ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಯಾಗ್ನೊಸ್ಟಿಕ್ ಸೆಂಟರ್ ನಡೆಸಲು ಕಾನೂನು ಬಾಹಿರವಾಗಿ ಟೆಂಡರ್ ಪಡೆದುಕೊಂಡಿದ್ದಾರೆಂಬ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ವಿರುದ್ಧದ ದೂರಿನ ವಿಚಾರಣೆಯನ್ನು ಎಸಿಬಿ ಮುಕ್ತಾಯಗೊಳಿಸಿದ್ದು, ಮುಖ್ಯಮಂತ್ರಿ ಮತ್ತವರ ಪುತ್ರನಿಗೆ ಕ್ಲೀನ್‌ಚಿಟ್ ನೀಡಿದೆ.
ಪುತ್ರನಿಗೆ ಟೆಂಡರ್ ಕೊಡಿಸಲು ಸಿಎಂ ಸ್ವಜನ ಪಕ್ಷಪಾತ ಹಾಗೂ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಅಲ್ಲದೇ, ಡಾ.ಯತೀಂದ್ರ ಕೂಡ ಕಾನೂನು ಬಾಹಿರವಾಗಿ ಟೆಂಡರ್ ಪಡೆದುಕೊಂಡಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಎಸ್.ಭಾಸ್ಕರನ್ ದೂರು ನೀಡಿದ್ದರು.
ದೂರಿನ ವಿಚಾರಣೆಯನ್ನು ಪೂರ್ಣಗೊಳಿಸಿರುವ ಎಸಿಬಿ, ಅಪಾದಿತರ ವಿರುದ್ಧ ಮಾಡಿರುವ ಆರೋಪಗಳು ಸಾಬೀತಾಗಿಲ್ಲ ಎಂದು ತಿಳಿಸಿದೆ. ಈ ಮೂಲಕ ಸಿಎಂ ಹಾಗೂ ಅವರ ಪುತ್ರನಿಗೆ ಕ್ಲೀನ್‌ಚಿಟ್ ದೊರೆತಂತಾಗಿದೆ.
ಯತೀಂದ್ರ ಅವರ ವಿರುದ್ಧದ ಆರೋಪ ಸಾಬೀತುಪಡಿಸುವ ಯಾವ ಅಂಶಗಳೂ ದೂರಿನಲ್ಲಿ ಉಲ್ಲೇಖವಾಗಿಲ್ಲ. ವಿಚಾರಣೆ ವೇಳೆಯೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಇದರಿಂದ ವಿಚಾರಣೆ ಮುಕ್ತಾಯಗೊಳಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಯಾವ ನಿರ್ದಿಷ್ಟ ಅಂಶಗಳ ಆಧಾರದಲ್ಲಿ ವಿಚಾರಣೆ ಮುಕ್ತಾಯಗೊಳಿಸಲಾಯಿತು ಎಂಬುದನ್ನು ತಿಳಿಸಲು ತನಿಖಾಧಿಕಾರಿಗಳು ನಿರಾಕರಿಸಿದರು.
ವಿಚಾರಣೆ ನಡೆಸಿಲ್ಲ: ಈ ಮಧ್ಯೆ ಎಸಿಬಿ ಅಧಿಕಾರಿಗಳು ತಮ್ಮನ್ನು ವಿಚಾರಣೆಗೊಳಪಡಿಸದೇ ದೂರನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಭಾಸ್ಕರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಮಾನದಂಡಗಳ ಮೇಲೆ ವಿಚಾರಣೆಯನ್ನು ತಿಳಿಸದೇ ಮುಕ್ತಾಯಗೊಳಿಸಿ ಅ.23ರಂದು ಹಿಂಬರಹ ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆ ಮುಕ್ತಾಯಗೊಳಿಸಲು 1.5 ವರ್ಷ!: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ಥ ಸುರಕ್ಷಾ ಯೋಜನೆ ಅಡಿಯಲ್ಲಿ ಡಯೋಗ್ನಸ್ಟಿಕ್ ಸೆಂಟರ್ ಆರಂಭಿಸಲು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ನಡೆಸುತ್ತಿದ್ದ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಶನ್ ಇಂಡಿಯಾ ಪ್ರೈ.ಲಿ ಕಂಪೆನಿ ಗುತ್ತಿಗೆ ಪಡೆದುಕೊಂಡಿತ್ತು. ಆದರೆ, ಕಾನೂನು ಬಾಹಿರವಾಗಿ ಸಿಎಂ, ತಮ್ಮ ಪುತ್ರನಿಗೆ ಟೆಂಡರ್ ಕೊಡಿಸಿದ್ದಾರೆಂಬ ಆರೋಪ ಕೇಳಿ ಬಂದು ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.
ಈ ನಿಟ್ಟಿನಲ್ಲಿ ತನಿಖೆ ನಡೆಸಿ ಯತೀಂದ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ 2016ರ ಮೇ 23ರಂದು ಆರ್‌ಟಿಐ ಕಾರ್ಯಕರ್ತ ಭಾಸ್ಕರನ್ ಎಸಿಬಿಗೆ ದೂರು ನೀಡಿದ್ದರು.ಈ ದೂರಿನ ವಿಚಾರಣೆಗೆ ಒಂದು ವರ್ಷ ಐದು ತಿಂಗಳು ಕಾಲಾವಕಾಶ ತೆಗೆದುಕೊಂಡಿರುವ ಎಸಿಬಿ, ಕಳೆದ ಅಕ್ಟೋಬರ್ 27ರಂದು ವಿಚಾರಣೆ ಮುಕ್ತಾಯಗೊಳಿಸಿದೆ.