Advertisement

IFFI; ಟರ್ಕಿಯ ಗ್ರಾಮೀಣ ಮಹಿಳೆಯರ ಸಮಸ್ಯೆಯ ಸಿನಿಮಾ: ಟುಫಾನ್ ಸಿಂಸೇಕ್ಸನ್

08:26 PM Nov 27, 2023 | Team Udayavani |

ಪಣಜಿ: “ನನ್ನ ಸಿನಿಮಾ ಟರ್ಕಿ ದೇಶದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಅನಿವಾರ್ಯತೆಯನ್ನು ಬಿಂಬಿಸುವ ಪ್ರಯತ್ನ ಮಾಡಿದೆʼ ಎಂಬುದು ಟರ್ಕಿ ಸಿನಿಮಾ ಸಿಲಿನ್ ನಿರ್ದೇಶಕರಾದ ಟುಫಾನ್ ಸಿಂಸೇಕ್ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಇಫಿ ಚಿತ್ರೋತ್ಸವದಲ್ಲಿ ಅವರ ʼಸಿಲಿನ್ʼ ಸಿನಿಮಾ ಪ್ರದರ್ಶನದ ಬಳಿಕ ಮಾತನಾಡುತ್ತಾ, ಗ್ರಾಮೀಣ ಟರ್ಕಿಯಲ್ಲಿ ಸಣ್ಣ ಪ್ರಾಯದ ಹೆಣ್ಣುಮಕ್ಕಳು ಅನಿವಾರ್ಯವಾಗಿ ಬಾಲಕಾರ್ಮಿಕರಾಗಿ ದುಡಿಯಬೇಕಿದೆ. ಇದರಿಂದಾಗಿ ಬಾಲ ವಿವಾಹದ ಸಮಸ್ಯೆಯೂ ಗ್ರಾಮೀಣ ಸಮಾಜವನ್ನು ಕಾಡುತ್ತಿದೆ. ಇವೆಲ್ಲದರ ಕಾರಣದಿಂದ ಇಲ್ಲಿಯ ಮಹಿಳೆಯರ ಬದುಕಿನ ಅವಧಿಯೂ ಗಮನಾರ್ಹವಾಗಿ ಕುಸಿಯುತ್ತಿದೆ. ಇವೆಲ್ಲವನ್ನೂ ಸಾಂಕೇತಿಕವಾಗಿ ಹೇಳುವ ಪ್ರಯತ್ನ ನನ್ನ ಸಿನಿಮಾದಲ್ಲಿ ನಡೆಸಿದ್ದೇನೆ’ ಎಂದರು.

‘ಟರ್ಕಿಯ ನೈಜ ಸಮಸ್ಯೆಗಳನ್ನು ಜಾಗತಿಕ ವೇದಿಕೆಯಲ್ಲಿ ತೆರೆದಿಡುವ ಆಲೋಚನೆ ನನ್ನದುʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ʼನಾನು ಹಂಗೇರಿಯದ ಸಿನಿಮಾ ಕತೃರು ಮಕ್ಕಳೊಂದಿಗೆ ಸಿನಿಮಾ ಮಾಡುವುದನ್ನು ಕಂಡಿದ್ದೇನೆ. ಅದರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಹೇಳಿದ ಅವರು, ನಮ್ಮ ಸಂಗೀತವೂ ಸಿನಿಮಾಕ್ಕೆ ಪೂರಕವಾಗಿದ್ದು, ಬಹಳಷ್ಟು ಜನರಿಗೆ ಇಷ್ಟವಾಗಿದೆ ಎಂದರು.

ಸಿನಿಮಾದ ನಿರ್ಮಾಪಕ ಮೆಹ್ಮತ್ ಸರಿಕಾ ಮಾತನಾಡಿ, ಹೆಣ್ಣುಮಕ್ಕಳ ಶೋಷಣೆ ಬಹಳಷ್ಟು ಕಡೆಗಳಲ್ಲಿ ನಡೆಯುತ್ತಿದೆ. ಇದು ಟರ್ಕಿಯ ಹಲವು ಭಾಗಗಳಲ್ಲಿ ಸಾಮಾನ್ಯವಾದ ಕ್ರಮ. ಲಿಂಗತಾರತಮ್ಯದ ಸಮಸ್ಯೆಯೂ ಹೆಚ್ಚಿದೆ. ಇವೆಲ್ಲದರ ಧ್ವನಿಯಾಗಿ ಈ ಸಿನಿಮಾವನ್ನು ರೂಪಿಸಿದ್ದೇವೆ. ಇದನ್ನು ಜಾಗತಿಕ ಮಟ್ಟದಲ್ಲಿ ವಿವಿಧ ವೇದಿಕೆಗಳಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

ಈ ಸಿನಿಮಾ ಹದಿನಾಲ್ಕು ವರ್ಷದ ಕಥಾನಾಯಕಿಯ ಕಥೆ. ಕೃಷಿ ಕ್ಷೇತ್ರದ ಬಾಲ ಕಾರ್ಮಿಕಳಾಗಿ ಪಡುವ ಸಂಕಷ್ಟ, ಶಾಲೆಯನ್ನು ತೊರೆಯಬೇಕಾದ ಅನಿವಾರ್ಯತೆ ಎಲ್ಲವನ್ನೂ ಸಿನಿಮಾದಲ್ಲಿ ಕಟ್ಟಿ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next