ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಜಾನುವಾರ ಸಂರಕ್ಷಣೆ ಮತ್ತು ರೈತರಿಗೆ ನೆರವಾಗುವ ದೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ಗೋಶಾಲೆಗಳಿಗೆ ಮೇವು ಪೂರೈಕೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆಯುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಜಿಲ್ಲೆಗಳ ಗೋಶಾಲೆಗಳಿಗೆ ಭೇಟಿ ನೀಡಿದಾಗ ಅಕ್ರಮದ ದರ್ಶನವಾಯಿತು. ಗೋಶಾಲೆಗಳಿಗೆ ಪೂರೈಕೆಯಾ ಗುತ್ತಿರುವ ಮೇವಿನ ಪ್ರಮಾಣಕ್ಕಿಂತ ಹತ್ತಾರು ಪಟ್ಟು ಹೆಚ್ಚು ಲೆಕ್ಕ ಪುಸ್ತಕದಲ್ಲಿ ದಾಖಲಾಗುತ್ತಿದೆ.
ಉದಾಹರಣೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಮಾಪುರ ಗೋಶಾಲೆಯಲ್ಲಿ ಆಗತಾನೇ ಒಂದು ಕ್ಯಾಂಟರ್ ಲಾರಿಯಲ್ಲಿ ಬಂದ ಮೇವಿನ ಲೋಡ್ ಅನ್ನು ರೈತರು ಪರಿಶೀಲಿಸಿದಾಗ ಸುಮಾರು 700ರಿಂದ 750 ಕೆ.ಜಿ ತೂಕ ಇರುವುದು ಮೇಲ್ನೋಟಕ್ಕೆ ಕಂಡುಬಂತು. ಆದರೆ, ಟ್ಯಾಂಕರ್‌ನ ಡ್ರೈವರ್ ಬಳಿಯಿದ್ದ ತೂಕದ ಚೀಟಿಯಲ್ಲಿ ನಾಲ್ಕೂವರೆ ಟನ್ ಎಂಬುದಾಗಿ ನಮೂದಿಸಲಾಗಿತ್ತು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿವೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಮಾಡುವ ಬದಲು ಸಾಲದ 60 ದಿನಗಳ ಬಡ್ಡಿ ವನ್ನಾ ಮಾಡುವುದಾಗಿ ಹೇಳಿರುವುದು ಅವಮಾನಕರ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಚಿಕ್ಕಕಬ್ಬಿಗೆರೆ ನಾಗರಾಜ್, ನಾಗರಾಜ್, ಚೂನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಯಶಸ್ವಿನಿ: ಬದಲಾವಣೆ ಬೇಡ
ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯನ್ನು ಈ ಹಿಂದೆ ಇದ್ದಂತೆ ಸಹಕಾರಿ ಸಂಘಗಳ ಮೂಲಕವೇ ಕಾರ್ಯಗತಗೊಳಿಸಬೇಕು ಎಂದು ಇದೇ ವೇಳೆ ಕೋಡಿಹಳ್ಳಿ ಚಂದ್ರಶೇಕರ್ ಆಗ್ರಹಿಸಿದರು. ರೈತರಿಗೆ ಅತಿ ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಕಳೆದ 14 ವರ್ಷಗಳಿಂದ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ ಗ್ರಾಮೀಣ ಸಹಕಾರಿ ಸಂಘಗಳ ಮೂಲಕ ಅನಷ್ಠಾನಗೊಳಿಸಲಾಗುತ್ತಿತ್ತು.
ಇದೀಗ ಸರ್ಕಾರ ವಾಜಪೇಯಿ ಆರೋಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಯಶಸ್ವಿನಿ ಯೋಜನೆಯನ್ನೂ ವಿಲೀನಗೊಳಿಸುವ ಹುನ್ನಾರ ನಡೆಸಿದೆ ಎಂಬ ಮಾಹಿತಿ ಇದೆ. ಇದು ಸರಿಯಲ್ಲ. ಯಶಸ್ವಿನಿ ಯೋಜನೆಯನ್ನು ಈಗಿರುವಂತೆ ಯಥಾವತ್ ಮುಂದುವರೆಸಬೇಕೆಂದು ಒತ್ತಾಯಿಸಿದರು.