Advertisement

ಉದ್ಯಾವರ: ಅಕ್ರಮ ಮರಳುಗಾರಿಕೆ ಬಗ್ಗೆ ಧ್ವನಿಯೆತ್ತಿದ ವ್ಯಕ್ತಿಗೆ ಬೆದರಿಕೆ, ಸ್ಕೂಟರ್‌ ಧ್ವಂಸ

11:45 PM Mar 20, 2023 | Team Udayavani |

ಕಾಪು : ಉದ್ಯಾವರ ಮಠದಕುದ್ರು ಪರಿಸರದ ಹೊಳೆ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಪಟ್ಟ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ, ಜೀವ ಬೆದರಿಕೆಯೊಡ್ಡಿದ್ದು ಮಾತ್ರವಲ್ಲದೇ ರಾತ್ರಿ ನಿಲ್ಲಿಸಿ ಹೋಗಿದ್ದ ಸ್ಕೂಟರ್‌ನ್ನು ಪುಡಿಗಟ್ಟಿದ ಘಟನೆ ಉದ್ಯಾವರದಲ್ಲಿ ನಡೆದಿದೆ.

Advertisement

ಉದ್ಯಾವರ ಮಠದಕುದ್ರು ವಿಬುಧೇಶನಗರದ ನಿವಾಸಿ ಭಾಸ್ಕರ್‌ ಕರ್ಕೇರ ಅವರು ಮಾ. 18ರಂದು ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾ ಮೀಜಿಯವರು ಮಠದಕುದ್ರು ಪರಿಸರದ ಹೊಳೆ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದು ಅಕ್ರಮ ಮರಳುಗಾರಿಕೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು.

ರಾತ್ರಿ ತನ್ನ ಸ್ಕೂಟರ್‌ನಲ್ಲಿ ಆಗಮಿಸಿದ ಅವರು ರಾ.ಹೆ. 66ರ ಸನಿಹದಲ್ಲಿರುವ ಸೋದೆ ಮಠದ ಜಾಗದಲ್ಲಿ ಸ್ಕೂಟರ್‌ನ್ನು ನಿಲ್ಲಿಸಿ ಮನೆಗೆ ಹೋಗುತ್ತಿದ್ದಾಗ ಮೂರು ಮಂದಿ ಅಪರಿಚಿತರು ಭಾಸ್ಕರ್‌ ಕರ್ಕೇರ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಸ್ಕೂಟರ್‌ನ್ನು ಕೆಳಕ್ಕೆ ದೂಡಿದ್ದರು. ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಮನೆಗೆ ತೆರಳಿದ್ದರು. ಬೆಳಗ್ಗೆ ಸ್ಕೂಟರ್‌ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್‌ನ್ನು ಪುಡಿಗೈದು ಹಾನಿಗೊಳಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದರಿಂದಾಗಿ ಸುಮಾರು 10 ಸಾವಿರ ರೂ. ವರೆಗೆ ಸೊತ್ತು ನಷ್ಟ ಉಂಟಾಗಿದೆ.

ಈ ಬಗ್ಗೆ ಭಾಸ್ಕರ್‌ ಕರ್ಕೇರ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next