Advertisement

ಅಕ್ರಮ- ಸಕ್ರಮ: ಪಾಲಿಕೆ ಪ್ರಸ್ತಾಪ ತಿರಸ್ಕರಿಸಿದ ಸಿಎಂ

11:51 AM Jan 04, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂ ಸಿ ಕಟ್ಟಿರುವ ಕಟ್ಟಡಗಳನ್ನು ಹೈದರಾಬಾದ್‌ ಅಥವಾ ಮುಂಬೈ ಮಾದರಿಯ ಅಕ್ರಮ-ಸಕ್ರಮ ಜಾರಿಗೆ ತಂದು ಸಕ್ರಮಗೊಳಿಸಬೇಕು ಎಂದು ಪಾಲಿಕೆ ಇಟ್ಟಿದ್ದ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂ ಸಿದ ಕಟ್ಟಡಗಳಲ್ಲಿನ ಉಲ್ಲಂಘನೆ ಪ್ರಮಾಣ ವಸತಿ ಕಟ್ಟಡಗಳಿಗೆ ಶೇ.50 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.25 ಕ್ಕಿಂತ ಕಡಿಮೆ ಇದ್ದರೆ ಅಂತಹವುಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಲು 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ನಗರ ವ್ಯಾಪ್ತಿಯಲ್ಲಿ ಶೇ.50ಕ್ಕಿಂತ ಕಡಿಮೆ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಈ ನಿಯಮದ ಪ್ರಕಾರ ಶೇ.5 ರಷ್ಟು ಕಟ್ಟಡಗಳು ಸಹ ಸಕ್ರಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಆಂಧ್ರಪ್ರದೇಶದ ಮಾದರಿಯ ಅಕ್ರಮ-ಸಕ್ರಮ ಜಾರಿ ಮಾಡಬೇಕು ಎಂದು ಸ್ವತಃ ಬಿಬಿಎಂಪಿ ಮೇಯರ್‌ ಜಿ.ಪದ್ಮಾವತಿ ಹಾಗೂ ಆಯುಕ್ತ ಎನ್‌. ಮಂಜುನಾಥಪ್ರಸಾದ್‌ ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಇಟ್ಟಿದ್ದರು. ಆಂಧ್ರಪ್ರದೇಶದ ಗ್ರೇಟರ್‌ ಹೈದರಾಬಾದ್‌ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಳೆದ 9 ವರ್ಷಗಳ ಹಿಂದೆ ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸಲಾಗಿತ್ತು.

2007ರ ಡಿಸೆಂಬರ್‌ 15ರಂದು ಹೈದರಾಬಾದ್‌ ಸೇರಿ ಆಂಧ್ರಪ್ರದೇಶದ ಇನ್ನಿತರ ನಗರಗಳಲ್ಲಿ ಅಕ್ರಮ- ಸಕ್ರಮಕ್ಕೆ ಅಧಿಸೂಚನೆ ಹೊರಡಿಸಿದ್ದ ಅಲ್ಲಿನ ಸರ್ಕಾರ, ಯಾವುದೇ ಸಮಸ್ಯೆಯಿಲ್ಲದೆ ಅದನ್ನು ಜಾರಿಗೊಳಿಸಿದೆ. ಆಂಧ್ರಪ್ರದೇಶದಲ್ಲಿ 1985ರ ಜನವರಿ 1ರಿಂದ 2007ರ ಡಿಸೆಂಬರ್‌15ರವರೆಗೆ ನಿಯಮ ಉಲ್ಲಂ ಸಿದ ಕಟ್ಟಡಗಳು, ಬಡಾವಣೆಗಳು ಸೇರಿ ಇನ್ನಿತರ ಅಭಿವೃದ್ಧಿಯನ್ನು ಸಕ್ರಮಗೊಳಿಸಿತ್ತು. ಬಳಿಕ ಯಾವುದೇ ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗದಂತೆ ಸಮರ್ಥವಾಗಿ ತಡೆಯಲು ಅಗತ್ಯ ಕಠಿಣ ಕಾನೂನು ರೂಪಿಸಿತ್ತು.

ಆದರೆ, ರಾಜ್ಯದಲ್ಲಿ 2013ರ ಅಕ್ಟೋಬರ್‌ 10ಕ್ಕಿಂತ ಹಿಂದಿನ ಅಕ್ರಮಗಳನ್ನು ಮಾತ್ರ ಸಕ್ರಮ ಮಾಡಲಾಗುತ್ತದೆ. ಇದರ ಬದಲು 2013ರ ಬಳಿಕ ನಿರ್ಮಾಣವಾಗಿರುವ ಅಕ್ರಮಗಳನ್ನೂ ಸಕ್ರಮಗೊಳಿಸಬೇಕು. ಎಲ್ಲಾ ರೀತಿಯ ಅಕ್ರಮಗಳನ್ನೂ ಸಕ್ರಮಗೊಳಿಸಿ ಸೂಕ್ತ ದಂಡ ವಿಧಿಸಬೇಕು. ಹೀಗಾದರೆ ಮಾತ್ರ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಬಿಬಿಎಂಪಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

Advertisement

ಪ್ರಸ್ತಾವನೆ ತಳ್ಳಿ ಹಾಕಿದ ಮುಖ್ಯಮಂತ್ರಿ
ಆದರೆ, ಬಿಬಿಎಂಪಿ ಮನವಿಯನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2014ರಲ್ಲಿ ಸರ್ಕಾರ ಅಕ್ರಮ-ಸಕ್ರಮದ ಬಗ್ಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಜಾರಿಗೊಳಿಸಲು ಹೈಕೋರ್ಟ್‌ ಅನುಮತಿ ನೀಡಿದೆ. ಇದೀಗ ಕಾನೂನಾತ್ಮಕವಾಗಿ ಇದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಿವೆ. ಹೀಗಾಗಿ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿರುವ ಅಂಶಗಳ ಪ್ರಕಾರವೇ ಅಕ್ರಮ-ಸಕ್ರಮ ಜಾರಿಗೊಳಿಸಿ. ಯಾವುದೇ ಬದಲಾವಣೆಗೆ ಯತ್ನಿಸಿದರೂ ಮತ್ತೆ ಅವರು ಕೋರ್ಟ್‌ ಮೊರೆ ಹೋಗುತ್ತಾರೆ ಎಂದು ಸಿದ್ದರಾಮಯ್ಯ ಗರಂ ಆಗಿ ಉತ್ತರಿಸಿದ್ದಾರೆ.

2013ರ ಅಕ್ಟೋಬರ್‌ 10ರ ಬಳಿಕ ನಿಯಮ ಉಲ್ಲಂ ಸಿರುವ ಕಟ್ಟಡಗಳನ್ನಾದರೂ ಸಕ್ರಮ ವ್ಯಾಪ್ತಿಗೆ ತರಬೇಕು. ಹೈದರಾಬಾದ್‌ ಅಥವಾ ಮುಂಬೈ ಮಾದರಿ ಅಕ್ರಮ-ಸಕ್ರಮ ಜಾರಿಗೊಳಿಸಿ ನಗರದಲ್ಲಿರುವ ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸಬೇಕು ಎಂದು ಆಯುಕ್ತರು ಮತ್ತು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಒಂದು ಅಂಶವೂ ಬದಲಾಗದಂತೆ ಅನುಷ್ಠಾನಗೊಳಿಸುವಂತೆ ಅವರು ಆದೇಶ ಮಾಡಿದ್ದಾರೆ.
-ಜಿ. ಪದ್ಮಾವತಿ, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next