ಅರಕಲಗೂಡು: ಪಪಂ ವ್ಯಾಪ್ತಿಯಲ್ಲಿ ಅಕ್ರಮಕಸಾಯಿ ಖಾನೆಗಳ ಮಾಲಿಕರು, ರಾಜಾರೋಷವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರೂ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿ ತಂದರೂ ಪಪಂ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ನಮ್ಮ ತಾಲೂಕಿಗೆ ಅನ್ವಯಿಸುವುದಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಈ ಮೂಲಕ ಅಕ್ರಮ ಕಸಾಯಿ ಖಾನೆಗಳಿಗೆ ಬೆಂಬಲ ನೀಡು ತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣ ವಾಗಿದೆ.
ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್‌ನಲ್ಲಿ ಬಕಾಶ ಎಂಬ ಹಾಸನ ಮೂಲದ ವ್ಯಕ್ತಿ, ತನ್ನ ವಾಸದ ಮನೆಯಲ್ಲೇ ರಾಜಾರೋಷವಾಗಿ ಬೆಂಗಳೂರಿನ ಪರವಾನಗಿ ಇಟ್ಟುಕೊಂಡು 4 ವರ್ಷದಿಂದ ಕಸಾಯಿಖಾನೆ ನಡೆಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಅಲ್ಲದೆ, ಪಟ್ಟಣದ ವಾರ್ಡ್ ನಂ.3ರ ಸುಭಾಷ ನಗರದಲ್ಲಿ 10ಕ್ಕೂ ಹೆಚ್ಚು ಅಕ್ರಮ ಕಸಾಯಿ ಖಾನೆಗಳು ಇವೆ. ಆದರೂ, ಸಂಬಂಧಪಟ್ಟವರು ಕ್ರಮಕೈಗೊಳ್ಳದೇ ಅವರ ಜೊತೆ ಕೈಜೋಡಿಸಿದ್ದಾರೆ ಎಂಬ ದೂರು ಜನರಿಂದ ಕೇಳಿ ಬರುತ್ತಿವೆ.
ವಾರ್ಡ್ ನಂ. 3 ಸುಭಾಷ ನಗರ, ವಾರ್ಡ್ ನಂ.14 ಕೆಲ್ಲೂರುಗೆ ಸೇರುವ ಹೌಸಿಂಗ್ ಬೋರ್ಡ್ ಹಾಗೂ ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಎ.ಬಿ.ಎಂ. ಹಳ್ಳಿಯಲ್ಲಿ ಅಕ್ರಮ ಕಸಾಯಿ ಖಾನೆಗಳು ತಲೆಎತ್ತಿದ್ದು, ಭಾನುವಾರ, ಗುರುವಾರ, ಶುಕ್ರವಾರ ಹೆಗ್ಗಿಲ್ಲದೆ ನಡೆಯುತ್ತಿವೆ. ಪಟ್ಟಣದ ಹೌಸಿಂಗ್ ಬೋಡ್ ìನಲ್ಲಿನ ವ್ಯಕ್ತಿ ಪ್ರತಿ ದಿನ ವ್ಯವಹಾರ ನಡೆಸುತ್ತಾರೆ ಎಂಬಆರೋಪ ಕೇಳಿ ಬಂದಿದೆ. ಈ ಅಕ್ರಮ ತಡೆಗಟ್ಟಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಏತಕ್ಕೆ ಎಂಬುವುದೇ ತಿಳಿಯುತ್ತಿಲ್ಲ. ಲಾಕ್‌ಡೌನ್ ವೇಳೆ ಪ್ರೊಬೆಷನರಿ ಪಿಎಸ್‌ಐ ಸುರೇಶ್ ಈ ಎಲ್ಲಾ ಅಡ್ಡೆಗಳ ಮೇಲೆ ದಾಳಿ ನಡೆಸಿ, ಗೋಮಾಂಸ ವಶಪಡಿಸಿಕೊಂಡು ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಈವರೆಗೂ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸ್ಥಳೀಯ ಆಡಳಿತ, ಅಧಿಕಾರಿಗಳು ವಿಫಲವಾಗಿದ್ದಾರೆ.
ಇದನ್ನೂ ಓದಿ :ಪೊಲೀಸರ ಮೂಲಕ ದೌರ್ಜನ್ಯ
ಕೋರ್ಟ್ ಮೆಟ್ಟಿಲೇರಬೇಕಾಗುತ್ತೆ: ಕಸಾಯಿ ಖಾನೆ ನನ್ನ ಮನೆಯ ಹಿಂಬದಿಯ ವಾಸದ ಮನೆಯಲ್ಲೇ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಬಗ್ಗೆ ಪಪಂ, ಪೊಲೀಸರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ವಕೀಲ ನಳರಾಜು ಆರೋಪಿಸಿದ್ದಾರೆ. ಅಧಿಕಾರಿ ಗಳು ಇದೇ ಪ್ರವೃತ್ತಿ ಮುಂದುವರಿಸಿದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಹೇಳಿದ್ದಾರೆ.