ದಾನಿಶ್ ಸೇಠ್ ಮತ್ತೆ ಬಂದಿದ್ದಾರೆ! ಹೌದು, “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಬಳಿಕ ದಾನಿಶ್ ಸೇಠ್ ಸೀದಾ ವಿದೇಶಕ್ಕೆ ಹಾರಿದ್ದರು. ಅಲ್ಲಿಗೆ ಹೋಗಿದ್ದು ಒಂದಷ್ಟು ಕಲಿಕೆಗಾಗಿ. ಈಗ ಪುನಃ ಹಿಂದಿರುಗಿರುವ ದಾನಿಶ್ ಸೇಠ್, ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸೋಲ್ಡ್’ ಎಂದು ಹೆಸರಿಡಲಾಗಿದೆ. ಪ್ರೇರಣ ಈ ಚಿತ್ರದ ನಿರ್ದೇಶಕರು. ಇನ್ನು, ಅಗರ್‌ವಾಲ್ ಮತ್ತು ದೀಪಂ ಕೋಯ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದು ಇವರ ಮೊದಲ ಚಿತ್ರ.
ನ್ಯೂಯಾರ್ಕ್‌ನಲ್ಲಿ ಓದಿದ್ದ ಇವರು ಕನ್ನಡದಲ್ಲಿ ಒಂದೊಳ್ಳೆಯ ಚಿತ್ರ ಮಾಡಬೇಕು ಎಂಬ ಉತ್ಸಾಹದಿಂದ “ಸೋಲ್ಡ್’ ಚಿತ್ರಕ್ಕೆ ಅಣಿಯಾಗಿದ್ದಾರೆ. ದಾನಿಶ್ ಸೇಠ್ ಅವರ ಪ್ರಕಾರ, ಇದೊಂದು ತುಂಬಾ ಗಂಭೀರವಾಗಿರುವ ಸಿನಿಮಾವಂತೆ. ಅವರೇ ಹೇಳುವಂತೆ, “ನಾನು ನನ್ನ ಲೈಫಲ್ಲಿ ಸದಾ ಹಾಸ್ಯಪ್ರಜ್ಜೆ ಇಟ್ಟುಕೊಂಡವನು. ಆದರೆ, ಈ ಚಿತ್ರದಲ್ಲಿ ತುಂಬಾನೇ ಗಂಭೀರವಾಗಿರುವಂತಹ ಪಾತ್ರವಿದೆ. ನನಗೆ ಇದೊಂದು ಅನುಭವ ಅಂದುಕೊಂಡಿದ್ದೇನೆ.
ಮೊದಲ ಚಿತ್ರ ಬೇರೆ ಜಾನರ್‌ನಲ್ಲಿತ್ತು. ಅಲ್ಲಿ ಕಾಮಿಡಿಯಾಗಿ ವಕೌìಟ್ ಆಗಿತ್ತು. ಆದರೆ, ಇದು ಬೇರೆ ರೀತಿಯ ಚಿತ್ರವಾದ್ದರಿಂದ ನನಗೊಂದು ಹೊಸ ಪ್ರಯೋಗ ಅಂದುಕೊಂಡು ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ಅವರು. ಈ ಚಿತ್ರಕ್ಕೆ ಕಾವ್ಯಾಶೆಟ್ಟಿ ನಾಯಕಿ. ಎಲ್ಲವೂ ಹೊಸದಾಗಿರಲಿದೆ ಎಂದು ವಿವರ ಕೊಡುವ ದಾನಿಶ್ ಸೇಠ್, “ಕಳೆದ ನಾಲ್ಕು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದಲ್ಲಿ ಹೊಸಬಗೆಯ ಚಿತ್ರಗಳು ಬರುತ್ತಿವೆ.
ಆದರೆ, ಎಲ್ಲವೂ ಕಮರ್ಷಿಯಲ್ ಚಿತ್ರಗಳಾಗಿಯೇ ಇರಬೇಕೆಂದಿಲ್ಲ. ಆ ನಿಟ್ಟಿನಲ್ಲಿ ಸಾಗುವ ಚಿತ್ರವಿದು. ಇಲ್ಲಿ ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಇಲ್ಲಿ ಎಲ್ಲವೂ ಕಾವ್ಯಾ ಶೆಟ್ಟಿಯದ್ದೇ. ನಾನು ಕೇವಲ ಅವರೊಂದಿಗಿರುತ್ತೇನಷ್ಟೇ. ಹಾಗಂತ ನಾನಿಲ್ಲಿ ಹೀರೋ ಅಲ್ಲ. ಹೀರೋ ಮೆಟಿರೀಯಲ್ ಕೂಡ ಅಲ್ಲ. ಆ ಕ್ವಾಲಿಟಿ ನನ್ನಲಿದೆಯೋ ಗೊತ್ತಿಲ್ಲ. ರೆಗ್ಯುಲರ್ ಸಿನಿಮಾಗಿಂತ ಕೊಂಚ ವಿಭಿನ್ನವಾಗಿರುವ “ಸೋಲ್ಡ್’ ಚಿತ್ರ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ’ ಎನ್ನುತ್ತಾರೆ ದಾನಿಶ್.
ಹಾಗೆ ನೋಡಿದರೆ, “ಹಂಬಲ್…’ ಚಿತ್ರದ ನಂತರ ಸಾಕಷ್ಟು ಕಾಮಿಡಿ ಕಥೆಗಳು ಬಂದವಂತೆ. ಆದರೆ, ದಾನಿಶ್ ಮಾತ್ರ ಹೊಸದೇನನ್ನೋ ಬಯಸುತ್ತಿದ್ದರಂತೆ. “ಸೋಲ್ಡ್’ ಅಂಥದ್ದೊಂದು ಹೊಸತನ ಹೊಂದಿದೆ. ಇನ್ನು, ಪನ್ನಗಭರಣ ಜೊತೆಗೊಂದು ಮಾತುಕತೆ ನಡೆಯುತ್ತಿದೆ. ನನ್ನ ಚಿತ್ರ ಬಂದು ಒಂದು ವರ್ಷವೂ ಆಗಿಲ್ಲ. ಆಗಲೇ, ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ.
ನನಗೆ ಹೀರೋ ಆಗಬೇಕು, ಸೆಲೆಬ್ರೆಟಿ ಅನಿಸಿಕೊಳ್ಳಬೇಕೆಂಬ ಆಸೆ ಇಲ್ಲ. ಈ ರೀತಿಯ ಕಥೆ ಇದ್ದರೆ ಮಾತ್ರ ಆಯ್ಕೆ ಮಾಡಿಕೊಳ್ತೀನಿ. ಆದರೂ, ಇಲ್ಲಿ ಗಂಭೀರವಾದ ಕಥೆ, ಪಾತ್ರ ಇದೆ. ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಬಗ್ಗೆ ಕುತೂಹಲವೂ ಇದೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ಕೊಡುತ್ತಾರೆ ದಾನಿಶ್ ಸೇಠ್.