Advertisement

ಬಿಡಿಎಯಿಂದ ಕಾರ್ಯಾಚರಣೆ : 300 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ಜಾಗ ವಶ

11:40 AM Jan 05, 2022 | Team Udayavani |

ಬೆಂಗಳೂರು: ಬಿಡಿಎ ಅಧಿಕಾರಿಗಳು ರಾಜಾಜಿನಗರ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು ಸುಮಾರು 300 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ. ಕಳೆದ ಮೂರು ದಿನಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು ಪೆಟ್ರೋಲ್‌ ಬಂಕ್‌, ಗ್ಯಾರೇಜ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಡಿಎನ ಹಿರಿಯ
ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮತ್ತು ಆಯುಕ್ತ ರಾಜೇಶ್‌ ಗೌಡ ಮಾರ್ಗದರ್ಶನದಲ್ಲಿ ಬಿಡಿಎ ಪೊಲೀಸ್‌ ವರಿಷ್ಠಾಧಿಕಾರಿ ಭಾಸ್ಕರ್‌ ಮತ್ತು ರವಿಕುಮಾರ್‌ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳು ಮತ್ತು ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

ರಾಜಾಜಿನಗರ 6ನೇ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ 2 ಎಕರೆ 20 ಗುಂಟೆ ಬಿಡಿಎ ಜಾಗದಲ್ಲಿ ಅತಿಕ್ರಮವಾಗಿ 5 ತಾತ್ಕಾಲಿಕ ಶೆಡ್‌ಗಳು ಮತ್ತು 1 ಗ್ಯಾರೇಜ್‌ ಅನ್ನು ನಿರ್ಮಾಣ ಮಾಡಲಾಗಿತ್ತು. ಹಲವು ಬಾರಿ ನೊಟೀಸ್‌ ನೀಡಿದ್ದರೂ ಅತಿಕ್ರಮ ತೆರವು ಮಾಡಿರಲಿಲ್ಲ.ಈ ಜಾಗದ ಅಂದಾಜು ಮೌಲ್ಯ 175 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. ವಿಜಯನಗರ
ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೇ ನಂಬರ್‌ 329/3 ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್‌ ಬಂಕ್‌ ಮತ್ತು ಖಾಲಿ ಜಾಗ ಸೇರಿ ಒಟ್ಟು 1 ಎಕರೆ 9 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಭೂ ಮಾಲೀಕರು ಈ ಸಂಬಂಧ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿದರು. ನ್ಯಾಯಾಲಯದಲ್ಲಿ ಅವರ ಪರವಾಗಿ ನೀಡಲಾಗಿದ್ದ ತೀರ್ಪನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಹೋಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಬಿಡಿಎ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಸದರಿ ಜಾಗವನ್ನು ಬಿಡಿಎ ವಶಕ್ಕೆ ಪಡೆಯಲಾಗಿದೆ .ಈ ಜಾಗದ ಅಂದಾಜು ಮೌಲ್ಯ 125 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, 300 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಬಿಡಿಎ ಆಸ್ತಿಯೆಂದರೆ ಅದು ಸಾರ್ವಜನಿಕರ ಆಸ್ತಿಯಾಗಿರುತ್ತದೆ. ಈ ಆಸ್ತಿ ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ಸರ್ಕಾರದ
ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next