ಗಂಗಾವತಿ: ಆನೆಗೊಂದಿ – ಸಾಣಾಪೂರ ಸುತ್ತಲಿರುವ ಅನಧಿಕೃತ ರೆಸಾರ್ಟ್, ಹೊಟೇಲ್‌ಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆರವು ಮಾಡಲು ನಿರ್ಧರಿಸಿ ಸಂಬಂಧಪಟ್ಟ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದ ನಂತರ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆಗೆ ಇಳಿಯುವ ಮುಂಚೆ ಸ್ಥಳೀಯರು ಸಾಮಾನುಗಳಿಗೆ ಧಕ್ಕೆಯಾಗದಂತೆ ಸ್ವಯಂ ಪ್ರೇರೆಯಿಂದ ತೆರವು ಮಾಡಿಕೊಳ್ಳುವುದಾಗಿ ಮಾಲೀಕರ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪಂದಿಸಿ ಸ್ವಯಂ ತೆರವು ಮಾಡಿಕೊಳ್ಳಲು ಎರಡು ದಿನ ಅವಕಾಶ ನೀಡಿದ್ದು ತೆರವು ಕಾರ್ಯಕ್ಕೆ ಕೋರ್ಟ್ ನಿಂದ ಸ್ಟೇ ಪಡೆದ ರೆಸಾರ್ಟ್, ಹೊಟೇಲ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿ ಬೀಗ ಜಡಿದು ಸೀಜ್ ಮಾಡಲಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಆನೆಗೊಂದಿ ಭಾಗದ ಕಡೆಬಾಗಿಲು, ಚಿಕ್ಕರಾಂಪೂರ, ಜಂಗ್ಲಿ, ರಂಗಾಪೂರ, ಹನುಮನಹಳ್ಳಿ, ವಿರೂಪಾಪೂರಗಡ್ಡಿ, ರಾಘವೇಂದ್ರ ಕಾಲೋನಿ(ಬೆಂಚಿಕುಟ್ರಿ), ತಿರುಮಲಾಪೂರ ಗ್ರಾಮಗಳಲ್ಲಿ ವಿರೂಪಾಪೂರಗಡ್ಡಿ ತೆರವಿನ ನಂತರ ಸುಮಾರು 58 ರೆಸಾರ್ಟ್, ಹೊಟೇಲ್‌ಗಳು ಆರಂಭವಾಗಿದ್ದವು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಸ್ಥಳೀಯರು ವಾಣಿಜ್ಯ ವ್ಯವಹಾರ ನಡೆಸುತ್ತಿದ್ದು ಇದರಿಂದ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು ಹಂಪಿ ಪ್ರದೇಶದ ಪಾವಿತ್ರತೆ ಹಾಳಾಗುತ್ತಿದೆ ಎಂದು ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಕೆಲ ಮಠಾಧೀಶರು ಬೆಂಗಳೂರಿನ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಹಲವು ಭಾರಿ ಕೋರ್ಟ್ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚನೆ ನೀಡಿದರೂ ಕೋರ್ಟ್ ಆದೇಶ ಪಾಲನೆಯಾಗಿಲ್ಲ ಎಂದು ಮತ್ತೊಮ್ಮೆ 2017 ರಲ್ಲಿ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿದ್ದು ಇತ್ತೀಚೆಗೆ ಈ ಕೇಸ್ ವಿಚಾರಣೆ ನಡೆದು ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು ಮತ್ತು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕೋರ್ಟ್ ಗರಂ ಆಗಿದ್ದು ಜೂ.26 ರಂದು ಪುನಹ ಕೋರ್ಟ್ ಕೇಸ್ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅನಧಿಕೃತ ರೆಸಾರ್ಟ್, ಹೊಟೇಲ್ ತೆರವು ಕುರಿತು ಸಂಪೂರ್ಣ ವರದಿ ಕೇಳಿದ ಹಿನ್ನೆಲೆಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ತುಂಬಾ ಗಂಭೀರವಾಗಿದ್ದು ಹಂಪಿ ಭಾಗದಲ್ಲಿ ಸೋಮವಾರ ಅನಧಿಕೃತ ರೆಸಾರ್ಟ್, ಹೊಟೇಲ್ ತೆರವುಗೊಳಿಸಿದೆ. ಆನೆಗೊಂದಿ ಭಾಗದಲ್ಲಿಯೂ ಸಂಬಂಧಪಟ್ಟ ಇಲಾಖೆಗಳ 6 ತಂಡಗಳನ್ನು ರಚಿಸಿ ತೆರವು ಕಾರ್ಯಾಚರಣೆಗೆ ತೆರಳಿದ ಸಂದರ್ಭದಲ್ಲಿ ರೆಸಾರ್ಟ್, ಹೊಟೇಲ್ ಮಾಲೀಕರು ಸ್ವಯಂ ತೆರವು ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜೆಸಿಬಿ ಕಾರ್ಯಾಚರಣೆ ಎರಡು ದಿನ ನಿಲ್ಲಿಸಿ ಸ್ವಯಂ ತೆರವಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಮೂಲಕ ಸ್ಟೇ ತಂದಿರುವ 15 ರೆಸಾರ್ಟ್, ಹೊಟೇಲ್‌ಗಳ ವಿದ್ಯುತ್ ಸಂಪರ್ಕ ಕಡಸಿತಗೊಳಿಸಿ ಬೀಗ ಜಡಿದು ಸೀಜ್ ಮಾಡಲಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ರೆಸಾರ್ಟ್,ಹೊಟೇಲ್‌ಗಳನ್ನು ತೆರವು ಮಾಡಲು ಪ್ರಾಧಿಕಾರ ಸೂಚನೆ ಹಿನ್ನೆಲೆಯಲ್ಲಿ 6 ತೆರವು ಕಾರ್ಯಾಚರಣೆ ತಂಡ ರಚಿಸಿ ಕಾರ್ಯಾಚರಣೆಗೆ ಇಳಿಯುವ ಸಂದರ್ಭದಲ್ಲಿ ಮಾಲೀಕರ ಮನವಿ ಮೇರೆಗೆ ಸ್ವಯಂ ತೆರವಿಗೆ ಎರಡು ದಿನಗಳ ಕಾಲ ಮಾನವೀಯ ದೃಷ್ಠಿಯಿಂದ ಅವಕಾಶ ನೀಡಲಾಗಿದೆ.ಸ್ವಯಂ ತೆರವು ಮಾಡುವ ಕಾರ್ಯ ವೀಕ್ಷಣೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. 15 ರೆಸಾರ್ಟ್,ಹೊಟೇಲ್‌ಗಳ ಮಾಲೀಕರು ಕೋರ್ಟ್ನಿಂದ ಸ್ಟೇ ತಂದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಬೀಗ ಜಡಿದು ಸೀಜ್ ಮಾಡಲಾಗಿದೆ. ಈ ಎಲ್ಲಾ ವರದಿಯನ್ನು ಜಿಲ್ಲಾಧಿಕಾರಿಗಳು ಮತ್ತು ಪ್ರಾಧಿಕಾರದ ಆಯುಕ್ತರಿಗೆ ತಿಳಿಸಲಾಗಿದೆ.
-ಬಸವಣೆಪ್ಪ ಕಲಶೆಟ್ಟಿ ಸಹಾಯಕ ಆಯುಕ್ತರು.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ಆನೆಗೊಂದಿ ಭಾಗದಲ್ಲಿ ಸ್ಥಳೀಯರು ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲ. ತಮ್ಮ ಅವಧಿಯಲ್ಲಿ ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ಧಿಯಿಂದಾಗಿ ನೀಲನಕ್ಷೆ ತಯಾರಿಸಿ 125 ಕೋಟಿ ಅನುದಾನ ಮಂಜೂರಿ ಮಾಡಲಾಗಿತ್ತು. ಜತೆಗೆ ಆನೆಗೊಂದಿ ಭಾಗದ ರೈತರು ಸಹ ತಮ್ಮ ಗದ್ದೆಗಳಲ್ಲಿ ಶೇ.5 ರಷ್ಟು ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಪ್ರಾಧಿಕಾರದ ನಿಯಮದಲ್ಲಿ ಬದಲಾವಣೆ ಮಾಡುವ ಗೆಜೆಟ್ ಪ್ರಕಟಿಸಿ ಸ್ಥಳೀಯರ ಆಕ್ಷೇಪ ಕರೆಯಲಾಗಿದ್ದು ರಾಜ್ಯದ ನಗರಾಭಿವೃದ್ಧಿ ಇಲಾಖೆ ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳಲ್ಲಿ ಬದಲಾವಣೆ ಮಾಡಿ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸ್ಥಳೀಯರು ಪ್ರವಾಸೋದ್ಯಮದ ಮೂಲಕ ದುಡಿಯಲು ಅವಕಾಶ ಕಲ್ಪಿಸಬೇಕು. ಕಮಲಾಪೂರವನ್ನು ಕೋರ್ ಝೋನ್ ವ್ಯಾಪ್ತಿಯಿಂದ ತೆಗೆದುಹಾಕಿದ್ದು ಹಾಗೂ ಕಾರಿಗನೂರನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈ ಬಿಟ್ಟಿದ್ದು ಸಹ ಪ್ರಾಧಿಕಾರದ ಮಲತಾಯಿ ಧೋರಣೆ ತೋರಿಸುತ್ತದೆ. ಪ್ರತೇಕ ಕಿಷ್ಕಿಂಧಾ ಪ್ರಾಧಿಕಾರ ರಚಿಸಿ ನಿಯಮಗಳನ್ನು ರೂಪಿಸುವ ಕುರಿತು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಈಗಿನ ಸರಕಾರ ಅನುಷ್ಠಾನ ಮಾಡಬೇಕು.
-ಪರಣ್ಣ ಮುನವಳ್ಳಿ ಮಾಜಿ ಶಾಸಕರು.
– ಕೆ.ನಿಂಗಜ್ಜ