Advertisement

Govt., ಅನಕ್ಷರಸ್ಥ ಗ್ರಾ.ಪಂ. ಸದಸ್ಯರಿಗೆ ಅಕ್ಷರ ಕಲಿಸಲು “ಸಾಕ್ಷರ ಸಮ್ಮಾನ್‌’

01:01 AM Jul 25, 2024 | Team Udayavani |

ಮಂಗಳೂರು: ಸಾಕ್ಷರ ಸಮ್ಮಾನ್‌…. ಇದು ಇನ್ನೂ ಸಹಿ ಹಾಕಲಾಗದ ಅನಕ್ಷರಸ್ಥ ಗ್ರಾ.ಪಂ. ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲು ಆರಂಭಿಸಲಾಗುತ್ತಿರುವ ಹೊಸ ಯೋಜನೆ.

Advertisement

ರಾಜ್ಯದಲ್ಲೇ ಅತ್ಯಧಿಕ ಹೆಚ್ಚು ಸಾಕ್ಷರರಿರುವ ಜಿಲ್ಲೆಯೆಂಬ ಖ್ಯಾತಿಯ ದ.ಕ.ದಲ್ಲಿ ಇನ್ನೂ ಅನಕ್ಷರಸ್ಥರಿದ್ದಾರೆ. ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಸಾಕ್ಷರತೆ ಕುರಿತು ನಿರಂತರ ಕಾರ್ಯಕ್ರಮಗಳು ಸರಕಾರದ ಪಟ್ಟಿಯಲ್ಲಿ ನಡೆಯುತ್ತಲೇ ಇವೆ. ಅದರಲ್ಲೂ ಅಚ್ಚರಿ ಎಂದರೆ ಉಭಯ ಜಿಲ್ಲೆಗಳಲ್ಲೂ ಗ್ರಾ.ಪಂ.ಗಳಿಗೆ ಆಯ್ಕೆಯಾದರಲ್ಲೂ ಅನಕ್ಷರಸ್ಥರು ದೊಡ್ಡ ಸಂಖ್ಯೆಯಲ್ಲಿದ್ದಾರೆ!

1990ರ ದಶಕದಲ್ಲಿ ಸಾಕ್ಷರತೆಯ ಆಂದೋಲನ ನಡೆದು ದಕ್ಷಿಣ ಕನ್ನಡವು ರಾಜ್ಯದಲ್ಲೇ ಅತ್ಯಧಿಕ ಸಾಕ್ಷರರಿರುವ ಜಿಲ್ಲೆ ಎಂದು ಘೋಷಣೆಯಾಗಿತ್ತು. 2011ರ ಜನಗಣತಿ ಪ್ರಕಾರವೂ ರಾಜ್ಯದ ನಂ.1 ಸಾಕ್ಷರ ಜಿಲ್ಲೆಯಾಗಿದ್ದು, ಸಾಕ್ಷರರ ಪ್ರಮಾಣ ಶೇ.88ರಷ್ಟಿದೆ.

ಬಯಲಾಗಿದ್ದು ಹೇಗೆ?
ಆದರೆ ಜಿಲ್ಲೆಯ ಹೆಮ್ಮೆಯ ಬಲೂನಿಗೆ ತೂತು ಬಿದ್ದದ್ದು ಗ್ರಾ.ಪಂ. ಸದಸ್ಯರ ತರಬೇತಿ ವೇಳೆ. ಮೈಸೂರಿನ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ತರಬೇತಿ ವೇಳೆ ವಿವಿಧ ಜಿಲ್ಲೆಗಳ ಸದಸ್ಯರ ಚಟುವಟಿಕೆಯನ್ನು ರಾಜ್ಯ ಗ್ರಾಮೀಣಾ ಭಿವೃದ್ಧಿ ಸಂಸ್ಥೆ (ಎಸ್‌ಐಆರ್‌ಡಿ)ಯವರು ದಾಖಲಿಸಿಕೊಂಡಿದ್ದು, ಆಗ ಸಹಿ ಬದಲಿಗೆ ಬೆರಳಚ್ಚು ಹಾಕಿದ್ದು ಗೊತ್ತಾಗಿದೆ. ಇದರ ಆಧಾರದಲ್ಲಿ ರಾಜ್ಯದ ಜಿಲ್ಲೆಗಳ ಗ್ರಾ.ಪಂ. ಸದಸ್ಯರಿಗೆ ಸಾಕ್ಷರತೆಯ ಪಾಠ ಹೇಳಿಕೊಡಲು ಸೂಚಿಸಲಾಗಿದೆ.

