Advertisement
ಪೋತಂಗಲ್, ಹಲಕೋಡಾ, ಜಟ್ಟೂರ ಗ್ರಾಮಗಳ ಬಳಿಯ ಈ ಕೆಂಪು ಉಸುಕಿಗೆ ಚಿನ್ನದ ಬೆಲೆಯಿದೆ. ಅನೇಕ ವರ್ಷಗಳಿಂದ ರಾತ್ರಿ-ಹಗಲು ಎನ್ನದೇ ಲಾರಿ, ಟಿಪ್ಪರ್, ಟ್ರ್ಯಾಕ್ಟರ್, ಆಟೋ, ಟಂಟಂಗಳಲ್ಲಿ ಜೆಸಿಬಿ ಯಂತ್ರಗಳಿಂದ ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿರುವ ಅಕ್ರಮ ಮಾರಾಟಗಾರರಿಗೆ ಕಂದಾಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡು ಬಿಸಿಮುಟ್ಟಿಸುತ್ತಿಲ್ಲ ಎಂದು ಜಟ್ಟೂರ ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ದೂರಿದ್ದಾರೆ.
Related Articles
Advertisement
ಮಧ್ಯರಾತ್ರಿ 12ಗಂಟೆಯಿಂದ ಉಸುಕು ತುಂಬಿದ ಟ್ರ್ಯಾಕ್ಟರ್‌ಗಳ ಓಡಾಟ ಪಟ್ಟಣದ ಅಂಬೇಡ್ಕರ್ ಚೌಕ್, ಬಸವೇಶ್ವರ ಚೌಕ್, ಕನಕದಾಸ ಚೌಕ್, ಗಾಂಧಿ ಚೌಕ್ ಹತ್ತಿರ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಕುರಿತು ಪೊಲೀಸರು ಯಾಕೆ ಪರಿಶೀಲಿಸುತ್ತಿಲ್ಲ ಎಂದು ಪಾಟೀಲ ಪ್ರಶ್ನಿಸಿದ್ದಾರೆ.
ಗಡಿಪ್ರದೇಶ ಕುಂಚಾವರಂ, ಮಲಚೆಲಮಾ, ಪೋಚಾವರಂ, ತಟ್ಟೆಪಳ್ಳಿ, ಶಾದೀಪುರ, ಭಿಕ್ಕುನಾಯಕ ತಾಂಡಾ, ಚಂದುನಾಯಕ ತಾಂಡಾಗಳಲ್ಲಿ ಕೆಂಪು ಮಣ್ಣು ಅಗೆದು ಸಿಮೆಂಟ್ ಕಂಪನಿಗಳಿಗೆ ಸಾಗಿಸುತ್ತಿರುವ ಲಾರಿಗಳನ್ನು ಸಾರ್ವಜನಿಕರೇ ರಾತ್ರಿ ವೇಳೆ ಹಿಡಿದು ಕುಂಚಾವರಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಆದರೆ ಮಿರಿಯಾಣ, ಚಿಂಚೋಳಿ, ಚಿಮ್ಮನಚೋಡ ಠಾಣೆಗಳ ವಾಪ್ತಿಯಲ್ಲಿ ಅಕ್ರಮ ಉಸುಕು ಮಾರಾಟ ದಂಧೆಗೆ ಕಡಿವಾಣ ಇಲ್ಲದಂತಾಗಿದೆ.
ಈ ಹಿಂದೆ ಚಿಮ್ಮನಚೋಡ ಗ್ರಾಮದಲ್ಲಿ ನಡೆದ “ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಚಿಮ್ಮನಚೋಡ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಯಿಂದ ಉಸುಕು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಗ್ರಾಮಸ್ಥರ ಪರವಾಗಿ ಸಂಗಾರೆಡ್ಡಿ, ಶರಣರೆಡ್ಡಿ ಮೊಗಲಪ್ಪನೋರ ಎಸ್‌ಪಿ ಇಶಾ ಪಂತ್ ಗಮನಕ್ಕೆ ತಂದಿದ್ದರು. ಮುಲ್ಲಾಮಾರಿ ನದಿಯಲ್ಲಿನ ಉಸುಕು ಲೂಟಿ ಆಗುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ನದಿಯಲ್ಲಿನ ತೆಗ್ಗುಗಳಲ್ಲಿ ಜನರು ಮತ್ತು ದನಕರುಗಳು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
ಹಗಲು ರಾತ್ರಿ ಅಕ್ರಮ ಮರಳುಗಾರಿಕೆ ಕುರಿತು ನಿಗಾ ವಹಿಸಲಾಗಿದೆ. ಗ್ರಾಮ ಲೆಕ್ಕಿಗರಿಗೂ ಈ ಕುರಿತು ಲಕ್ಷ್ಯ ವಹಿಸಲು ಸೂಚಿಸಲಾಗಿದೆ. ಯಾವುದಾದರೂ ಅಕ್ರಮ ಕಂಡುಬಂದಲ್ಲಿ ಲಾರಿಗಳನ್ನು ಜಪ್ತಿಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ಕೂಡಾ ಪೋತಂಗಲ್ ಗ್ರಾಮಕ್ಕೆ ನಸುಕಿನಲ್ಲೇ ನಾಲ್ಕೈದು ಬಾರಿ ಭೇಟಿ ನೀಡಿದ್ದೇನೆ. ಆಗ ಯಾವುದೇ ರೀತಿಯ ಅಕ್ರಮ ಸಾಗಾಟ ಕಂಡುಬಂದಿರಲಿಲ್ಲ. ಈ ಕುರಿತು ಸುಲೇಪೇಟ್ ಪೊಲೀಸ್ ಠಾಣೆಗೂ ನಿಗಾ ವಹಿಸಲು ಸೂಚನೆ ನೀಡಲಾಗಿದೆ. -ಅಂಜುಮ್ ತಬಸುಮ್, ತಹಶೀಲ್ದಾರ್