ಗಂಗಾವತಿ: ಬೃಹತ್ ಕಲ್ಲುಬಂಡೆಯನ್ನು ರಾತ್ರೋರಾತ್ರಿ ಒಡೆದು ಹಾಕಿ ಅಲ್ಲಿರುವ ಅರಣ್ಯ ಭೂಮಿಯನ್ನು ಕಬಳಿಸಲು ಅಕ್ರಮ ದಂಧೆಕೋರರು ಯತ್ನಿಸುತ್ತಿರುವ ಘಟನೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ತಾಲೂಕಿನ ಚಿಕ್ಕರಾಂಪೂರ ಕ್ರಾಸ್ ( ನಂದಯ್ಯನಕ್ರಾಸ್) ಸರಕಾರ ಶಾಲೆಯ ಹತ್ತಿರ ಜರುಗಿದೆ.
ಚಿಕ್ಕ ರಾಂಪೂರ ಕ್ರಾಸ್ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಬೃಹತ್ ಗಾತ್ರದಕಲ್ಲು ಬಂಡೆಯನ್ನು ರಾತ್ರಿ ವೇಳೆ ಸ್ಪೋಟಕ ವಸ್ತು ಬಳಸಿ ಒಡೆದು ಉರುಳಿಸಲಾಗಿದೆ. ಬಂಡೆ ಇದ್ದ ಜಾಗವನ್ನು ಅತಿತೀಕ್ರಮಿಸಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅಕ್ರಮಕಾರರು ಈ ಕೃತ್ಯವೆಸಗಿದ್ದು ಕ್ರಮ ವಹಿಸಬೇಕಾದ ಗ್ರಾ.ಪಂ.ಅರಣ್ಯ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಬೆಟ್ಟಗಳನ್ನು ಮೀಸಲು ಅರಣ್ಯ ಎಂದು ಪರಿಗಣಿಸಲಾಗಿದೆ. ಇಲ್ಲಿ ಅಮೂಲ್ಯವಾದ ಗುಹಾಂತರ ಚಿತ್ರಗಳು ಅಪರೂಪದ ಪ್ರಾಣಿಪಕ್ಷಿಗಳಿದ್ದು ಇಲ್ಲಿಯ ಕಲ್ಲುಬಂಡೆಗಳ ವಿನ್ಯಾಸ ಅಮೋಘವಾಗಿದೆ. ಇವುಗಳನ್ನು ಉಳಿಸಬೇಕಾದ ಸ್ಥಳೀಯ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಬಂದಿಲ್ಲ .ಹಂಪಿ ಆನೆಗೊಂದಿ ಪ್ರದೇಶ ಸದ್ಯ ವಿಶ್ವಪರಂಪರಾ ಪ್ರದೇಶದ ವ್ಯಾಪ್ತಿಯಲ್ಲಿ ಇಂತಹ ಪರಿಸರ ನಾಶದ ಕೃತ್ಯಗಳು ನಡೆಯುತ್ತಿದ್ದರೂ ಪ್ರಾಧಿಕಾರದ ಒಬ್ಬ ಅಧಿಕಾರಿಯೂ ಇತ್ತ ಕಡೆ ಸುಳಿದಿಲ್ಲ. ಇದು ಹೀಗೆ ಮುಂದುವರಿದರೆ ಹಂಪಿ ಆನೆಗೊಂದಿ ಪ್ರದೇಶ ಯುನೆಸ್ಕೋ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ.
ಇದನ್ನೂಓದಿ:ಮಾಜಿ ಕೇಂದ್ರ ಸಚಿವ ಬಾಬಗೌಡ ಪಾಟೀಲ್ ನಿಧನಕ್ಕೆ, ಸಿಎಂ ಬಿಎಸ್ ವೈ ಸೇರಿದಂತೆ ಗಣ್ಯರಿಂದ ಸಂತಾಪ
ಬೃಹತ್ ಕಲ್ಲು ಗುಂಡು ಧ್ವಂಸ ಮಾಡಿದವರ ವಿರುದ್ದ ಕಠಿಣ ಕ್ರಮ ಅಗತ್ಯವಾಗಿದೆ. ಏಳು ಗುಡ್ಡಪ್ರದೇಶದಲ್ಲಿರುವ ಅಪರೂಪದ ಪ್ರಾಣಿಪಕ್ಷಿ, ನಕ್ಷತ್ರ ಆಮೆ ಚಿರತೆ ಕರಡಿಯಂತಹ ಪ್ರಾಣಿಗಳನ್ನು ಉಳಿಸಬೇಕಿದೆ.
ಮನೆ ವಾಣಿಜ್ಯ ಸಂಕೀರ್ಣ ನಿರ್ಮಾಣದ ನೆಪದಲ್ಲಿ ಅಪರೂಪದ ಶಿಲೆಗಳನ್ನು ಧ್ವಂಸ ಮಾಡುವುದು ಪ್ರಕೃತಿಯ ನಾಶವಾಗಿತ್ತದೆ. ಸ್ಥಳೀಯ ಆಡಳಿತ ಇಂತಹ ಕೃತ್ಯ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಿದೆ.