Advertisement

Campco: ಅಡಿಕೆಯ ಅಕ್ರಮ ಆಮದು- ಸಂಕಷ್ಟದಲ್ಲಿ ದೇಶೀ ಮಾರುಕಟ್ಟೆ

11:31 AM Feb 24, 2024 | Team Udayavani |

ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ಕ್ಯಾಂಪ್ಕೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.

Advertisement

ಕ್ಯಾಂಪ್ಕೊದ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರ ಇತ್ತೀಚಿಗೆ ಕನಿಷ್ಠ ಆಮದು ಬೆಲೆಯನ್ನು ಕಿಲೋಗೆ 351 ರೂ. ನಿಗದಿಪಡಿಸಿತ್ತು. ಆದರೆ ಅಕ್ರಮ ಅಮದು ಅಡಿಕೆಯನ್ನು ವಶಪಡಿಸಿಕೊಂಡ ಕಸ್ಟಮ್ಸ್‌, ಡಿಆರ್‌ಐ ಅಥವಾ ಸಂಬಂಧ ಪಟ್ಟ ಇತರ ಇಲಾಖೆಯ ಅಧಿಕಾರಿಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಇಂಡೋನೇಶ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆ. ಇವು ಎಫ್‌ಎಸ್‌ಎಸ್‌ಎಐ ನಿಗದಿ ಪಡಿಸಿದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಮನುಷ್ಯನ ಉಪಯೋಗಕ್ಕೆ ಯೋಗ್ಯವಾಗಿ ರುವುದಿಲ್ಲ. ಆದುದರಿಂದ ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯ ದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಪ್ರಧಾನಿಯನ್ನು ಆಗ್ರಹಿಸಿದೆ.

ರಾಜ್ಯದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧಾರವಾಗಿ ಅಡಿಕೆಯನ್ನೇ ಅವಲಂಬಿಸಿದ್ದಾರೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕಸದೃಶಗೊಳಿಸಿದೆ. ಪ್ರಧಾನ ಮಂತ್ರಿಯವರ ಮಧ್ಯಪ್ರವೇಶ ರೈತರ ಜೀವನವನ್ನು ಹಸನಾಗಿ ಸುವುದಲ್ಲದೇ, ನೆಲ ಕಚ್ಚಿರುವ ಮಾರುಕಟ್ಟೆಯನ್ನು ಚೇತರಿಸಲು ಸಾಧ್ಯ ಎಂಬ ಆಶಾಭಾವನೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next