ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಮೂಲಕ ಎರಡು ಗಣಿ ಸಂಸ್ಥೆಗಳು ನಡೆಸಿರುವ ಗಣಿಗಾರಿಕೆ ಅದಿರು ಸಾಗಣೆಯ ಲೆಕ್ಕದಲ್ಲಿ ವ್ಯತ್ಯಾಸವಾಗಿದ್ದು ನಿಜ. ಆದರೆ, ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಮತ್ತು ಮೈಸೂರು ಮಿನರಲ್ಸ್ ಮೂಲಕ ಅಕ್ರಮ ಅದಿರು ಸಾಗಣೆ ಆಗಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ 5,450 ಕೋಟಿ ರೂ. ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತಾವೇ ಆದೇಶಿಸಿದ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರ ಮುಂದಿಟ್ಟುಕೊಂಡು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳನ್ನು ದೋಷಪೂರಿತವಾಗಿ ಅರ್ಥೈಸಿ ಅನಗತ್ಯ ಗೊಂದಲ ಮೂಡಿಸುತ್ತಿದ್ದು, ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.
ನಾನೇ ತನಿಖೆಗೆ ಆದೇಶಿಸಿದ್ದೆ: ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯದ ಕಬ್ಬಿಣದ ಕಾರ್ಖಾನೆ ಗಳಿಗೆ ಅದಿರು ಸಮಸ್ಯೆಯಾದ ಸಂದರ್ಭ ದಲ್ಲಿ ಸೆ. 2014ರಿಂದ ಮೈಸೂರು ಮಿನರಲ್ಸ್ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸುಬ್ಬರಾಯನಹಳ್ಳಿಯ ಅದಿರು ಗಣಿಯಲ್ಲಿ 30 ಲಕ್ಷ ಮೆಟ್ರಿಕ್ ಟನ್ ಮತ್ತು ತಿಮ್ಮಪ್ಪನಗುಡಿ ಅದಿರು ಗಣಿಯಲ್ಲಿ 10.6 ಲಕ್ಷ ಮೆಟ್ರಿಕ್ ಟನ್ ಅದಿರು ಉತ್ಪಾದನೆ ಗುರಿ ನೀಡಲಾಗಿತ್ತು. ಈ ಅದಿರು ಉತ್ಪಾದನೆಗೆ ಎರಡು ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿತ್ತು. ನಿಗದಿತ ಅದಿರು ಉತ್ಪಾದಿಸದಿದ್ದರೆ ದಂಡ ಪಾವತಿ ಸ ಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ನಿಗದಿತ ಅದಿರು ಉತ್ಪಾದನೆಯಾಗದ ಕಾರಣ ಮತ್ತು ಅದಕ್ಕಾಗಿ ದಂಡ ವಿಧಿಸದ ಹಿನ್ನೆಲೆಯಲ್ಲಿ ನಾನು ಸಚಿವನಾದ ಮೇಲೆ 2017ರ ಏಪ್ರಿಲ್‌ನಲ್ಲಿ ತನಿಖೆಗೆ ಆದೇಶಿಸಿದ್ದೆ ಎಂದು ಹೇಳಿದರು.
ಮೈಸೂರು ಮಿನರಲ್ಸ್ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ಪ್ರಾಥಮಿಕ ವರದಿ ಪಡೆಯಲಾಗಿದೆ. ಗಣಿ ಪ್ರದೇಶದಲ್ಲಿರುವ ಕಚ್ಚಾ ಪುಸ್ತಕದಲ್ಲಿ ಇರುವ ಮಾಹಿತಿ ಯಂತೆ ಪ್ರತಿ ಟ್ರಕ್‌ನಲ್ಲಿ ಒಂದು ಬಾರಿಗೆ 20 ಟನ್ ಅದಿರು ಸಾಗಿಸಲಾಗಿದೆ ಎಂದು ಈ ವರದಿಯಲ್ಲಿ ಹೇಳಲಾ ಗಿತ್ತು. ಆದರೆ, 15 ಟನ್ ಅದಿರು ಸಾಗಿಸುವ ಸಾಮರ್ಥ್ಯವನ್ನು ಮಾತ್ರ ಆ ಟ್ರಕ್ ಹೊಂದಿದೆ. ಈ ಅದಿರನ್ನು ಸಂಸ್ಕರಣಾ ಘಟಕಕ್ಕೆ ತಂದು ಅಲ್ಲಿ ವಿಂಗಡಿಸಿ ನಂತರ ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಆಗ ಗಣಿಯಲ್ಲಿ ಉತ್ಪಾದನೆಯಾದ ಅದಿರಿನ ನಿಜವಾದ ಲೆಕ್ಕ ಸಿಗುತ್ತದೆ. ಅದರಂತೆ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುತ್ತದೆ. ಆದರೆ, ಇದಾವುದನ್ನೂ ಪರಿಗಣಿಸದೆ ಕುಮಾರಸ್ವಾಮಿ ಅವರು ಪುಸ್ತಕದ ಲೆಕ್ಕ ಆಧರಿಸಿ ಆರೋಪ ಮಾಡಿದ್ದಾರೆ ಎಂದರು.
ರಾಜಕೀಯ ಪ್ರೇರಿತ ಆರೋಪ: ಕುಮಾರಸ್ವಾಮಿ ಅವರು ಅಕ್ರಮ ಗಣಿಗಾರಿಕೆ ಮೂಲಕ 1.80 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಣೆ ಮಾಡಿದ್ದು, ಇದರ ಮೌಲ್ಯ 5,450 ಕೋಟಿ ರೂ. ಆಗುತ್ತದೆ ಎಂದಿ ದ್ದಾರೆ. ಆದರೆ, ಅಷ್ಟೊಂದು ಅದಿರು ತೆಗೆದು ಸಾಗಿಸುವ ಸಾಮರ್ಥ್ಯ ಅಲ್ಲಿನ ಗಣಿಗಳಿಗೆ ಇಲ್ಲ. ಮೇಲಾಗಿ ಅಷ್ಟೊಂದು ಅದಿರು ಸಾಗಿಸಬೇಕಾದರೆ ಪ್ರತಿನಿತ್ಯ 2 ಲಕ್ಷ ಟ್ರಕ್‌ಗಳಲ್ಲಿ ಅದಿರು ಸಾಗಿಸಬೇಕಾಗುತ್ತದೆ. ಹೀಗಾಗಿ ಕುಮಾರಸ್ವಾಮಿ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ತನಿಖೆ ಬಳಿಕವೇ ನಿಜಾಂಶ ಹೊರಗೆ ಮೈಸೂರು ಮಿನರಲ್ಸ್ ಅಧಿಕಾರಿಗಳ ನ್ನೊಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ನೀಡಿದ ಪ್ರಾಥಮಿಕ ವರದಿ ಆಧರಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅಕ್ರಮ ಆಗಿದೆಯೇ ಎಂಬುದು ಸ್ಪಷ್ಟವಾಗಲಿದೆ. ಸದ್ಯಕ್ಕೆ ಅಕ್ರಮ ನಡೆದಿರುವುದು ಕಂಡುಬರುತ್ತಿಲ್ಲ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದರು.