ಛತ್ತರ್‌ಪುರ : ಹಿರಿಯ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಉಮಾ ಭಾರತಿ ಅವರು ಛತ್ತರ್‌ಪುರದಲ್ಲಿ ದಲಿತ ಸಮುದಾಯದ ಸದಸ್ಯರೊಂದಿಗೆ ಭೋಜನ ಸ್ವೀಕರಿಸುವುದನ್ನು ತಪ್ಪಿಸಿಕೊಂಡಿದ್ದಾರೆ. ದಲಿತರ ಜತೆ ಕುಳಿತು ಊಟ ಮಾಡುವ ಮೂಲಕ ಅವರನ್ನು ಪರಿಶುದ್ಧಗೊಳಿಸಲು ನಾನೇನೂ ಶ್ರೀರಾಮನಲ್ಲ ಎಂದು ಅವರು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಆದರೆ ತನ್ನ ಮಾತಿನ ದೂರಗಾಮಿ ರಾಜಕೀಯ ಪರಿಣಾಮವನ್ನು ಅರಿತುಕೊಂಡು ಒಡನೆಯೇ ಕ್ಷಮೆಯಾಚಿಸಿದ ಉಮಾ ಭಾರತಿ, “ದಲಿತ ಸಮುದಾಯದ ಸದಸ್ಯರೊಂದಿಗೆ ಕುಳಿತು ತಾನಿಲ್ಲಿ ಭೋಜನ ಸ್ವೀಕರಿಸಲಿಕ್ಕಿದೆ ಎಂಬುದು ತನಗೆ ಮೊದಲೇ ಗೊತ್ತಿರಲಿಲ್ಲ” ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಎರಡು ದಿನಗಳ ಕಾಲ ದಾದ್ರಿಯಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವೆ ಉಮಾ ಭಾರತಿ ಅವರು ಮೊದಲು ಒಪ್ಪಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ದಲಿತರ ಜತೆ ಕುಳಿದು ಊಟ ಸ್ವೀಕರಿಸದಿದ್ದ ತನ್ನನ್ನು ಸಮರ್ಥಿಸಿಕೊಳ್ಳಲು ಉಮಾ ಭಾರತಿ ಅವರು “ಸಾಮಾನ್ಯವಾಗಿ ನಾನು ಈ ರೀತಿಯ ಸಮುದಾಯ ಭೋಜನದಲ್ಲಿ ಪಾಲ್ಗೊಳ್ಳುವುದಿಲ್ಲ. ದಲಿತರಿಂದ ಆಹಾರ ಸ್ವೀಕರಿಸಿ ಅವರನ್ನು ಪರಿಶುದ್ಧಗೊಳಿಸುವ ಶ್ರೀರಾಮ ನಾನಲ್ಲ’ ಎಂದು ಹೇಳಿದ್ದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಛತ್ತರ್‌ಪುರ ಗ್ರಾಮದಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,”ಊಟ ಮಾಡಲು ನಾನು ದಲಿತರ ಮನೆಗಳಿಗೆ ಹೋಗುವುದಿಲ್ಲ; ಆದರೆ ದಲಿತರ ಮನೆಗಳಿಗೆ ಭೇಟಿ ಅಲ್ಲಿ ಆಹಾರ ಸ್ವೀಕರಿಸುವುದನ್ನು ನಾನು ಬೆಂಬಲಿಸುತ್ತೇನೆ; ನಾನು ದಲಿತರ ಮನೆಗೆ ಹೋಗುವ ಬದಲು ಅವರನ್ನೇ ನನ್ನ ಮನೆಗೆ ಆಹ್ವಾನಿಸಿ ಅವರೊಂದಿಗೆ ಊಟ ಮಾಡುತ್ತೇನೆ’ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಈಚಿನ ತಿಂಗಳಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ದಲಿತರೊಂದಿಗೆ ಸಮಷ್ಟೀ ಭೋಜನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಉ.ಪ್ರ. ಸರಕಾರದ ಸಚಿವರು ಅದರಲ್ಲಿ ಪಾಲ್ಗೊಳುತ್ತಿದ್ದಾರೆ.