಿಸಿಕೊಂಡು, ಲಗುಬಗೆಯಿಂದಲೇ ಪೌಡರ್ ಮೆತ್ತಿಕೊಂಡು, ಸಾಕ್ಸ್ ಧರಿಸಿ ಹೊರಟೆ. ಹುಡುಗ ಯಾವ ಕಲರ್‌ನ ಶರ್ಟ್ ಹಾಕಿದ್ದಾನೆ, ಎಲ್ಲಿ ಕುಳಿತಿದ್ದಾನೆ ಎಂಬುದನ್ನು ನನ್ನ ಬಂಧು ಮೊದಲೇ ತಿಳಿಸಿದ್ದರು. ನನ್ನಿಂದ ಬಹಳ ದೂರದಲ್ಲಿ ಅವರು ನಿಂತಿದ್ದರು. ಪರಿಚಯವೇ ಇಲ್ಲದವನನ್ನು ದಿಟ್ಟಿಸಿ ನೋಡುವುದಾದರೂ ಹೇಗೆ? ಈ ಹುಡುಗ ಬೇಗ ಮಾತಾಡಿ ಕಳಿಸಬಾರದೆ ಅಂದುಕೊಂಡೆ. ಅದೇ ವೇಳೆಗೆ ಅವನೊಮ್ಮೆ ನನ್ನ ಕಾಲುಗಳತ್ತ ನೋಡಿದ. ಓಹೋ, ಉಳಿದವರಂತೆ ಇವನೂ ಕಾಲಲ್ಲಿ ಎಲ್ಲಾ ಬೆರಳೂ ಇದ್ದಾವಾ? ಏನಾದ್ರೂ ಚರ್ಮದ ಕಾಯಿಲೆ ಇದೆಯಾ ಎಂಬ ಪ್ರಶ್ನೆ ಕೇಳಬಹುದು ಎಂದುಕೊಂಡೇ ಇದ್ದೆ. ಆಗಲೇ ಅವನು- “ಅಲ್ಲಾರೀ, ಮನೇಲಿ ಇರುವಾಗ, ಮನೆಯಿಂದ ಆಚೆಗೆ ಹೋಗುವಾಗ ಕೂಡ ಬರೀ ಸಾಕ್ಸ್ ಹಾಕಿಕೊಂಡು ಬಂದಿದೀರಲ್ಲ? ಅದನ್ನು ಧರಿಸಿ ನಡೆಯುವಾಗ ಸೊಟ್ಟಂಪಟ್ಟ ಕಾಲು ಹಾಕಿದಂತೆ ಆಗಲ್ವ? ಹೀಗೇ ಅಷ್ಟು ದೂರ ನಡೆದ್ರೆ ಅದೊಂದು ಡ್ಯಾನ್ಸ್ ಥರಾ ಕಾಣಿಸಲ್ವ?’ ಅಂದುಬಿಟ್ಟ.
ಹುಡುಗನಿಂದ ವ್ಯಂಗ್ಯದ ಮಾತು ಅಥವಾ ದರ್ಪದ ಪ್ರಶ್ನೆಯನ್ನು ನಿರೀಕ್ಷಿಸಿದ್ದ ನನಗೆ, ಅವನ ಈ ಹೊಸಬಗೆಯ ಮಾತು ಕೇಳಿ ಥ್ರಿಲ್ ಆಯಿತು; ಈ ಸಾಕ್ಸ್ ಹಾಕ್ಕೊಂಡು ಅಷ್ಟು ದೂರ ನಡೆದ್ರೆ ಅದು ಡ್ಯಾನ್ಸ್ ಥರಾ ಕಾಣಿಸುತ್ತೆ ಅಂದನಲ್ಲ? ಆ ಮಾತು ಕೇಳಿ ವಿಪರೀತ ನಗು ಬಂತು. ಅವನೊಂದಿಗೆ ಇದು ಮೊದಲ ಭೇಟಿ ಎಂಬುದನ್ನೂ ಮರೆತು ಕಿಲಕಿಲನೆ ನಕ್ಕುಬಿಟ್ಟೆ.
