ಶಿಡ್ಲಘಟ್ಟ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಅಕ್ರಮವಾಗಿ ಕೊಳಾಯಿ ಸಂಪರ್ಕ ಮತ್ತು ಮೋಟಾರ್ ಅಳವಡಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ನಗರಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ ಎಚ್ಚರಿಕೆ ನೀಡಿದರು. ನಗರದ 20ನೇ ವಾರ್ಡ್‌ನ ನಿಸಾರ್ ಪಾಳ್ಯದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ನಂತರ ಮಾತನಾಡಿದರು.
ನಗರದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ಆಡಳಿತ ಬದ್ಧವಾಗಿದೆ. ಕುಡಿಯುವ ನೀರು ಪೂರೈಕೆಗಾಗಿ ಕೊರೆಯುತ್ತಿರುವ ಕೊಳವೆಬಾವಿಗಳು ವೈಫಲ್ಯದಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಯಾವ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ಸಮಾನವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾನೂನು ಕ್ರಮ: ನಗರದಲ್ಲಿ ಕುಡಿಯುವ ನೀರು ಪಡೆಯುವ ಸಲುವಾಗಿ ಕೆಲವರು ಅಕ್ರಮವಾಗಿ ಕೊಳಾಯಿ ಸಂಪರ್ಕ ಪಡೆದುಕೊಂಡಿದ್ದಾರೆ. ಮೋಟಾರ್ ಅಳವಡಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರತಿಯೊಂದು ವಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸುತ್ತಿದ್ದು, ಯಾರಾದರೂ ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಂಡಿರುವುದು ಪತ್ತೆಯಾದರಲ್ಲಿ ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ನೀರುಗಂಟಿಗಳಿಗೆ ಸೂಚನೆ: ಕುಡಿಯುವ ನೀರು ಪೂರೈಕೆಗಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡು ತರುವಾಯ ಯಾರಿಗೂ ನೀರು ಪೂರೈಕೆ ವಿಚಾರದಲ್ಲಿ ತಾರತಮ್ಯ ಆಗಬಾರದು ಎಂದು ನೀರುಗಂಟಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಿಸಾರ್ ಪಾಳ್ಯದಲ್ಲಿ ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಂಡಿದ್ದರೆ ಅಥವಾ ಮೋಟಾರ್ ಅಳವಡಿಸಿದರೆ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಪೌರಾಯುಕ್ತರು ತಮಗೆ ಮಾಹಿತಿ ನೀಡಬೇಕೆಂದು ನಾಗರಿಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮನೆಯ ಕೊಳಚೆ ನೀರು ರಸ್ತೆಗೆ ಹರಿಸುತ್ತಿರುವುದನ್ನು ನೋಡಿ ಕಿಡಿಕಾರಿದ ಪೌರಾಯುಕ್ತರು, ನೀರು ಸರಾಗವಾಗಿ ಹರಿಯಲು ಪೈಪ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು. ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದರು. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಆಂಜಿನಪ್ಪ, ಸಿಬ್ಬಂದಿ ಅಪ್ಪಿ, ಕಾಂಗ್ರೆಸ್ ಮುಖಂಡ ಮಹೆಬೂಬ್ ಪಾಷ, ವಕೀಲ ನೌಷಾದ್ ಅಲಿ, ಬಾಬು, ಫಯಾಝ್ ಪಾಷ ಉಪಸ್ಥಿತರಿದ್ದರು.
ಶಾಸಕರ ಕಾಳಜಿಯಿಂದ ನಾಗರಿಕರಿಗೆ ಶುದ್ಧ ನೀರು ಪೂರೈಕೆ ಮಾಡಲು ನಗರದ ವಿವಿಧ ವಾರ್ಡ್‌ಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಯೋಜನೆ ಸಿದ್ಧಪಡಿಸಿದ್ದು, ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು.
-ಜಿ.ಎನ್.ಚಲಪತಿ, ಪೌರಾಯುಕ್ತ