ಮಸ್ಕಿ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿರುದ್ದ ಆರ್.ಬಸನಗೌಡ ತುರುವಿಹಾಳ ದಾಖಲಿಸಿದ್ದ ಅಕ್ರಮ ಮತದಾನ ಪ್ರಕರಣದ ವಿಚಾರಣೆ ಶುಕ್ರವಾರ ನಡೆದಿದ್ದು, ಹೆಚ್ಚಿನ ವಿಚಾರಣೆಯನ್ನು ಕಾಯ್ದಿರಿಸಿಮಂಗಳವಾರಕ್ಕೆ ಮುಂದೂಡಿ ಹೈಕೋರ್ಟ್ ಆದೇಶಿಸಿದೆ.
ಕಳೆದ 2018ರ ಮೇನಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಪ್ರತಾಗೌಡ ಪಾಟೀಲ ಕೆಲವೇ ಮತಗಳ ಅಂತರದಿಂದ ವಿಜೇತರಾಗಿದ್ದರು. ಆದರೆ ಈ ಗೆಲುವು ಪ್ರಶ್ನಿಸಿ ಹಾಗೂ ಮತದಾನ ವೇಳೆ ಅಕ್ರಮ ನಡೆದಿದೆ ಎಂದು ಆಪಾದಿಸಿ ಪರಾಜಿತ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆರಂಭದಲ್ಲಿ ಕಲಬುರಗಿ ವಿಭಾಗೀಯ ಪೀಠದಲ್ಲಿದ್ದ ಕೇಸ್‌ನ ವಿಚಾರಣೆ ಸದ್ಯ ಬೆಂಗಳೂರು ಹೈಕೋರ್ಟ್ ಅಂಗಳದಲ್ಲಿದೆ.
ಚುರುಕು: ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಈ ಕೇಸ್‌ನ ವಿಚಾರಣೆ ಪ್ರತಾಪಗೌಡ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಚುರುಕು ಪಡೆದಿದೆ. ಈ ಕೇಸ್‌ನ ವಿಚಾರಣೆ ಮುಗಿಯದ್ದಕ್ಕೆ ಮಸ್ಕಿ ಕ್ಷೇತ್ರದ ಉಪಚುನಾವಣೆ ವಿಳಂಬವಾಗಿದೆ. ದಾವೆ ಹೂಡಿದ್ದ ಆರ್.ಬಸನಗೌಡ ತುರುವಿಹಾಳ ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಕೇಸ್ ವಾಪಸು ಪಡೆಯಲು ಒಪ್ಪಿಕೊಂಡಿದ್ದಾರೆ. ಇದರಿಂದ ಈ ಕೇಸ್ ನ ವಿಚಾರಣೆ ಕಳೆದ ಕೆಲ ತಿಂಗಳಿಂದ ಹೈಕೋರ್ಟ್‌ನಲ್ಲಿ ಬರುತ್ತಿದೆ.
ಮಂಗಳಾವರಕ್ಕೆ ಮುಂದೂಡಿಕೆ: ಆರ್. ಬಸನಗೌಡ ತುರುವಿಹಾಳ ದಾಖಲಿಸಿದ ಕೇಸ್ ಸಂಪೂರ್ಣ ಸುಳ್ಳು. ಮತದಾನದ ವೇಳೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಪರ ವಕೀಲರು ಹಾಕಿದ್ದ ಮೇಲ್ಮನವಿ ಎರಡು ದಿನಗಳ ಹಿಂದೆಯೇ ವಿಚಾರಣೆಗೆ ಬಂದಿತ್ತು. ಈ ವೇಳೆ ಪ್ರತಾಪಗೌಡ ಪರ ವಕೀಲರು ಮಾತ್ರ ಅರ್ಜಿಯ ಕುರಿತು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದರು. ಹೆಚ್ಚಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಶುಕ್ರವಾರ ಆರ್.ಬಸನಗೌಡ ಪರ ವಕೀಲರು ವಾದ ಮುಂದುವರಿಸಿದ್ದು, ಸುಳ್ಳು ಕೇಸ್ ಎನ್ನುವುದಕ್ಕೆ ಒಪ್ಪಲಾಗದು. ಬೇಕಿದ್ದರೆ, ಕೇಸ್ ವಾಪಸು ಪಡೆಯಲು ಅವಕಾಶ ಕೊಟ್ಟರೆ ಕೇಸ್ ವಾಪಸು ಪಡೆಯುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಕಡೆಯಿಂದಲೂ ವಾದ ಆಲಿಸಿದ ಹೈಕೋರ್ಟ್ ಪೀಠ ಹೆಚ್ಚಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿ ಆದೇಶಿಸಿದೆ.