ಎರಡು ನಿಮಿಷ ಸುಮ್ಮನಿದ್ದ ಅವನು ನಂತರ- “ನನ್ನನ್ನು ಏನಾದ್ರೂ ಕೇಳುವುದಿದ್ರೆ ಕೇಳಿ’ ಅಂದ! ಈ ಮಾತು ಕೇಳಿ ನನಗಂತೂ ಮಾತೇ ಹೊರಡಲಿಲ್ಲ. ಏಕೆಂದರೆ, ಅದುವರೆಗೂ ಯಾರೊಬ್ಬರೂ ನನಗೆ ಇಂಥ ಮಾತು ಹೇಳಿರಲಿಲ್ಲ. ಹೆಣ್ಣು ನೋಡುವ ನೆಪದಲ್ಲಿ ಬಂದವರೆಲ್ಲ ನನ್ನಲ್ಲಿ “ಐಬು’ಗಳನ್ನು ಹುಡುಕುತ್ತಿದ್ದರು. ನಿಮ್ಮಪ್ಪ ಎಷ್ಟು ಸಂಪಾದನೆ ಮಾಡಿದ್ದಾರೆ? ನೀನು ಎಷ್ಟು ದುಡಿಯಬಲ್ಲೆ ಎಂದೆಲ್ಲಾ ಕೇಳಿ, ವ್ಯಂಗ್ಯದ ಮಾತಾಡಿ ಹೋಗಿಬಿಡುತ್ತಿದ್ದರು. ಆದರೆ, ಈ ಹುಡುಗ “ವರಪರೀಕ್ಷೆ’ಗೇ ಸಿದ್ಧವಾಗಿ ಬಂದಿದ್ದ. ಯಾವ ಪ್ರಶ್ನೆ ಇದ್ರೂ ಕೇಳಿಬಿಡು ಅಂದಿದ್ದ.
“ನೀನು ಮದುವೆಯಾಗುವ ಹುಡುಗಿ ಹೇಗಿರಬೇಕು?’- ಕಡೆಗೂ ನಾನು ಈ ಪ್ರಶ್ನೆ ಕೇಳಿಬಿಟ್ಟೆ. ಅವನು, ಯಾವುದೇ ಹಿಂಜರಿಕೆಯಿಲ್ಲದೆ- “ನಿನ್ನ ಥರಾ ಮುಗ್ಧವಾಗಿ, ಮುಕ್ತವಾಗಿ ನಗುವ ಹುಡುಗಿ ಬೇಕು ನನಗೆ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನೊಂದಿಗೆ ಅಮ್ಮ ಇದ್ದಾಳೆ. ಕೂಲಿ ಕೆಲಸ ಮಾಡ್ತೇನೆ. ಮೂರು ಜನಕ್ಕೆ ಮೂರು ಹೊತ್ತಿನ ಅನ್ನ ಸಂಪಾದನೆಗೆ ಶಕ್ತಿಯಿದೆ. ಮೂಡ್ ಬಂದಾಗ ಅಡುಗೆ ಕೂಡ ಮಾಡ್ತೇನೆ. ಹಳೆಯ ಚಿತ್ರಗೀತೆಗಳನ್ನು ಒಬ್ಬನೇ ಹಾಡಿಕೊಂಡು ಖುಷಿಪಡೋದು ನನಗಿರುವ ದುರಭ್ಯಾಸ…’ ಅಂದ. ಒಂದು ಕ್ಷಣ ಸುಮ್ಮನಿದ್ದು, ನಂತರ- “ನಿನಗೆ ನಾನು ಇಷ್ಟವಾಗಿದೀನಿ ಅನ್ನೋದಾದ್ರೆ ಹೇಳು. ನಾಡಿದ್ದು ಅಮ್ಮನನ್ನು ನಿಮ್ಮ ಮನೆಗೆ ಕಳಿಸ್ತೇನೆ’ ಎಂದು ಮುಗುಳ್ನಕ್ಕ!
