Advertisement

ಗೊಂದಲದ ಗೂಡಾದ ಆಶ್ರಯದ ಅಕ್ರಮವಾಸ!

03:19 PM Jan 20, 2021 | Team Udayavani |

ರಾಯಚೂರು: ಇಲ್ಲಿನ ಚಂದ್ರಬಂಡಾ ರಸ್ತೆಯಲ್ಲಿನ ಆಶ್ರಯ ಕಾಲೋನಿಯ ಅಕ್ರಮ ಮನೆ, ಶೆಡ್‌ಗಳ ತೆರವು ಕಾರ್ಯಾಚರಣೆ ಹಲವು ಗೊಂದಲಗಳಿಗೆ ಎಡೆ ಮಾಡಿದೆ. ಇಷ್ಟೆಲ್ಲ ಅವಾಂತರಕ್ಕೆ ರಾಜಕೀಯ ಕಾರಣವೋ, ಆಡಳಿತ ವರ್ಗದ ನಿಷ್ಕಾಳಜಿ ಕಾರಣವೋ ಎಂಬ ಜಿಜ್ಞಾಸೆ ಮೂಡಿದೆ. ಕೋಟೆ ಕೊಳ್ಳೆ ಹೊಡೆದ ಮೇಳೆ ದಿಡ್ಡಿ ಬಾಗಿಲು ಹಾಕಿದಂತೆ ದಶಕಗಳ ಕಾಲ ಅಲ್ಲಿ ಜನ ಶೆಡ್‌ ಗಳನ್ನು ಹಾಕಿಕೊಂಡಿದ್ದರೂ ಒಮ್ಮೆಯೂ ಹೋಗಿ ಪ್ರಶ್ನಿಸದ ಅಧಿಕಾರಿಗಳು; ಈಗ ನೋಟಿಸ್‌ ಕೂಡ ನೀಡದೆ ತೆರವಿಗೆ ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಇದೇ ವೇಳೆ ಈ ಸಮಸ್ಯೆ ಮುನ್ನೆಲೆಗೆ ಬರಲು ರಾಜಕಾರಣಿಗಳ ಸ್ವಾರ್ಥವೂ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಏನಿದು ಸಮಸ್ಯೆ..?: 1991-1992ರಲ್ಲಿ ಚಂದ್ರಬಂಡಾ ರಸ್ತೆಯಲ್ಲಿನ ಸರ್ವೇ ನಂಬರ್‌ 570 ಮತ್ತು 572ರ 17 ಎಕರೆ 1 ಗುಂಟೆ ಸ್ಥಳದಲ್ಲಿ ಒಟ್ಟು 514 ನಿವೇಶಗಳನ್ನು ನಗರಸಭೆಯಿಂದ ಹಂಚಿಕೆ ಮಾಡಲಾಗಿತ್ತು. ಅಲ್ಲಿ ಯಾವುದೇ ಮೂಲ ಸೌಲಭ್ಯಗಳೇ ಇಲ್ಲ ಎಂಬ ಕಾರಣಕ್ಕೆ ಅರ್ಹ ಫಲಾನುಭವಿಗಳು ಅಲ್ಲಿರದೇ ವಾಪಸ್‌ ಬಂದಿದ್ದರು. ಕಾಲಕ್ರಮೇಣ ಬಡವರು ಅದೇ ಪ್ರದೇಶದಲ್ಲಿ ವಾಸಿಸತೊಡಗಿದರು. ಅಲ್ಲದೇ, ಟಿನ್‌ ಶೆಡ್‌ಗಳನ್ನು ಹಾಕಿ ವಾಸಿತೊಡಗಿದ್ದಾರೆ. ಅದರಲ್ಲಿ ಸಾಕಷ್ಟು ಜನರಿಗೆ ಹಕ್ಕುಪತ್ರಗಳೇ ಇಲ್ಲ. ಈಗ ಅಕ್ರಮವಾಸಿಗಳ ತೆರವಿಗೆ ಮುಂದಾಗಿದ್ದಾಗಿ ಅಧಿಕಾರಿಗಳು ವಿವರಿಸುತ್ತಿದ್ದಾರೆ.

ಸರ್ಕಾರಿ ಜಾಗ ಮರೆತು ಹೋಯಿತೇ..?: ನಗರದಲ್ಲಿ ಬಡವರಿಗೆ ಮನೆ ನಿರ್ಮಿಸಲು, ಸ್ಮಶಾನ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಸ್ಥಳದ ಕೊರತೆ ಕಾರಣ ನೀಡಲಾಗುತ್ತಿದೆ. ಆದರೆ, 17 ಎಕರೆ ಸ್ಥಳದಲ್ಲಿ ಈ ರೀತಿ ಶೆಡ್‌ ನಿರ್ಮಿಸಿಕೊಳ್ಳುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು 12 ವರ್ಷಗಳ ಬಳಿಕ ಏಕಾಏಕಿ ತೆರವಿಗೆ ಮುಂದಾಗಿರುವುದು ಗೊಂದಲಕ್ಕೆಡೆ ಮಾಡಿದೆ. ಇಷ್ಟು ದೊಡ್ಡ ಸ್ಥಳವನ್ನು ಅಧಿಕಾರಿಗಳು ಏಕೆ ರಕ್ಷಣೆ ಮಾಡದೆ ಬಿಟ್ಟಿದ್ದರು ಎಂಬ ಪ್ರಶ್ನೆ ಮೂಡಿ ಬಂದಿದೆ.

ಇದನ್ನೂ ಓದಿ:ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಏರಿಕೆ

ಅಧಿಕಾರಿಗಳು ಯಾಕೆ ಮೌನಕ್ಕೆ ಶರಣಾಗಿದ್ದರು. ನಾವು ಕಷ್ಟಪಟ್ಟು ಮನೆ ನಿರ್ಮಿಸಿಕೊಂಡಿದ್ದು, ಈಗ ಏಕಾಏಕಿ ತೆರವು ಮಾಡಿದರೆ ನಮ್ಮ ಕತೆಯೇನು ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

Advertisement

ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ತೆರವು ಮಾಡುವ ಅಧಿಕಾರ ನಗರಾಡಳಿತಕ್ಕಿದೆ. ಆಶ್ರಯ ಕಾಲೋನಿಯಲ್ಲಿ ಸಾಕಷ್ಟು ಜನ ಅನಧಿಕೃತ ಶೆಡ್‌ ಹಾಗೂ ಮನೆ ನಿರ್ಮಿಸಿಕೊಂಡಿದ್ದಾರೆ. ಅಧಿ ಕೃತ ವಾಸಿಗಳಿಗೆ ಮಾತ್ರ ನೋಟಿಸ್‌ ನೀಡಬಹುದು. ಅನಧಿಕೃತ ವಾಸವಾಗಿದ್ದರೆ ನೀಡುವ ಅಗತ್ಯವಿಲ್ಲ. ಹೀಗಾಗಿ ತೆರವು ಕಾರ್ಯ ಕೈಗೊಳ್ಳಲಾಗಿದೆ.

ಎಚ್‌.ವೆಂಕಟೇಶ, ಪ್ರಭಾರ ಪೌರಾಯುಕ್ತ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next