ಬೆಂಗಳೂರು: ಬಾಹ್ಯಾಕಾಶದಲ್ಲಿ ಜೀವಿಗಳ ಕುರುಹು ಪತ್ತೆ ಇಂದಿಗೂ ಅಭೇದ್ಯ ಸಂಗತಿ. ಅಲ್ಲಿನ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಕುರಿತ ಗಗನವಿಜ್ಞಾನಿಗಳ ಸಂಶೋ ಧನೆಗೆ ನೆರವಾಗಲು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ತಜ್ಞರ ತಂಡ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಜತೆಗೂಡಿ ವಿಶಿಷ್ಟ ಪರಿಕರವನ್ನು ಅಭಿವೃದ್ಧಿಪಡಿಸಿದೆ.
ಬಾಹ್ಯಾಕಾಶದ ಅನೂಹ್ಯ ಮತ್ತು ಅತಿರೇಖ ಸ್ವಭಾವದ ವಾತಾವರಣದಲ್ಲಿ ಸೂಕ್ಷ್ಮಾಣುಜೀವಿಗಳು ಹೇಗೆ ವರ್ತಿಸಬಹುದು? ವಿಕಿರಣ, ಉಷ್ಣತೆಗಳ ವೈಪರೀತ್ಯದ ನಡುವೆಯೂ ಅವುಗಳ ವಿಕಾಸ ಎಷ್ಟು ಸವಾಲಿನದ್ದು? ಎಂಬಿತ್ಯಾದಿ ನಿಗೂಢ ಸಂಗತಿಗಳನ್ನು ಡಿವೈಸ್ ಭೇದಿಸಲಿದೆ.
“ಗಗನಯಾನ’ಕ್ಕೆ ವರ?: ಭಾರತದ ಮೊದಲ ಮಾನವಸಹಿತ ಗಗನಯಾನ ನೌಕೆಯಲ್ಲಿ ಈ ಡಿವೈಸನ್ನು ಅಳವಡಿಸುವ ಸಾಧ್ಯತೆಗೆ ಇಸ್ರೋ ವಿಜ್ಞಾನಿಗಳು ಚಿಂತಿಸುತ್ತಿದ್ದಾರೆ. “ಅತಿರೇಖದ ವಾತಾವರಣದಲ್ಲಿ ಸೂಕ್ಷ್ಮಾಣುಜೀವಿಗಳ ವರ್ತನೆಯ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಈ ಪರಿಕರ ಒದಗಿಸಲಿದೆ’ ಎಂದು ಐಐಎಸ್ಸಿ ತಂಡ ತಿಳಿಸಿದೆ.
ಲ್ಯಾಬ್ ಸೃಷ್ಟಿಗಿಂತ ಭಿನ್ನ: ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಇಂಥ ಪ್ರಯೋಗಕ್ಕೆ ಲ್ಯಾಬ್ ಸೃಷ್ಟಿಯ ಮೈಕ್ರೋಚಿಪ್‌ಗ್ಳನ್ನು ಬಳಸುತ್ತಿದ್ದರು. ಆದರೆ ಈ ಡಿವೈಸ್ ಅದಕ್ಕಿಂತ ಭಿನ್ನ. ಸಂಪೂರ್ಣ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಐಐಎಸ್ಸಿಯ ಅಸಿಸ್ಟೆಂಟ್ ಪ್ರೊಫೆಸರ್ ಕೌಶಿಕ್ ವಿಶ್ವನಾಥನ್.
ನೂತನ ಡಿವೈಸ್, ಎಲ್‌ಇಡಿ ಮತ್ತು ಫೋಟೋಡಿ ಯೋಡ್‌ನ ಸೆನ್ಸಾರ್ ಕಾಂಬಿನೇಶನ್ ಹೊಂದಿದೆ. ಬೆಳಕಿನ ಚದುರುವಿಕೆ ಕ್ರಮ ಅನುಸರಿಸಿ, ಬ್ಯಾಕ್ಟೀರಿಯಾ ಗಳ ಬೆಳವಣಿಗೆ ಕುರಿತು ಅಧ್ಯಯನ ನಡೆಸಲು ಇದು ನೆರವಾಗಲಿದೆ. ಈ ವಿಧಾನ ಲ್ಯಾಬ್‌ನಲ್ಲಿ ಬಳಸಲ್ಪಡುವ ಸೆಕ್ಟ್ರೋಫೋಟೊಮೀಟರ್‌ನಂತೆಯೇ ಇರಲಿದೆ ಎನ್ನುವುದೂ ಇನ್ನೊಂದು ವಿಶೇಷ.