ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳನ್ನು (ಎಪಿಕ್ ಕಾರ್ಡ್) ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡನೇ ದೂರು ದಾಖಲಿಸಿಕೊಂಡಿದ್ದು, ಅದರ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಚುನಾವಣಾ ಆಯೋಗ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಹೇಳಿದರು.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೊದಲು ದೂರು, ಖಾಸಗಿ ದೂರು ಆಗಿದ್ದು, ಗಲಾಟೆಗೆ ಸಂಬಂಧಿಸಿದ್ದಾಗಿತ್ತು. ಆದರೆ, ಎರಡನೇ ದೂರನ್ನು ಅಧಿಕೃತವಾಗಿ ಚುನಾವಣಾಧಿಕಾರಿಗಳು ದಾಖಲಿ ಸಿದ್ದಾರೆ. ಆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದರು.
ಎಫ್ಐಆರ್‌ನಲ್ಲಿ ಸ್ಥಳೀಯ ಹಾಲಿ ಶಾಸಕರ ಹೆಸರು ಇದೇಯಾ ಎಂದು ಕೇಳಿದ್ದಕ್ಕೆ “ಹೌದು ಇದೆ’ ಎಂದಷ್ಟೇ ಹೇಳಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಪ್ರಕರಣದ ಈವರೆಗಿನ ಬೆಳವಣಿಗೆಗಳ ಸಮಗ್ರ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಪ್ರಕರಣ ವಿಚಾರಣೆಯ ಹಂತದಲ್ಲಿದ್ದು, ಕೇಂದ್ರ ಚುನಾವಣಾ ಆಯೋಗದ ಅಂಗಳದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಪ್ರಕರಣದ ಬಗ್ಗೆ ಹೆಚ್ಚಿಗೆ ಮಾತನಾಡುವುದು ಅಥವಾ ಮಾಹಿತಿ ನೀಡುವುದು ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪತ್ತೆಯಾದ 9,896 ಎಪಿಕ್ ಕಾರ್ಡ್‌ಗಳ ಪೈಕಿ ಅಧಿಕಾರಿಗಳು ಸುಮಾರು 800 ಎಪಿಕ್ ಕಾರ್ಡ್‌ಗಳ ಅಸಲಿತನವನ್ನು ಖುದ್ದು ಪರಿಶೀಲಿಸಿದ್ದಾರೆ. ಆ ಎಲ್ಲ ಎಪಿಕ್ ಕಾರ್ಡ್‌ಗಳ ಅಸಲಿತನ ನೂರಕ್ಕೆ ನೂರು ರುಜುವಾತು ಆಗಿದೆ ಎಂದರು. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆ 9,896 ಎಪಿಕ್ ಕಾರ್ಡ್‌ಗಳ ಕಾರ್ಡುದಾರರು ಮೇ 12ರಂದು ಮತದಾನ ಮಾಡಬಹುದಾ ಎಂದು ಕೇಳಿದ್ದಕ್ಕೆ “ಎಪಿಕ್ ಕಾರ್ಡ್ ಇಲ್ಲದಿದ್ದರೆ, ಚುನಾವಣಾ ಆಯೋಗ ಸೂಚಿಸಿದ ಪರ್ಯಾಯ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಲು ಅವಕಾಶ ಇದ್ದೇ ಇದೆಯಲ್ಲ’ ಎಂದರು.