ಕೆಲ ದಿನಗಳ ಹಿಂದಷ್ಟೇ ನಟ ಸುದೀಪ್ ಸುದೀರ್ಘ ಪತ್ರವೊಂದನ್ನು ಬರೆದು, ಇಡೀ ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ಕೂಡಾ ಹೋಗುವಾಗ ಬರೀ ಕೈಯಲ್ಲಿ ಹೋದ. ನಾವು ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗೋಣ ಎಂದು ತುಂಬಾ ಕೂಲ್ ಆಗಿ ಹೇಳಿದ್ದರು. ಅದರ ಬೆನ್ನಿಗೆ ಗರಂ ಆಗಿ, ನಾವು ಕೈಗೆ ಹಾಕಿರುವುದು ಕಡಗ, ಬಳೆಯಲ್ಲ ಎಂದು ತಮ್ಮ ವಿರೋಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಸುದೀಪ್ ನೀಡಿದ ವಾರ್ನಿಂಗ್ ಯಾರಿಗೆ ತಲುಪಬೇಕಿತ್ತು, ಅವರಿಗೆ ತಲುಪಿತೋ ಗೊತ್ತಿಲ್ಲ.
ಆದರೆ, ಅವರು ಟ್ವೀಟ್‌ನಲ್ಲಿ ಬಳಸಿರುವ “ಬಳೆ’ ಪದ ಮಾತ್ರ ಮಹಿಳೆಯರಿಗೆ ಕೋಪವನ್ನು ತರಿಸಿದ್ದು ಸುಳ್ಳಲ್ಲ. ಒಬ್ಬ ಸ್ಟಾರ್ ನಟನಾಗಿ, ಫ್ಯಾಮಿಲಿ ಮಂದಿ ಇಷ್ಟಪಡುವ ನಟನಾಗಿ ಸುದೀಪ್ ಈ ರೀತಿ ಟ್ವೀಟ್ ಮಾಡಿದ್ದು ಸರಿಯಲ್ಲ, ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಾರೆ ಎಂದು ಅನೇಕರು ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. “ಬಳೆ’ ಪದ ವಿವಾದಕ್ಕೆ ತಿರುಗುತ್ತಿದ್ದಂತೆ ಸುದೀಪ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ, ತಾವು ಮಾಧ್ಯಮವೊಂದರಲ್ಲಿ ಮಾತನಾಡಿದ ವಿಡಿಯೋ ಶೇರ್ ಮಾಡುವ ಮೂಲಕ “ಬಳೆ’ ಎಫೆಕ್ಟ್ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. “ನನ್ನ ಹೇಳಿಕೆಯಿಂದ ಬೇಸರಗೊಂಡಿರುವ ಮಹಿಳೆಯರೇ ಈ ಹೇಳಿಕೆ ಕೊಟ್ಟಿದ್ದು ನನ್ನ ಹಾಗೂ ನನ್ನ ಸ್ನೇಹಿತರನ್ನು ನಿಂದಿಸಿ ಕಾಮೆಂಟ್ ಮಾಡುವವರಿಗೆ. ನಾನು ಹೆಣ್ಣುಮಕ್ಕಳನ್ನು ಕೀಳಾಗಿ ನೋಡುವ ಕೆಟಗರಿಗೆ ಸೇರಿದವನಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುದೀಪ್, “ಸೆಪ್ಟೆಂಬರ್‌ನಲ್ಲಿ ಏನೇನೋ ಹೆಸರುಗಳನ್ನಿಟ್ಟುಕೊಂಡಿರುವ ತುಂಬಾ ಟ್ವೀಟರ್ ಅಕೌಂಟ್‌ಗಳು ಓಪನ್ ಆಗಿವೆ. ನಾನು ಏನೇ ಟ್ವೀಟ್ ಮಾಡಿದರೂ ಅದಕ್ಕೆ ಕೆಟ್ಟ ಕಾಮೆಂಟ್ ಹಾಕೋದು, ಟ್ರೋಲ್ ಮಾಡೋದು ಮಾಡುತ್ತಿದ್ದಾರೆ. ಅವರೆಲ್ಲರ ಮೇಲೂ ದೂರು ಕೊಡುತ್ತೇನೆ. ಯಾರು ಮಾಡುತ್ತಿದ್ದಾರೆಂದು ಗೊತ್ತಾಗಬೇಕು. ಈಗ ಬಳೆ ವಿಚಾರವನ್ನು ಎತ್ತಿಕೊಂಡು ವಿಷಯಾಂತರ ಮಾಡುತ್ತಿದ್ದಾರೆ. ನನ್ನ ಅಮ್ಮ, ಹೆಂಡ್ತಿ, ಅಕ್ಕಂದಿರೂ ಹಾಕೋದು ಬಳೆನೇ. ನಾನು ಯಾರನ್ನೂ ಅವಮಾನಿಸಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.