Advertisement

IFFI Goa: ರಿಯಾಲಿಸ್ಟಿಕ್ ಸಿನಿಮಾಗಳಿಗೆ ಇರುವ ಸಾಧ್ಯತೆಯೇ ದೊಡ್ಡದು: ಮಧುರ್ ಭಂಡಾರ್ಕರ್

10:09 AM Nov 23, 2023 | Team Udayavani |

ಪಣಜಿ, ನ. 23: ಸಿನಿಮಾ ಪ್ರಪಂಚದಲ್ಲಿ ರಿಯಾಲಿಸ್ಟಿಕ್ ಸಿನಿಮಾಕ್ಕೆ ಇರುವ ಶಕ್ತಿ, ಸಾಧ್ಯತೆ ಹಾಗೂ ಸ್ಥಾನ ಬಹಳ ವಿಶಿಷ್ಟವಾದುದು. ಅದಕ್ಕೆ ಮಾತ್ರ ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ ಎಂಬ ದ್ವಂದ್ವವನ್ನು ಮೀರುವ ಶಕ್ತಿ ಇದೆ ಎಂಬುದು ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಅಭಿಪ್ರಾಯ.

Advertisement

ಅವರ ಪ್ರಕಾರ ರಿಯಾಲಿಸ್ಟಿಕ್‌ ಸಿನಿಮಾಗಳಿಗೆ ಮಾತ್ರ ಪ್ರೇಕ್ಷಕರನ್ನು ಆಳವಾಗಿ ತಲುಪುವ, ಕಾಡುವ ಶಕ್ತಿಯನ್ನು ಹೊಂದಿದೆ. ಯಾವಾಗಲೂ ಒಂದು ಸಿನಿಮಾ ಹುಟ್ಟಿಕೊಳ್ಳುವುದೇ ಕಲ್ಪನೆಯಿಂದ. ಹಾಗಾಗಿ ವಾಸ್ತವದ ನೆಲೆಯಲ್ಲಿರುವ ನೈಜ ಚಲನಚಿತ್ರಗಳು ಪ್ರೇಕ್ಷಕರ ಭಾವನೆಗಳನ್ನು ಪ್ರತಿಧ್ವನಿಸಬಲ್ಲವಂತೆ.

ಇಫಿ ಚಲನಚಿತ್ರೋತ್ಸವದ ಸಂವಾದದಲ್ಲಿ ಪಾಲ್ಗೊಂಡ ಮಧುರ್ ಭಂಡಾರ್ಕರ್ ತಮ್ಮ ಸಿನಿಮಾದ ಕಲ್ಪನೆ, ಆ ಮಾಧ್ಯಮಕ್ಕಿರುವ ಸಾಧ್ಯತೆ, ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ-ಹೀಗೆ ಹತ್ತಾರು ಸಂಗತಿಗಳ ಕುರಿತು ಮಾತನಾಡಿದರು.

ಮಧುರ್ ಭಂಡಾರ್ಕರ್ ತಮ್ಮದೇ ಆದ ವಿಶಿಷ್ಟ ಕಥಾವಸ್ತುಗಳಿಂದ ಸಿನಿಮಾಗಳನ್ನು ರೂಪಿಸಿ ಹೆಸರಾದವರು. ಪೇಜ್‌ 3, ಚಾಂದಿನಿ ಬಾರ್‌, ಫ್ಯಾಷನ್‌, ಕಾರ್ಪೋರೇಟ್ ನಂಥ ವಿಭಿನ್ನವಾದ ಸಿನಿಮಾಗಳನ್ನು ರೂಪಿಸಿದವರು.

Advertisement

ಸಿನಿಮಾ ನಿರ್ಮಾಣದಲ್ಲಿ ಕಥಾವಸ್ತುಗಳ ಕುರಿತ ಅವಿರತ ಅಧ್ಯಯನ, ಸಂಶೋಧನೆಗೂ ಪ್ರಮುಖ ಸ್ಥಾನವಿದೆ ಎಂದು ಸಾಬೀತು ಪಡಿಸಿದವರು ಮಧುರ್ ಭಂಡಾರ್ಕರ್. ಅದನ್ನೂ ಮತ್ತೊಮ್ಮೆ ಪ್ರಸ್ತಾಪಿಸುತ್ತಾ, ’ನಿಜ, ನನ್ನ ಸಿನಿಮಾಗಳಲ್ಲಿ ಸಂಶೋಧನೆಗೆ ಮಹತ್ವದ ಸ್ಥಾನವಿದೆ. ಅದೇ ನನ್ನ ಕಥಾವಸ್ತುಗಳಿಗೆ ಮೂಲಾಧಾರ. ಇದು ನನ್ನದಷ್ಟೇ ಅಲ್ಲ. ಸಿನಿಮಾ ನಿರ್ಮಾಣದ ವಿಶಿಷ್ಟ ಅಗತ್ಯವೂ ಹೌದು. ಅಧ್ಯಯನವೇ ಬುನಾದಿ. ಅದು ಸಿನಿಮಾವನ್ನು ಮತ್ತಷ್ಟು ಸಶಕ್ತಗೊಳಿಸುತ್ತದೆ. ಕಥನ ಕ್ರಮವನ್ನು ಗಟ್ಟಿಗೊಳಿಸುತ್ತದೆ. ಜತೆಗೆ ಕಥಾವಸ್ತುವಿಗೆ ಅಧಿಕೃತತೆಯನ್ನು ಒದಗಿಸುತ್ತದೆ. ಅದು ಪ್ರೇಕ್ಷಕರನ್ನು ತಟ್ಟಬಲ್ಲದು’ ಎಂಬುದು ಮಧುರ್ ಅವರ ಅಭಿಪ್ರಾಯ.

