ಇಂಡಿ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ತಡೆಯುವಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಪೀಠ ದಿನಾಂಕ 30 ಮೇ 2017 ರಂದು ನೀರಿದ್ದ ಭಾಗದಲ್ಲಿ ಮರಳುಗಾರಿಕೆ ಮಾಡಬಾರದು ಮತ್ತು ಯಂತ್ರಗಳ ಸಹಾಯದಿಂದ ಮರಳು ಎತ್ತುವುದಾಗಲಿ, ಮಾನವರ ಸಹಾಯದಿಂದ ಮರಳು ಎತ್ತುವುದಾಗಲಿ ಮಾಡಬಾರದು ಎಂದು ಸೂಚಿಸಿದೆ. ಆದರೂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮರಳುಗಾರಿಕೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಅಕ್ರಮ ಮರಳು ದಂಧೆಯ ಹಿಂದೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ ಕೈವಾಡವಿದೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶ ಹಾಗೂ ಬೋಟ್ ಮುಖಾಂತರ ಮರಳು ಎತ್ತುತ್ತಿರುವ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಭೀಮಾತೀರದ ಗ್ರಾಮವಾದ ಚಣೇಗಾಂವ್‌ನಲ್ಲಿ ಮೂರು ಬೋಟ್, ಹಿಂಗಣಿ ಗ್ರಾಮದ ದಡದ ಭೀಮಾನದಿಯಲ್ಲಿ ಒಂದು ಬೋಟ್, ದಸೂರ ಹತ್ತಿರದ ನದಿಯಲ್ಲಿ ಎಂಟು ಬೋಟ್ ಗಳ ಮುಖಾಂತರ ಪ್ರತಿನಿತ್ಯ ರಾತ್ರಿ ಸುಮಾರು ನೂರಾರು ವಾಹನಗಳು ಮರಳು ತುಂಬಿಕೊಂಡು ರಾಷ್ಟ್ರಿಯ ಹೆದ್ದಾರಿ ಮಾರ್ಗವಾಗಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಝಳಕಿ ಚೆಕ್ ಪೋಸ್ಟ್ ತಪ್ಪಿಸಿ ಸೋಲಾಪುರ ದಿಂದ ಬರುವ ವಾಹನಗಳು ಸಿಗಣಾಪುರ, ನಂದರಗಿ, ಕಪನಿಂಬರಗಿ ಮಾರ್ಗವಾಗಿ ಹೋರ್ತಿಗೆ ಬಂದು ಕೂಡಿ ಮರಳು ಸಾಗಿಸುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅಕ್ರಮ ಮರಳುಗಾರಿಕೆ ಕುರಿತು ಝಳಕಿ, ಚಡಚಣ, ಹೋರ್ತಿ ಪಿಎಸ್‌ಐ ಅವರಿಗೆ ದೂರವಾಣಿ ಮುಖಾಂತರ ನಾನು ಸಾಕಷ್ಟುಬಾರಿ ಹೇಳಿದರೂ ಇಲ್ಲಿ ಯಾವುದೇ ಅಕ್ರಮ ಮರಳು ಸಾಗಾಟ ನಡೆಯುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ಬುಧವಾರ ಸಿಂದಗಿ ತಾಲೂಕಿನ ದೇವಣಗಾಂವ್ ಗ್ರಾಮಕ್ಕೆ ಭೇಟಿ ನೀಡಿದ ಐಜಿಪಿ ಅಲೋಕಕುಮಾರ ಭೀಮಾತೀರದ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಮಟ್ಟ ಹಾಕುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ ಸಂಗತಿ. ಆದರೆ ಭೀಮಾತೀರ ಎಂದಾಕ್ಷಣ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಇವರಿಗೆ ಕಣ್ಣಿಗೆ ಕಾಣುತ್ತಿಲ್ಲವೇ ಈ ಬಗ್ಗೆ ಕೂಡಾ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಪುರಸಭೆ ಅಧ್ಯಕ್ಷ ಯಮುನಾಜಿ ಸಾಳುಂಕೆ, ಭೀಮನಗೌಡ ಪಾಟೀಲ, ಶ್ರೀಮಂತ ಬಾರಿಕಾಯಿ, ಮಲ್ಲು ಹಾವಿನಾಳಮಠ, ಸಿದ್ದಣ್ಣಾ ಶಿವೂರ, ರಮೇಶ ಅರ್ಜುಣಗಿ, ಶಿವಾನಂದ ಕುಂಬಾರ ಸೇರಿದಂತೆ ಅನೇಕರಿದ್ದರು.