ಪ್ಯಾರಿಸ್: ಅಮೋಘ ಆಟದ ಪ್ರದರ್ಶನ ನೀಡಿದ ಪೋಲಂಡಿನ ಇಗಾ ಸ್ವಿಯಾಟೆಕ್ ಅವರು ಫ್ರೆಂಚ್ ಓಪನ್ ಟೆನಿಸ್ ಕೂಟದ ವನಿತೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್ ಸಮರದಲ್ಲಿ ಅವರು ಅಮೆರಿಕದ ಕೊಕೊ ಗಾಫ್ ಅವರನ್ನು 6-1, 6-3 ನೇರ ಸೆಟ್‌ಗಳಿಂದ ಉರುಳಿಸಿದರು.
ಈ ಗೆಲುವಿನಿಂದ ಸ್ವಿಯಾಟೆಕ್ ಈ ಋತುವಿನಲ್ಲಿ 42 ಗೆಲುವು ಮತ್ತು 3 ಸೋಲಿನ ಸಾಧನೆ ಮಾಡಿದ್ದಾರೆ. ಈ ಸಾಧನೆ ವೇಳೆ ಅವರು ಆರು ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಸ್ವಿಯಾಟೆಕ್ ಈ ಹಿಂದೆ 2017ರ ಫೆಬ್ರವರಿಯಲ್ಲಿ ಜೆಲೆನಾ ಒಸ್ಟಾಪೆಂಕೊ ಅವರೆದುರು ಸೋಲನ್ನು ಕಂಡಿದ್ದರು.
ವಿಶ್ವದ ನಂಬರ್ ವನ್ ಆಟಗಾರ್ತಿ ಸ್ವಿಯಾಟೆಕ್ ಈ ಗೆಲುವಿನ ಮೂಲಕ ತನ್ನ ಸತತ ಗೆಲುವಿನ ಸಾಧನೆಯನ್ನು 35 ಪಂದ್ಯಗಳಿಗೆ ವಿಸ್ತರಿಸಿದರಲ್ಲದೇ ವೀನಸ್ ವಿಲಿಯಮ್ಸ್ ಸಾಧನೆಯನ್ನು ಸಮಗಟ್ಟಿದರು.
ಸ್ವಿಯಾಟೆಕ್ ಅವರಿಗಿದು ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿಯಾಗಿದೆ. ಅವರು ಈ ಮೊದಲು 2020ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.
ಅಮೆರಿಕದ 18ರ ಹರೆಯದ ಗಾಫ್ ಫೈನಲ್‌ನಲ್ಲಿ ಯಾವುದೇ ಹೋರಾಟದ ನೀಡದೇ ಸ್ವಿಯಾಟೆಕ್‌ಗೆ ಶರಣಾಗಿದ್ದರು. ಈ ಕೂಟದಲ್ಲಿ ಯಾವುದೇ ಸೆಟ್ ಕಳೆದುಕೊಳ್ಳದ ಗಾಫ್ ಫೈನಲ್‌ನಲ್ಲಿ ನೀರಸವಾಗಿ ಆಡಿದರು. ಗಾಫ್ ಅವರು 18 ವರ್ಷಗಳ ಹಿಂದೆ ಮರಿಯಾ ಶರಪೋವಾ ಬಳಿಕ ಗ್ರ್ಯಾನ್ ಸ್ಲಾಮ್ ಫೈನಲಿಗೇರಿದ ಅತೀ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು.