Advertisement

“ಸರ್ಕಾರಿ ವೈದ್ಯ ಕಾಲೇಜು ವಿರೋಧಿ ನಾನಲ್ಲ ‘

07:16 PM Apr 03, 2021 | Team Udayavani |

ಬಾಗಲಕೋಟೆ: ಕಳೆದ 2014-15ನೇ ಸಾಲಿನಲ್ಲಿ ಬಾಗಲಕೋಟೆಗೆ ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜು, ಆರಂಭಿಸಲು ನಾನೂ ಕೂಡ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದೇನೆ.

Advertisement

ಈ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರ ಶೇ.60ರಷ್ಟು, ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಕೊಡಬೇಕು. ಕೊರೊನಾ, ಪ್ರವಾಹ ಹಿನ್ನೆಲೆಯಲ್ಲಿ ಕಾಲೇಜು ಆರಂಭಿಸಲು ಸಾಧ್ಯವಾಗಿಲ್ಲ. ಮುಂದೆ ನಮ್ಮಲ್ಲೂ ಕಾಲೇಜು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಿರುವೆ ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ವಿರೋಧಿಯಲ್ಲ. ನನ್ನ ವಿರುದ್ಧ ಕೆಲವರು ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ. ಹೀಗಾಗಿ ಅದಕ್ಕಾಗಿ ಕೆಲವರು ನಾನು ಸರ್ಕಾರಿ ವೈದ್ಯಕೀಯ ಕಾಲೇಜಿನ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು. ಬಾಗಲಕೋಟೆಗೆ ಸರ್ಕಾರಿ ಕಾಲೇಜು, ಸಂಸ್ಥೆಗಳು ಹೆಚ್ಚು ಬಂದರೆ ನಮಗೇ ಅನುಕೂಲ. ನನ್ನ ಅವಧಿಯಲ್ಲೇ ಸರ್ಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜು ಆರಂಭಗೊಂಡಿವೆ.

ವೈದ್ಯಕೀಯ ಕಾಲೇಜು ಆರಂಭಿಸಲೂ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ನಾನು ಮಾಡಿದ ಅಭಿವೃದ್ಧಿ ಹಾಗೂ ಒಳ್ಳೆಯ ಕೆಲಸ ಸಹಿಸಿಕೊಳ್ಳದೆ ಕೆಲವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಕೋವಿಡ್‌ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇರುವುದು ಎಲ್ಲರಿಗೂ ಗೊತ್ತಿದೆ. ಇದರಿಂದ ಕಾಲೇಜು ಆರಂಭಕ್ಕೆ ಅನುದಾನ ಬಂದಿಲ್ಲ.

ಮುಂದಿನ ದಿನಗಳಲ್ಲಿ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದರು. ಮತಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೂ ಜಲ ಜೀವನ ಮಶಿನ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೇ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು. ಮತಕ್ಷೇತ್ರ ವ್ಯಾಪ್ತಿಯ ಭಗವತಿಯಲ್ಲಿ ಇಲೆಕ್ಟ್ರಿಕಲ್‌ ಬೈಕ್‌ ಉತ್ಪನ್‌ ಕಾರ್ಖಾನೆ ಬರಲಿತ್ತು.

Advertisement

ಅದಕ್ಕಾಗಿ ಸುಮಾರು 100ಕ್ಕೂ ಹೆಚ್ಚು ಎಕರೆ ಭೂಮಿ ಅಗತ್ಯವಿದ್ದು, ಅಲ್ಲಿ ಕೆಲವರು ದಲ್ಲಾಳಿಗಳು ಹುಟ್ಟಿಕೊಂಡು, ಹೆಚ್ಚಿನ ಭೂಮಿ ಬೆಲೆ ಹೇಳಿದ್ದರು. ಹೀಗಾಗಿ ಆ ಉದ್ಯಮಿ ಬಂದಿಲ್ಲ. ಮುಂದೆ ಬರಬಹುದು. ಅಲ್ಲದೇ ನಾನು ರೈತರಿಂದ ಒತ್ತಾಯಪೂರ್ವಕವಾಗಿ ಭೂಮಿಪಡೆದು ಕಾರ್ಖಾನೆ ಸ್ಥಾಪಿಸುವ ಉದ್ದೇಶ ಹೊಂದಿಲ್ಲ. ರೈತರು ಸ್ವಯಂ ಪ್ರೇರಣೆಯಿಂದ ಭೂಮಿ ಕೊಟ್ಟರೆ ಮಾತ್ರ ಉದ್ಯಮ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ: ಬಿವಿವಿ ಸಂಘದ ಹಾನಗಲ್ಲಕುಮಾರೇಶ್ವರ ಆಸ್ಪತ್ರೆಯಲ್ಲಿ ಏ. 1ರಿಂದ ನಿರಂತರವಾಗಿ ವಿವಿಧ ರೋಗಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಬಡವರು, ಕಾರ್ಮಿಕರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದರು. ಈ ಆರೋಗ್ಯ ಸೇವೆ ಯೋಜನೆಗೆ ಬಿವಿವಿ ಸಂಘದ ವಾರ್ಷಿಕವಾಗಿ 10 ಕೋಟಿ ರೂ. ಹೊರೆಯಾಗಲಿದೆ. ಆದರೆ ಸಾಮಾಜಿಕ ಸೇವೆ ಬದ್ಧತೆಯಿಂದ ಕಾರ್ಯಯೋಜನೆ ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೋವಿಡ್‌ದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಯಿಂದಾಗಿ ಬಡ ಮತ್ತು ನಿರ್ಗತಿಕ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಈ ಸಮಸ್ಯೆಯನ್ನು ಅರಿತು ಬಿವಿವಿ ಸಂಘದ ಎಸ್‌.ಎನ್‌. ವೈದ್ಯಕೀಯ ಮಹಾವಿದ್ಯಾಲಯ, ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತ ಸೇವೆ ಒದಗಿಸುತ್ತಿದ್ದೇವೆ. ಹೊರರೋಗಿಗಳ ನೋಂದಣಿ, ಸಾಮಾನ್ಯ ರಕ್ತ ಪರೀಕ್ಷೆ ಹಾಗೂ ಮೂತ್ರ ಪರೀಕ್ಷೆ ಉಚಿತ, ಇತರೆ ರಕ್ತ ಪರೀಕ್ಷೆಗಳು, ಅಲ್ಟ್ರಾಸೌಂಡ (ಒಬಿಸಿ), ಎಕ್ಷರೇ, ಮೆಮೋಗ್ರಾಫಿ, ಇಸಿಜಿ ಶೇ.50 ರಿಯಾಯತಿ, ಹೆರಿಗೆ ವಿಭಾಗದಲ್ಲಿ ಜನರಲ್‌ ವಾರ್ಡ್‌, ಸಾಮಾನ್ಯ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಸಾಮಾನ್ಯ ಹೆರಿಗೆ, ಅಲ್ಟ್ರಾಸೌಂಡ ಉಚಿತ ಹಾಗೂ ಸಿಜರಿಯನ್‌, ಇತರೆ ಚಿಕಿತ್ಸೆಗಳು ಶೇ.50 ರಿಯಾಯತಿ ದರದಲ್ಲಿ ರಿಯಾತಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 08354-235400,235410, 888445259, 8884452960, 8884452961 ಸಂಪರ್ಕಿಸಬೇಕು. ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಕೋವಿಡ್‌ ಸಂದರ್ಭದಲ್ಲಿ 2 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಅಲ್ಲದೆ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌ ಕೇಂದ್ರವನ್ನು ಸ್ಥಾಪಿಸಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಿ ತನ್ನ ಸಾಮಾಜಿಕ ಬದ್ಧತೆ ಪ್ರದರ್ಶಿಸಿದೆ.

ಕೋವಿಡ್‌ 19 ರೋಗ ಪತ್ತೆಗಾಗಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕೋವಿಡ್‌ ಲಸಿಕೆ ನೀಡಲು ಕೇಂದ್ರ ಸ್ಥಾಪಿಸಲಾಗಿದೆ. ಕೋವಿಡ್‌ ಮುಕ್ತ ಅಭಿಯಾನಕ್ಕೆ ಶ್ರಮಿಸುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿಯೂ ಸಂಘ ಸಿಬ್ಬಂದಿಗೆ ವೇತನ ಕಡಿತಗೊಳಿಸಿಲ್ಲ. ಇಎಸ್‌ಐ. ಸಹಿತ ವೇತನ ನೀಡಿದೆ ಎಂದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ‌ ಅಶೋಕ ಸಜ್ಜನ, ಕಾಲೇಜಿನ ಪ್ರಾಚಾರ್ಯ ಡಾ|ಅಶೋಕ ಮಲ್ಲಾಪೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next