ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ ಎಂಬ ಚಿಂತನೆಯಲ್ಲಿ ಮುಳುಗಿದ್ದೆ. ಎಷ್ಟೊಂದು ಗಹನವಾಗಿ ಆಲೋಚಿಸುತ್ತಿದ್ದೆ ಎಂದರೆ ಹೊರಜಗತ್ತಿನ ಪರಿವೆಯೇ ಇರಲಿಲ್ಲ. ಯಾರೋ ನನ್ನ ಭುಜವನ್ನು ತಟ್ಟಿದ ಹಾಗಾಯಿತು. ಕೂಡಲೇ ಬಾಹ್ಯ ಜಗತ್ತಿಗೆ ಮರಳಿದೆ. ತಿರುಗಿ ನೋಡಿದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗದ ಸ್ಥಿತಿ. ನನ್ನೆದುರು ಭಗವಂತನೇ ನಿಂತಿದ್ದ. ಸರ್ವಶಕ್ತ, ಸರ್ವವ್ಯಾಪಿಯಾದ ಭಗವಂತನೇ! ದೇವರು ಕಣ್ಣಮುಂದೆ ಬಂದಾಗ ಎಲ್ಲರೂ ಏನು ಮಾಡುತ್ತಾರೆ? ವರವನ್ನು ಬೇಡುತ್ತಾರೆ. ನನ್ನದು ಕೂಡಾ ಸಾಮಾನ್ಯ ಮನುಷ್ಯನ ಮನಸ್ಸೇ. ನನಗೆ ಯಶಸ್ಸು ಬೇಕು, ಕೀರ್ತಿ ಸಂಪಾದಿಸಬೇಕು, ಸಂಪತ್ತನ್ನು ಸಂಚಯನಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಮನಸ್ಸಿಗೆ ಬಂದವು. ನಾನು ವರಗಳನ್ನು ಬೇಡುತ್ತೇನೆಂದು ದೇವರಿಗೆ ಗೊತ್ತಾಗಿಬಿಟ್ಟಿತ್ತು. ಹೇಗೂ ದೇವರಲ್ಲವೆ? ನಾನು ಬಾಯಿ ತೆರೆಯುವ ಮುನ್ನವೇ, “ನೀನು ಬಯಸಿದ್ದನ್ನೆಲ್ಲ ನೀಡಬಲ್ಲ ಒಬ್ಬ ವ್ಯಕ್ತಿಯನ್ನು ತೋರಿಸಬಲ್ಲೆ’ ಎಂದು ಅವನೇ ಹೇಳಿದ. “ಆ ವ್ಯಕ್ತಿಯನ್ನು ತೋರಿಸು ದೇವರೇ’ ಎಂದು ಕೇಳಿಕೊಂಡೆ.
ಭಗವಂತ ಕಣ್ಣು ಮುಚ್ಚಲು ಹೇಳಿದ. ನಾನು ಕಣ್ಣು ಮುಚ್ಚಿದೆ. ಕಣ್ಣು ತೆರೆದರೆ ಭಗವಂತನಿಲ್ಲ. ಮಾಯೆ. ಭಗವಂತ ನನಗೆ ಮೋಸ ಮಾಡಿಬಿಟ್ಟ ಎಂದು ಭಾವಿಸಿದೆ. ಭಗವಂತನ ಬದಲಿಗೆ ನನ್ನ ಮುಂದೆ ಒಂದು ಕನ್ನಡಿ ಪ್ರತ್ಯಕ್ಷವಾಗಿತ್ತು! ಅದರಲ್ಲಿ ನನ್ನದೇ ಪ್ರತಿಬಿಂಬವಿತ್ತು. ಆ ಪ್ರತಿಬಿಂಬವನ್ನು ನೋಡುತ್ತ ನಿಂತೆ.
ಭಗವಂತ ಹೇಳಿದ ವ್ಯಕ್ತಿ ಯಾರೆಂದು ಕೂಡಲೇ ಗೊತ್ತಾಯಿತು. ಆತ ಸೂಚಿಸಿದ್ದು ನನ್ನನ್ನೇ! ನಾವು ನಮ್ಮಲ್ಲಿ ವರ ಬೇಡಿಕೊಳ್ಳಬೇಕೇ ಹೊರತು ಇನ್ನೊಬ್ಬರಲ್ಲಿ ಅಲ್ಲ. ನಮ್ಮ ಸಾಧನೆಯನ್ನು ನಾವು ಮಾಡಿಕೊಳ್ಳಬೇಕೇ ಹೊರತು ಅದಕ್ಕೆ ದೇವರಿಂದ ನೆರವನ್ನು ನಿರೀಕ್ಷಿಸಬಾರದು. ನಮ್ಮ ಗೆಲುವಿಗೂ ಸೋಲಿಗೂ ನಾವು ಕಾರಣರೇ ಹೊರತು ಅನ್ಯರಲ್ಲ. ಈ ಬಗ್ಗೆ ವಿದ್ಯಾರ್ಥಿಗಳಾದ ನಾವು ಯೋಚಿಸಬೇಕಾಗಿದೆ. ನಾವು ನಮ್ಮ ಪ್ರಯತ್ನವನ್ನು ಮಾಡದೆ ದೇವರ ಮೊರೆ ಹೋಗುವುದು ತಪ್ಪು. ಮನುಷ್ಯ ಪ್ರಯತ್ನವಿದ್ದಲ್ಲಿ ದೈವಬಲವೂ ಕೂಡಿಬರುತ್ತದೆ.
ಶರತ್ ಕೆ.ಎಸ್., ಕುಂದಾಪುರ
ಸಮಾಜಸೇವಾ ಸ್ನಾತಕೋತ್ತರ ವಿಭಾಗ, ಮಂಗಳೂರು ವಿ.ವಿ.