Advertisement

ಹುಮನಾಬಾದನಲ್ಲಿ ಅಕ್ರಮ ಮರಳು ಸಾಗಾಟ: ಅಧಿಕಾರಿಗಳಿಂದ  ದಾಳಿ

01:25 PM May 02, 2022 | Team Udayavani |

ಹುಮನಾಬಾದ: ಪಟ್ಟಣದಲ್ಲಿ ಎಗ್ಗಿಲ್ಲದೇ ಮರಳು ಮಾಫಿಯಾ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದ ಕೈಗಾರಿಕಾ ಪ್ರದೇಶ ಸೇರಿದಂತೆ ತಾಲೂಕಿನ ವಿವಿಧಡೆ ಪರವಾನಗಿ ರಹಿತ ಮರಳು ಸಾಗಾಟ ನಡೆಯುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

Advertisement

ತಾಲೂಕಿನ ಜಲಸಂಗಿ ಕ್ರಾಸ್ ಹತ್ತಿರ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಟಿಪ್ಪರ್ ವಾಹನ ಪರಿಶೀಲನೆ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗದಿಂದ ಬೀದರ ಜಿಲ್ಲೆಯ ಔರಾದವರೆಗೆ ಸಾಗಿಸುವ ಪರವಾನಗಿ ಪಡೆದಿರುವುದು ಕಂಡುಬಂದಿದೆ. ಆದರೆ, ವಾಹನದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿರುವುದು ಕಂಡುಬಂದ ಹಿನ್ನೆಲೆಯಲ್ಲಿ ದಂಡ ವಿಧಿಸುವುದಾಗಿ ತಹಶೀಲ್ದಾರ ಡಾ। ಪ್ರದೀಪಕುಮಾರ ಹಿರೇಮಠ ತಿಳಿಸಿದ್ದು, ಮುಂದಿನ ದಿನಗಳಲ್ಲಿಯೂ ಕೂಡ ಕಾರ್ಯಚರಣೆ ಮಾಡುತ್ತೇವೆ. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಅಕ್ರಮಕ್ಕೆ ಸಾಥ್ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಜಲಸಂಗಿ ಬಳಿ ಮರಳು ವಾಹನ ಪರಿಶೀಲಿಸುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪಟ್ಟಣದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಮರಳು ತುಂಬಿದ ವಾಹನಗಳು ಜಾಗಖಾಲಿ ಮಾಡಿವೆ. ಅಧಿಕಾರಿಗಳ ತಂಡ ಕೈಗಾರಿಕಾ ಪ್ರದೇಶ ತಲುಪುವ ಮುನ್ನವೇ ವಾಹನಗಳ ಸಾಲು ಖಾಲಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೂ, ಕೂಡ ಒಂದು ವಾಹನ ಅಲ್ಲೇ ನಿಂತಿದ್ದು ಅದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ ಜೊತೆಗೆ ಸಿಪಿಐ ಶರಬಸಪ್ಪ ಕೊಡ್ಲಾ, ಪಿಎಸ್ಐ ಮಂಜುನಾಥಗೌಡ ಪಾಟೀಲ ಸೇರಿದಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.

ಇದನ್ನೂ ಓದಿ:ಪಿಎಸ್ಐ ಹಗರಣದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಶಾಮೀಲಾಗಿದೆ: ಎಚ್.ವಿಶ್ವನಾಥ್ 

Advertisement

ಅಧಿಕಾರಿಗಳು ಮೌನ: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 65ರ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು ಜಿಲ್ಲೆ ಹಾಗೂ ‍ ನೆರೆರಾಜ್ಯಗಳಿಗೆ  ರಾಜಾರೋಷವಾಗಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಕೆಲವರು ಪರವಾನಿಗೆ ಪಡೆದು ಮರಳು ಸಾಗಿಸಿದರೆ ಇನ್ನು ಬಹುತೇಕರು ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಮಾಹಿತಿಗಳು ಕೇಳಿಬರುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿದ್ದು, ಯಾವುದೇ ಕಠಿಣ ಕ್ರಮಕ್ಕೆ ಈವರೆಗೂ ಮುಂದಾಗಿಲ್ಲ.

ನಿತ್ಯ ಪರಿಶೀಲನೆ ನಡೆಸಿ

ಮರಳು ತುಂಬಿದ ವಾಹನಗಳು ಪ್ರತಿನಿತ್ಯ ಪಟ್ಟಣದ ಮೂಲಕ ವಿವಿಧಡೆ ಸಂಚರಿಸುತ್ತಿದ್ದು, ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಲಿ. ವಾಹನಗಳ ಸೂಕ್ತ ದಾಖಲೆಗಳು ಪರಿಶೀಲನೆ ಮಾಡಬೇಕು. ಒಂದು ದಿನ ದಾಳಿ ಮಾಡಿಬಿಡುವ ಬದಲಿಗೆ ಪ್ರತಿನಿತ್ಯ ಈ ಕೆಲಸವಾದರೆ ಅಕ್ರಮಕ್ಕೆ ಬ್ರೇಕ್ ಹಾಕಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ಪರವಾನಿಗೆ ರಹಿತ ಮರಳು ವ್ಯಾಪಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next