Advertisement

ಸುರಕ್ಷತೆ ಇಲ್ಲದೇ “ಸ್ಫೋಟಕ್ಕೆ ಜಿಲ್ಲಾಡಳಿತ ತಡೆ

03:17 PM Feb 12, 2021 | Team Udayavani |

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಬೆಟ್ಟ ಪ್ರದೇಶದಲ್ಲಿ ಪರವಾನಗಿ ಪಡೆದ ಕಲ್ಲು ಕ್ವಾರಿಗಳಲ್ಲಿ ಸುರಕ್ಷತೆ ಇಲ್ಲದೇ ಕಲ್ಲಿನ ಸ್ಫೋಟ ಮಾಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕಲ್ಲು ಕ್ವಾರಿ ಮತ್ತು ಕಂಕರ್‌ ಮಿಷನ್‌ ಕಾರ್ಯಗಳು ಸ್ಥಗಿತಗೊಂಡಿವೆ.

Advertisement

ಶಿವಮೊಗ್ಗ ಹುಣಸೋಡು ಸ್ಫೋಟದ ನಂತರ ಕೊಪ್ಪಳ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಸ್ಫೋಟ ಮತ್ತು ಕಂಕರ್‌ ಮಿಷನ್‌ ಕಾರ್ಯ ಸ್ಥಗಿತಗೊಳಿಸಿತ್ತಲ್ಲದೇ ಅಗತ್ಯ ಸುರಕ್ಷತೆ ಅಳವಡಿಸುವಂತೆ ಸೂಚನೆ ನೀಡಿದೆ. ಇದುವರೆಗೂ ಕಲ್ಲುಕ್ವಾರಿಗಳಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲದೇ ಕ್ವಾರಿ ಮಾಲೀಕರು ಜೆಲಿಟಿನ್‌ ಬಳಸಿ ಸ್ಫೋಟ ಮಾಡುತ್ತಿದ್ದರು. ಇದರಿಂದ ಕಳೆದೆರಡು ವರ್ಷಗಳ ಹಿಂದೆ ಮಲ್ಲಾಪೂರ ಹಳೆ ಊರು ಸೀಮಾದಲ್ಲಿ ಕಲ್ಲು ಸ್ಫೋಟ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ಮೃತನಾಗಿದ್ದ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಶಿವಮೊಗ್ಗದ ಹುಣಸೋಡುನಲ್ಲಿ ಜರುಗಿದ ಸ್ಫೋಟದಿಂದ ಜಿಲ್ಲೆಯ ಎಲ್ಲಾ ಕ್ವಾರಿ ಸ್ಫೋಟ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ತಾಲೂಕಿನ ವೆಂಕಟಗಿರಿ ಹೋಬಳಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ಪಡೆದ 09  ಕಲ್ಲುಕ್ವಾರಿಗಳಿದ್ದು ಇಲ್ಲಿಂದ ಸುಮಾರು 80ಕ್ಕೂ ಹೆಚ್ಚು ಕಂಕರ್‌ ಮಿಷನ್‌ಗಳಿಗೆ ಕಲ್ಲು ಸರಬರಾಜು ಆಗುತ್ತಿದೆ. ಈ ಮಧ್ಯೆ ಕೆಲ ಕಂಕರ್‌ ಮಿಷನ್‌ಗಳ ಮಾಲೀಕರು ಪರವಾನಗಿ ಅವಧಿ  ಮುಗಿದರೂ ಕಂಕರ್‌ ಮಿಷನ್‌ ಬಂದ್‌ ಮಾಡದೇ ನಿರಂತರವಾಗಿ ಕಲ್ಲು ಕ್ವಾರಿಯಿಂದ ಕಲ್ಲು ಪಡೆದು ಕಲ್ಲು ಪುಡಿ ಮಾಡಿ ಮಾರುತ್ತಿದ್ದಾರೆ.

ಗಣಿ ಭೂಜ್ಞಾನ ಇಲಾಖೆ ಅಧಿಕಾರಿಗಳು ಪೊಲೀಸ್‌ ಅ ಧಿಕಾರಿಗಳು ಕಂಕರ್‌ ಮಿಷನ್‌ಗಳ ಮೇಲೆ ಹಲವು ಬಾರಿ ದಾಳಿ ಮಾಡಿದರೂ ಕೆಲ ಪರವಾನಗಿ ಇಲ್ಲದ ಕಂಕರ್‌ ಮಿಷನ್‌ ಮಾಲೀಕರು ಕಲ್ಲು ಕ್ವಾರಿ ಲೀಜ್‌ ಪಡೆದವರ ಜತೆ ಸೇರಿ ಅಕ್ರಮವೆಸಗುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ :ಮುಂದಿನ ಟಾರ್ಗೆಟ್ ಗೋಕಾಕ, ಪಕ್ಷ ಬಯಸಿದರೆ ಅಲ್ಲಿಂದಲೇ ಸ್ಪರ್ಧೆ: ಲಕ್ಷ್ಮೀ ಹೆಬ್ಬಾಳಕರ್

Advertisement

ಎನ್‌ಒಸಿ ತಂದರೆ ಮಾತ್ರ ಪರವಾನಗಿ: ಕಲ್ಲುಕ್ವಾರಿ ಮತ್ತು ಕಂಕರ್‌ ಮಿಷನ್‌ಗಳ ಸುರಕ್ಷತೆ ಮತ್ತು ಕಾರ್ಮಿಕರ ಜೀವ ರಕ್ಷಣೆ ಕ್ರಮಗಳ ಕುರಿತು ಅಗತ್ಯ ಸಿಬ್ಬಂದಿ ಮತ್ತು ನಿಯಮ ಪಾಲನೆ ಕುರಿತು ಬಳ್ಳಾರಿ ಗಣಿ ಭೂವಿಜ್ಞಾನ ಇಲಾಖೆ ಸುರಕ್ಷತೆ ವಿಭಾಗದ ಪರವಾನಗಿ (ಎನ್‌ಒಸಿ) ತಂದರೆ ಮಾತ್ರ ಪುನಃ ಕಲ್ಲು ಕ್ವಾರಿ ಸ್ಫೋಟ ಮತ್ತು ಕಂಕರ್‌ ಮಿಷನ್‌ ಕಾರ್ಯಾರಂಭಕ್ಕೆ ಜಿಲ್ಲಾಡಳಿತ ಪರವಾನಗಿ ನೀಡಲಿದೆ. ಈಗಾಗಲೇ ಪೊಲೀಸ್‌ ಇಲಾಖೆ ಅಗತ್ಯ ಸುರಕ್ಷತಾ ಕ್ರಮ ವಹಿಸದ ಹೊರತು ಕಲ್ಲುಕ್ವಾರಿ ಸ್ಫೋಟ ಮತ್ತು ಕಂಕರ್‌ ಮಿಷನ್‌ ಆರಂಭಕ್ಕೆ ಅವಕಾಶ ನೀಡಲ್ಲ ಎಂಬ ಸೂಚನೆ ನೀಡಿದೆ. ಇತ್ತೀಚಿಗೆ ಕಲ್ಲುಕ್ವಾರಿ ಸ್ಫೋಟಕ್ಕೆ ಬಳಸುವ ಜಿಲೆಟಿನ್‌ ಸ್ಫೋಟಕ ಕಡ್ಡಿಗಳನ್ನು ಪೊಲೀಸ್‌ ಇಲಾಖೆ ಮತ್ತು ಆಂತರಿಕ ಭದ್ರತಾ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದು ಕೇಸ್‌ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next