ಸಿನಿಮಾ ಆರ್ಥಿಕತೆ ಮತ್ತು ಸೃಜನಶೀಲ ಸ್ವಾತಂತ್ರ್ಯದ ಕುರಿತ ಪ್ರಶ್ನೆಗೂ, ’ನೋಡಿ, ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಗೆ ಇಂಥದ್ದೇ ಎಂಬ ಯಾವುದೇ ಸೂತ್ರವೂ ಇಲ್ಲ; ಸಿದ್ಧಾಂತವೂ ಇಲ್ಲ. ಆದರೆ ಈ ಹಣ ಮತ್ತು ಸೃಜನಶೀಲ ಸ್ವಾತಂತ್ರ್ಯ ಎನ್ನುವುದು ಕೆಲವು ಬಾರಿ ಸಮಸ್ಯೆಯನ್ನು ತಂದೊಡ್ಡುತ್ತವೆ. ಆದರೂ ಹೊಸ ಚಲನಚಿತ್ರ ನಿರ್ದೇಶಕರು ಧೃಢ ವಿಶ್ವಾಸದಿಂದ ಮುನ್ನುಗ್ಗಬೇಕು. ಅದು ಸಾಧ್ಯವಿದೆ ಎನ್ನುತ್ತಾರೆ ಮಧುರ್.

ಸಿನಿಮಾ ರೂಪುಗೊಳಿಸುವಲ್ಲಿನ ಸಾವಯವ-ಸ್ವಾಭಾವಿಕ ಕ್ರಮವನ್ನು ವಿವರಿಸುತ್ತಾ, ಪ್ರತಿ ಸೃಜನಶೀಲ ಸೃಷ್ಟಿಯ ಸಾಧ್ಯತೆ ಸೋಲನ್ನೂ ಸಹ ಒಳಗೊಂಡಿರುತ್ತದೆ. ಹಾಗಾಗಿ ಈ ಸ್ವಾಭಾವಿಕ ಪರಿಕ್ರಮದ ಪ್ರಕ್ರಿಯೆಯಲ್ಲಿ ಸೋಲು ಹಲವು ಬಾರಿ ಯಶಸ್ಸಿನ ಮೆಟ್ಟಿಲಾಗುತ್ತವೆ. ಅತ್ಯುನ್ನತವಾದುದನ್ನು ಸೃಷ್ಟಿಸುವ ಪ್ರತಿ ಪ್ರಯತ್ನದಲ್ಲೂ ಇದು ಅನಿವಾರ್ಯ ಅಡಕ’ ಎಂದದ್ದು ಮಧುರ್ ಭಂಡಾರ್ಕರ್.

ಒಬ್ಬ ನೈಜ ಸಿನಿಮಾಕರ್ತನಿಗೆ ತೃಪ್ತಿ ಎನ್ನುವುದು ಸುಲಭವಾಗಿಯೂ ಸಿಗದು, ಶೀಘ್ರದಲ್ಲಿಯೂ ಸಿಗದು. ಅದು ಸುಲಭದ ಮಾರ್ಗವೂ ಅಲ್ಲ. ಅವಿಚ್ಛಿನ್ನ ಬದ್ಧತೆ ಅವಶ್ಯ. ತನ್ನ ಕಥಾವಸ್ತು ಹಾಗೂ ಚಿತ್ರಕಥೆಯಲ್ಲಿ ಅಪಾರ ವಿಶ್ವಾಸವನ್ನಿಟ್ಟುಕೊಂಡಿರಬೇಕು ಎಂದು ಕಿವಿಮಾತು ಹೇಳಿದ್ದು ಉದಯೋನ್ಮುಖ ಸಿನಿಮಾ ಕರ್ತರಿಗೆ.

ಮಾತು ಮುಗಿಸುವ ಮುನ್ನ,’ನನ್ನ ಸಿನಿಮಾಗಳ ಕಥಾವಸ್ತುಗಳಿಗೆ ಸಮಾಜವೇ ಆಕರ ಗ್ರಂಥ. ಸಮಾಜದ ನಾಡಿ ಮಿಡಿತವನ್ನು ಅಧ್ಯಯನದ ಮೂಲಕ ಅರ್ಥಮಾಡಿಕೊಂಡು ನನ್ನ ಕಥಾವಸ್ತುಗಳಿಗೆ ಜೀವ ತುಂಬುತ್ತೇನೆ. ಪ್ರೇಕ್ಷಕರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳುವ ಸಶಕ್ತ ಚಿತ್ರಕಥೆಯೇ ಒಂದು ಸಿನಿಮಾದ ಹೃದಯ ಎಂದದ್ದು ಮಧುರ್ ಭಂಡಾರ್ಕರ್.

Advertisement

Udayavani is now on Telegram. Click here to join our channel and stay updated with the latest news.

Next