ಬೆಂಗಳೂರು: ಇಂದಿರಾ ಕ್ಯಾಂಟೀನ್ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭದ್ರತೆ ಒದಗಿಸಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳುವ ವಿಚಾರದಲ್ಲಿಯೂ ಕೋಟ್ಯಂತರ ಅವ್ಯವಹಾರ ನಡೆದಿದ್ದು, ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ನೀಡಲು ನಿವೃತ್ತ ಯೋಧರು ಹಾಗೂ ಎನ್‌ಸಿಸಿ ಪ್ರಮಾಣ ಪತ್ರ ಇರುವವರನ್ನು ಮಾರ್ಷಲ್‌ಗಳಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಕ್ಯಾಂಟೀನ್‌ಗಳ ಬಳಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ಸೈನಿಕರೂ ಅಲ್ಲ, ಎನ್‌ಸಿಸಿ ಪ್ರಮಾಣಪತ್ರವೂ ಹೊಂದಿಲ್ಲ ಎಂದು ದೂರಿದರು.
ದೂರಿನಲ್ಲಿ ಪ್ರಮುಖರ ಹೆಸರು: ನಕಲಿ ಮಾರ್ಷಲ್‌ಗಳ ಹೆಸರಿನಲ್ಲಿ ವಾರ್ಷಿಕ ಹತ್ತಾರು ಕೋಟಿ ರೂ.ಗಳನ್ನು ಪಾಲಿಕೆಗೆ ವಂಚನೆ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿದ್ದ ಮನೋಜ್‌ರಾಜನ್ ಹಾಗೂ ಭದ್ರತೆ ಒದಗಿಸುವ ಗುತ್ತಿಗೆ ಪಡೆದಿರುವ ಕೆಇಡಬ್ಲ್ಯುಎಸ್ ಮುಖ್ಯಸ್ಥ ಜಿ.ಬಸವರಾಜ್ ವಿರುದ್ಧ ಎಸಿಬಿ, ಬಿಎಂಟಿಎಫ್ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಹಣ ಲೂಟಿ: ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಿಗೆ ಭದ್ರತೆ ಒದಗಿಸಲು ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳಲು ಮೊದಲು ಸರ್ಕಾರ ನಿರ್ಧರಿಸಿತ್ತು. ನಂತರದಲ್ಲಿ ಶೇ.50 ರಷ್ಟು ನಿವೃತ್ತ ಸೈನಿಕರು ಹಾಗೂ ಶೇ.50ರಷ್ಟು ಎಸ್‌ಸಿಸಿ ಪ್ರಮಾಣ ಪತ್ರ ಹೊಂದಿರುವವರನ್ನು ನೇಮಿಸಿಕೊಳ್ಳಲು ಆದೇಶಿಸಿತ್ತು. ಅದರಂತೆ 174 ಕ್ಯಾಂಟೀನ್‌ಗಳಿಗೆ 373 ಮಂದಿ, 19 ಅಡುಗೆ ಮನೆಗಳಿಗೆ 67 ಹಾಗೂ ಮೊಬೈಲ್ ಕ್ಯಾಂಟೀನ್‌ಗಳಿಗೆ 28 ಮಂದಿ ಮಾರ್ಷಲ್‌ಗಳು ನೇಮಿಸಿಕೊಳ್ಳಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಸಾರ್ವಜನಿಕ ಹಣ ಲೂಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಾಸ್ತವದಲ್ಲಿ 200ಕ್ಕಿಂತಲೂ ಕಡಿಮೆ ಮಾರ್ಷಲ್‌ಗಳನ್ನು ನೇಮಿಸಿರುವ ಕೆಇಡಬ್ಲ್ಯುಎಸ್ ಸಂಸ್ಥೆಯು, 468 ಮಂದಿಯ ಲೆಕ್ಕ ತೋರಿಸಿ ವಂಚನೆ ಮಾಡುತ್ತಿದೆ. ಎಲ್ಲ ಇಂದಿರಾ ಕ್ಯಾಂಟೀನ್‌ಗಳು, ಅಡುಗೆ ಮನೆಗಳು, ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳನ್ನು ಖುದ್ದಾಗಿ ಪರಿಶೀಲಿಸಿದಾಗ 200 ಮಂದಿಗೂ ಕಡಿಮೆ ಮಾರ್ಷಲ್‌ಗಳು ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಪ್ರತಿ ತಿಂಗಳು 67 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಇದರೊಂದಿಗೆ 32 ಜೆಸಿಒಗಳ ಪೈಕಿ 20 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಅವರ ಹೆಸರಿನಲ್ಲಿ ತಿಂಗಳಿಗೆ 5 ಲಕ್ಷ ರೂ. ಲೂಟಿ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲ್ಲದಿರುವ ಮಾರ್ಷಲ್‌ಗಳ ಹೆಸರಿನಲ್ಲಿ ಪ್ರತಿ ತಿಂಗಳು 97 ಲಕ್ಷ ರೂ. ವಂಚನೆ ಮಾಡಲಾಗುತ್ತಿದೆ. ಇದರೊಂದಿಗೆ ನೇಮಕವಾಗಿರುವ ಭದ್ರತಾ ಸಿಬ್ಬಂದಿಗಳಲ್ಲಿ ಬಹುತೇಕರು ನಿವೃತ್ತ ಸೈನಿಕರೂ ಅಲ್ಲ, ಎಸ್‌ಸಿಸಿ ಕೆಡೆಟ್‌ಗಳೂ ಅಲ್ಲ. ಆದರೂ ಅವರನ್ನು ಮಾರ್ಷಲ್‌ಗಳಾಗಿ ನೇಮಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಉನ್ನತ ತನಿಖೆಗೆ ಒಪ್ಪಿಸಿ: ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಗಳ ಬಳಿಯೂ ಮಾರ್ಷಲ್‌ಗಳನುನ ನೇಮಿಸಿಕೊಳ್ಳಲಾಗಿದ್ದು, ಅದಲ್ಲಿಯೂ ಪಾಲಿಕೆಗೆ ತಿಂಗಳಿಗೆ 9 ಲಕ್ಷ ರೂ. ವಂಚನೆ ಮಾಡಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ಸಿಐಡಿ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಕೆಇಡಬ್ಲ್ಯುಎಸ್ ಸಂಸ್ಥೆಗೆ ನೀಡಿರುವ ಉಪಗುತ್ತಿಗೆ ಕೂಡಲೇ ರದ್ದುಪಡಿಸಿ, 12 ತಿಂಗಳ ಅವಧಿಯಲ್ಲಿ ಲೂಟಿ ಮಾಡಿರುವ 9 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ವಸೂಲಿ ಮಾಡಬೇಕು ಎಂದ ಅವರು, ಎನ್‌ಸಿಸಿ ಪ್ರಮಾಣ ಪತ್ರಗಳ ಅಸಲಿಯೇ ಎಂಬುದನ್ನು ಖಚಿತಪಡಿಸಬೇಕು ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಒತ್ತಾಯಿಸಿದರು.