Advertisement

ಎಸಿಸಿಯಿಂದ ಅಕ್ರಮ ಗಣಿಗಾರಿಕ

12:58 PM Mar 14, 2019 | |

ವಾಡಿ: ರೈತನೊಬ್ಬನಿಗೆ ಸೇರಿದ 7.12 ಎಕರೆ ಕೃಷಿ ಜಮೀನಿನಲ್ಲಿ ಎಸಿಸಿ ಕಂಪನಿ ಅಕ್ರಮವಾಗಿ ಗಣಿಗಾರಿಕೆ ಆರಂಭಿಸಿದ ಸಂಗತಿ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ನಿವಾಸಿ ಮೃತ ರೈತ ಮಲ್ಲಪ್ಪ ನಿಂಗಪ್ಪ ಹರಿಜನ ಎಂಬುವವರಿಗೆ ಸೇರಿದ ಇಂಗಳಗಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.191ರಲ್ಲಿನ 7.12 ಎಕರೆ ಜಮೀನಿನಲ್ಲಿ ಸದ್ಯ 3.12 ಎಕರೆ ಕೃಷಿ ಭೂಮಿಯಲ್ಲಿ ಭಾರಿ ಪ್ರಮಾಣದ ಮದ್ದುಗಳಿಂದ ನ್ಪೋಟಿಸಲಾಗಿದೆ. ತೊಗರಿ
ರಾಶಿ ಮಾಡಿಕೊಂಡು ಮನೆ ಸೇರಿರುವ ಜಮೀನು ವಾರಸುದಾರರಿಗೆ ತಮ್ಮ ಭೂಮಿ ಗಣಿಗಾರಿಕೆಗೆ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗಿದ್ದೇ ತಿಂಗಳ ನಂತರ. ರೈತನಿಗೆ ವಿಷಯ ಮುಟ್ಟುವ ವರೆಗೆ 3.12 ಎಕರೆ ಭೂಮಿ ಗಣಿಗಾರಿಕೆಗೆ ಬಳಕೆಯಾಗಿದೆ. 

ಜಮೀನು ಕಳೆದುಕೊಂಡ ರೈತ ಕುಟುಂಬ ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಎಸಿಸಿ ಕಂಪನಿ ತನ್ನ ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಲು ಈಗಾಗಲೇ ಇಂಗಳಗಿ ಗ್ರಾಮದ ರೈತರ ಒಟ್ಟು 400ಕ್ಕೂ ಹೆಚ್ಚು ಎಕರೆ ಭೂಮಿ ಖರೀದಿಸಿದೆ. ಎಸಿಸಿ ಖರೀದಿಸಿದ ಜಮೀನುಗಳ ಮಧ್ಯೆ ಮೃತ ರೈತ ಮಲ್ಲಪ್ಪ ನಿಂಗಪ್ಪ ಹರಿಜನ ಅವರಿಗೆ ಸೇರಿದ 7.12 ಎಕರೆ ಜಮೀನಿದೆ. ಷರತ್ತುಗಳಿಗೆ ಒಪ್ಪದ ಕಾರಣ ರೈತ ದಿ| ಮಲ್ಲಪ್ಪ ಅವರ ಪುತ್ರ ಶ್ರೀನಿವಾಸ ಹರಿಜನ ಕಂಪನಿಗೆ ಭೂಮಿ ಮಾರಾಟ ಮಾಡಲು ನಿರಾಕರಿಸಿದ್ದ ಎಂದು ಗೊತ್ತಾಗಿದ್ದು, ಈ ಬಿಕ್ಕಟ್ಟು ಕಗ್ಗಂಟಾಗಿ ಗಣಿಗಾರಿಕೆ ಮಾಡಲು ಕಂಪನಿಗೆ ತೊಡಕಾಗಿತ್ತು ಎನ್ನಲಾಗಿದೆ. ಸಂಧಾನ ಫಲಿಸದ ಕಾರಣ ಜಮೀನು ಖರೀದಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 

ನ್ಯಾಯ ಸಿಗದಿದ್ದರೆ ಆತ್ಮಹತ್ಯೆ: ನಮ್ಮ ಜಮೀನಿನ ಸುತ್ತಲ ನೂರಾರು ಎಕರೆ ಭೂಮಿಯನ್ನು ಎಸಿಸಿ ಕಂಪನಿ ಖರೀದಿಸಿದೆ. ನಮ್ಮ ಕೆಲವು ಷರತ್ತುಗಳಿಗೆ ಕಂಪನಿ ಒಪ್ಪಿದ್ದರೆ ನಮ್ಮ ಜಮೀನೂ ನೀಡುತ್ತಿದ್ದೇವು. ಆದರೆ, ಜಮೀನು ಮಾರಾಟ ದರದಲ್ಲಿ ನಮಗೂ ಮತ್ತು ಕಂಪನಿಗೂ ಹೊಂದಾಣಿಕೆಯಾಗದ
ಕಾರಣ ನಾವು ಭೂಮಿ ಮಾರಾಟ ಮಾಡಲಿಲ್ಲ. 

ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ತೊಗರಿ ರಾಶಿ ಮಾಡಿಕೊಂಡು ಮನೆಗೆ ಬಂದ ನಂತರ ಎಸಿಸಿ ಕಂಪನಿ ನಮ್ಮ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. 3.12 ಎಕರೆ ಭೂಮಿಯನ್ನು ಎಸಿಸಿ ಕಂಪನಿ ನುಂಗಿಹಾಕಿದೆ. ಎಸಿಸಿಯಿಂದ ನಾವು ಅನ್ಯಾಯಕ್ಕೊಳಗಾಗಿದ್ದೇವೆ. ನಮಗೆ ನ್ಯಾಯ ಬೇಕು. ಎಸಿಸಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಈ ಕುರಿತು ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಗೆ, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನ್ಯಾಯ ಸಿಗದಿದ್ದರೆ ಎಸಿಸಿ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೈತ ಶ್ರೀನಿವಾಸ ಮಲ್ಲಪ್ಪ ಹರಿಜನ ತಿಳಿಸಿದ್ದಾರೆ. 

Advertisement

ನಾವು ಖರೀದಿಸಿರುವ ಜಮೀನಿನಲ್ಲಿಯೇ ಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡುತ್ತಿದ್ದೇವೆ. ಖರೀದಿಯಾಗದ ಭೂಮಿಯಲ್ಲಿ ನಮ್ಮಿಂದ ಗಣಿಗಾರಿಕೆ ನಡೆಯುತ್ತಿಲ್ಲ. ರೈತರ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆ, ಸಂಬಂಧಿಸಿದವರು ನ್ಯಾಯಾಲಯದಲ್ಲಿ ಹೋರಾಡಬಹುದು. ಎಸಿಸಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಆದರೂ ಈ ಕುರಿತು ಪರಿಶೀಲಿಸಿ ಭೂಮಿ ಸರ್ವೆ ಮಾಡಿಸುತ್ತೇವೆ. ಆನಂತರ ಈ ಕುರಿತು ಸೂಕ್ತ ಪ್ರತಿಕ್ರಿಯೆ ನೀಡುತ್ತೇನೆ. 
ಪುಷ್ಕರ್‌ ಚೌಧರಿ, ಎಚ್‌ಆರ್‌ ವಿಭಾಗದ ಮುಖ್ಯಸ್ಥರು, ಎಸಿಸಿ ವಾಡಿ

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next