ಕುಣಿಗಲ್: ನಾನು ಸೋತಿದ್ದೇನೆ, ಸತ್ತಿಲ್ಲ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದ ಮಾಜಿ ಸಂಸದ ಡಿ.ಕೆ. ಸುರೇಶ್, ಕುಣಿಗಲ್ ತಾಲೂಕಿನ ಹೇಮಾವತಿಯ ಲಿಂಕ್ ಕೆನಾಲ್ ಯೋಜನೆಗಾಗಿ ಹೋರಾಟ ಬಿಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಹೇಮಾವತಿ ನೀರಿನ ವಿಚಾರದಲ್ಲಿ ಕುಣಿಗಲ್ ತಾಲೂಕಿಗೆ ಅನ್ಯಾಯವಾಗಿದೆ. ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರಿನ ಪೈಕಿ ಕುಣಿಗಲ್ ತಾಲೂಕಿಗೆ 3 ಟಿಎಂಸಿ ನಿಗದಿಯಾಗಿದೆ.
ಆದರೆ ಕಳೆದ 25 ವರ್ಷಗಳಿಂದ ನೀರು ಹರಿದಿಲ್ಲ, ಸುಮಾರು 15 ಬಾರಿ 24 ಟಿಎಂಸಿ ನೀರು ತುಮಕೂರು ಬ್ರಾಂಚ್ ಕೆನಾಲ್‌ಗೆ ಹರಿದಿದೆ. ಆದರೆ ಕಳೆದ ಎರಡು ಬಾರಿ ಕುಣಿಗಲ್‌ಗೆ ಬಂದಂತಹ ನೀರಿನ ಪ್ರಮಾಣವೆಂದರೆ ಅದು 500 ಎಂಸಿಎಫ್‌ಟಿ. ಇದನ್ನು ಹೊರತು ಪಡಿಸಿದರೆ ಇನ್ನು 13 ಬಾರಿ 50 ಎಂಸಿಎಫ್‌ಟಿ ನೀರನ್ನು ಮಾತ್ರ ಕುಣಿಗಲ್ ದೊಡ್ಡಕೆರೆಗೆ ಕುಡಿಯಲು ಕೊಡಲು ಸಾಧ್ಯವಾಗಿದೆ.
ಈ ಹಿಂದೆ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಕುಣಿಗಲ್ ದೊಡ್ಡಕೆರೆಗೆ 500 ಎಂಸಿಎಫ್‌ಟಿ ನೀರನ್ನು ನಿಗದಿಪಡಿಸಿ ಆದೇಶಿಸಿದ್ದರು ಎಂದರು.