Advertisement

ಪ್ರೌಢಶಾಲಾ ಸಹ ಶಿಕ್ಷಕರ ಅಕ್ರಮ ನೇಮಕ: 11 ಶಿಕ್ಷಕರ ಬಂಧನ

09:36 PM Sep 06, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್‌ 2 ಸಹ ಶಿಕ್ಷಕರು ಮತ್ತು ಗ್ರೇಡ್‌-1ರ ದೈಹಿಕ ಶಿಕ್ಷಕರ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುಮಕೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 11 ಮಂದಿ ಶಾಲಾ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಗ್ರಾಮದ ಶಾಲೆಯ ಶಮೀನಾಜ್‌ ಬಾನು (34), ಕುಣಿಗಲ್‌ ತಾಲೂಕಿನ ಕೊಡವತ್ತಿ ಗ್ರಾಮದ ಶಾಲೆಯ ರಾಜೇಶ್ವರಿ ಜಗ್ಲಿ (35), ತಿಪಟೂರು ತಾಲೂಕಿನ ಆಲ್ಬೂರ್‌ ಗ್ರಾಮದ ಶಾಲೆಯ ಕಮಲಾ(35), ಕುಣಿಗಲ್‌ ತಾಲೂಕಿನ ನಾಗಸಂದ್ರ ಗ್ರಾಮದ ಶಾಲೆಯ ನಾಗರತ್ನ(42), ತುರುವೇಕೆರೆ ತಾಲೂಕಿನ ಹುಲಿಕಲ್‌ ಗ್ರಾಮ ಶಾಲೆಯ ಎಚ್‌.ದಿನೇಶ್‌(38), ಚಿಕ್ಕನಾಯಕನಹಳ್ಳಿ ತಾಲೂಕಿನ ಕಮ್ಲಾಪುರ ಗ್ರಾಮದ ಶಾಲೆಯ ನವೀನ್‌ ಹನುಮೇಗೌಡ(35), ಕುಣಿಗಲ್‌ ತಾಲೂಕಿನ ಅಮೃತೂರು ಗ್ರಾಮದ ಶಾಲೆಯ ನವೀನ್‌ ಕುಮಾರ್‌(38), ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಶಾಲೆಯ ಎಸ್‌. ದೇವೇಂದ್ರ ನಾಯಕ್‌, ಕುಣಿಗಲ್‌ ತಾಲೂಕಿನ ಹೊಳಗೇರಿ ಗ್ರಾಮ ಶಾಲೆಯ ಆರ್‌.ಹರೀಶ್‌(37), ತುರುವೇಕೆರೆ ತಾಲೂಕಿನ ಬಿ.ಎಂ.ಪ್ರಸನ್ನ(42) ಮತ್ತು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಮಹೇಶ್‌ ಶ್ರೀಮಂತ ಸೂಸಲಾಡಿ(38) ಎಂಬುವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ.

ಆರೋಪಿಗಳು 2013-14 ಮತ್ತು 2014-15 ಸಾಲಿನಲ್ಲಿ ನಡೆದ ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್‌ 2 ಸಹ ಶಿಕ್ಷಕರು ಮತ್ತು ಗ್ರೇಡ್‌-1ರ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ನೇಮಕವಾಗಿದ್ದಾರೆ. ಈ ಸಂಬಂಧ ಇತ್ತೀಚೆಗೆ ರಾಜ್ಯ ಸರ್ಕಾರದ ಅಕ್ರಮ ನೇಮಕಾತಿಗೊಂಡಿರುವ ಸಹ ಶಿಕ್ಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಿಐಡಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ  ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಐಡಿ ತಿಳಿಸಿದೆ.

ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಶಿಕ್ಷಕರ ನೇಮಕಾತಿ ಪ್ರಕರಣದ ತನಿಖೆಗೆ ಸಿಐಡಿಗೆ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next