ದ.ಕ.ದಲ್ಲಿ 53 ಗ್ರಾ.ಪಂ.ಗಳಿಂದ 72 ಹಾಗೂ ಉಡುಪಿ ಜಿಲ್ಲೆಯಿಂದ 42 ಅನಕ್ಷಕರಸ್ಕ ಸದಸ್ಯರನ್ನು ಎಸ್‌ಐಆರ್‌ಡಿ ಸಂಸ್ಥೆ ಗುರುತಿಸಿದೆ. ಸಂಸ್ಥೆ ಕೊಟ್ಟ ಮಾಹಿತಿ ಅನ್ವಯ ದಕ್ಷಿಣ ಕನ್ನಡದ ಆಯಾ ಗ್ರಾಮಗಳ ಪಿಡಿಒ ಮೂಲಕ ಇದನ್ನು ದೃಢಪಡಿಸಲು ಮುಂದಾದಾಗ ಕೆಲವರು ಬಳಿಕ ಅಕ್ಷರ ಕಲಿತಿರುವ ಮಾಹಿತಿ ಸಿಕ್ಕಿದ್ದು, ಅಂಥ 19 ಮಂದಿಯನ್ನು ಬಿಟ್ಟು ಉಳಿದ 53 ಮಂದಿಗೆ ತರಬೇತಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ.ದ ಮಂಗಳೂರು ಹಾಗೂ ಪುತ್ತೂರಿನಲ್ಲಿ ತರಬೇತಿಯನ್ನೂ ನಡೆಸ ಲಾ ಗುವುದು ಎಂದು ಜಿಲ್ಲಾ ಲೋಕಶಿಕ್ಷಣಾಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ 42 ಮಂದಿ ಅನಕ್ಷರಸ್ಥರ ಬಗ್ಗೆ ಪೂರ್ವ ಮಾಹಿತಿಯಿದ್ದು, ಅವರಲ್ಲಿ 20 ಮಂದಿ ಬಳಿಕ ಅಕ್ಷರ ಕಲಿತಿರುವುದರಿಂದ ಉಳಿದ 22 ಮಂದಿಗೆ ತರಬೇತಿ ನಡೆಯಲಿದೆ.

ಅನಕ್ಷರಸ್ಥರ ಗುರುತಿಸಲು
ಮನೆ ಮನೆ ಸಮೀಕ್ಷೆ
ಸಾಕ್ಷರತೆಯ ಮಟ್ಟ ಹೆಚ್ಚಿಸಲು ರಾಜ್ಯ-ಕೇಂದ್ರ ಸರಕಾರಗಳೆರಡೂ ಹಲವು ಕಾರ್ಯಕ್ರಮಗಳನ್ನು ಯೋಜಿಸುತ್ತಾ ಬಂದಿವೆ. ರಾಜ್ಯ ಸರಕಾರ 2022ರಲ್ಲಿ ಘೋಷಿಸಿದ 1,000 ಗ್ರಾ.ಪಂ. ಸಂಪೂರ್ಣ ಸಾಕ್ಷರ ಗ್ರಾ.ಪಂ. ಕಾರ್ಯಕ್ರಮದಡಿ ದ.ಕ. ಜಿಲ್ಲೆಯ 26 ಗ್ರಾಮ ಪಂಚಾಯತ್‌ಗಳ 11,047 ಅನಕ್ಷರಸ್ಥರನ್ನು ಗುರುತಿಸಲಾಗಿತ್ತು. ಇದರಲ್ಲಿ 1,390 ಮಂದಿಯನ್ನು ಮೊದಲು ಹಾಗೂ 227 ಮಂದಿಯನ್ನು ಅನಂತರದ ಹಂತದಲ್ಲಿ ಪತ್ತೆ ಮಾಡಿ ತರಬೇತಿ ಕೊಡಲಾಗಿದೆ. ಈಗ ಮತ್ತೆ ಅಭಿಯಾನ ರೂಪದಲ್ಲಿ ಅನಕ್ಷರಸ್ಥರನ್ನು ಗುರುತಿಸಲು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಕೇಂದ್ರ ಸರಕಾರವೂ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಯೋಜಿಸಿದ್ದು, ಅದರಲ್ಲೂ ಬ್ಲಾಕ್‌ ಸಂಪನ್ಮೂಲ ವ್ಯಕ್ತಿ, ಶಿಕ್ಷಕರು, ಶಿಕ್ಷಕ ಅಭ್ಯಾಸಿಗಳ ಮೂಲಕ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅನಕ್ಷರಸ್ಥ ಗ್ರಾ.ಪಂ.
ಸದಸ್ಯರಿರುವ ಟಾಪ್‌ ಜಿಲ್ಲೆಗಳು
ಬೆಳಗಾವಿ-727
ತುಮಕೂರು-328
ಚಿಕ್ಕಬಳ್ಳಾಪುರ-305
ರಾಮನಗರ-227
ಹಾಸನ-223

ಸಾಕ್ಷರ ಸಮ್ಮಾನ್‌ ತರಬೇತಿ ಹೇಗೆ ?
“ಈಚ್‌ ಒನ್‌, ಟೀಚ್‌ ಒನ್‌’ ಎಂದರೆ ಪ್ರತಿಯೊಬ್ಬನೂ ಇನ್ನೊಬ್ಬನಿಗೆ ಕಲಿಸುವುದು ಎನ್ನುವ ನೆಲೆ ಯಲ್ಲಿ ಆಯಾ ಗ್ರಾ.ಪಂ. ಸಿಬಂದಿಯೇ ತಮ್ಮಲ್ಲಿನ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಕಲಿಸುವ ಕಾರ್ಯಕ್ರಮ ಸಾಕ್ಷರತಾ ಸಮ್ಮಾನ್‌. ಇದಕ್ಕಾಗಿ ಗ್ರಾ.ಪಂ. ಸಿಬಂದಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ.
-ಲೋಕೇಶ್‌, ಲೋಕಶಿಕ್ಷಣಾಧಿಕಾರಿ, ದ.ಕ

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next