ನಂತರದ ನಾಲ್ಕೇ ತಿಂಗಳಲ್ಲಿ ನಮ್ಮ ಮದುವೆಯಾಯಿತು. ಮದುವೆಯ ಗಿಫ್ಟ್ ಅಂತ ನನ್ನ ಗಂಡ ಕೊಡಿಸಿದ್ದೇನು ಗೊತ್ತೇ? ಒಂದು ಜೊತೆ ಚಪ್ಲಿ! ಅವನ್ನು ಎದುರಿಗಿಟ್ಟು, “ನಾಳೆಯಿಂದ ಈ ಶೂ, ಸಾಕ್ಸ್‌ನ ಹಾಕ್ಕೋಬೇಡ. ಅವನ್ನು ತೆಗೆದು ಮೂಲೆಗೆ ಬಿಸಾಕು’ ಎಂದ. ಹಾಗೆಯೇ ಮಾಡಿದೆ.
ಈಗ, ನಾವಿಬ್ರೂ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗ್ತೀವೆ. ಮನೇಲಿ ಅಮ್ಮ ಇರ್ತಾರೆ. ಆಕೆ ನಮ್ಮಿಬ್ಬರಿಗೂ ಅಮ್ಮ. ಬೆಳಗ್ಗೆ ಇಬ್ಬರೂ ಒಟ್ಟಿಗೇ ತಿಂಡಿ ತಿಂದು, ಬಾಕ್ಸ್ ರೆಡಿ ಮಾಡಿಕೊಂಡು- “ಅಮ್ಮಾ ಹುಷಾರೂ…’ ಎಂದು ಒಟ್ಟಿಗೇ ಹೇಳಿ ಕೈಕೈ ಹಿಡಿದು ನಡೆದುಹೋಗ್ತೀವೆ. ಸಂಜೆ ಕೆಲ್ಸ ಮುಗಿಯುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತೆ. ಎಷ್ಟೋ ಬಾರಿ ನಾಲ್ಕು ಹೆಜ್ಜೆ ನಡೆಯುವ ತ್ರಾಣವೂ ಇರೋದಿಲ್ಲ. ಆಗೆಲ್ಲಾ “ಇವನು’ ಹಳೆಯ ಹಾಡುಗಳನ್ನು ಹೇಳುತ್ತಾ ಕೈ ಹಿಡಿದು ಬಿಡದೇ ನಡೆಸುತ್ತಾನೆ. ಆಗ, ದಾರಿ ಸವೆದಿದ್ದೇ ತಿಳಿಯೋದಿಲ್ಲ. ಮೂರು ಹೊತ್ತಿನ ಊಟ, ಕಣ್ತುಂಬಾ ನಿದ್ರೆ- ಇದಿಷ್ಟು ಸಿಕ್ಕಿದ್ರೆ ಸಾಕು ಎಂಬುದೇ ನಮ್ಮ ಜೀವನಸೂತ್ರ ಆಗಿರುವುದರಿಂದ, ನಮಗೆ ಯಾವುದೇ ಚಿಂತೆಯಾಗಲಿ, ಸಂಕಟವಾಗಲಿ, ಭಯವಾಗಲಿ ಜೊತೆಯಾಗಿಲ್ಲ. ನಾವು ಖುಷ್‌ಖುಷ್‌ಯಾಗಿ ಇದೀವಿ!…
(ಬಾಂಗ್ಲಾದೇಶದ ಪ್ರಸಿದ್ಧ ಛಾಯಾಚಿತ್ರಕಾರ ಜಿಎಂಬಿ ಆಕಾಶ್ ಅವರ ಬರಹದ ವಿಸ್ತೃತ ರೂಪ)
ಎ.ಆರ್. ಮಣಿಕಾಂತ್