ಹುಣಸೂರು: ಉತ್ತಮ ಭವಿಷ್ಯ ರೂಪಿಸಿಕೊಂಡಿರುವ ಹಳೇ ವಿದ್ಯಾರ್ಥಿಗಳು ತಾವು ಓದಿದ ಶಾಲೆ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಅಳಿಲು ಸೇವೆ ಸಲ್ಲಿಸಬೇಕು ಎಂದು ಮಹಿಳಾ ಸರ್ಕಾರಿ ಪದವಿ ಕಾಲೇಜು ಸಮಿತಿ ಅಧ್ಯಕ್ಷ , ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು. ನಗರದ ಮಹಿಳಾ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಾದ ನಡೆಸಿ: ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆದವರು, ಹಳೇ ವಿದ್ಯಾರ್ಥಿಗಳು ಹಳೇ ಬೇರುಗಳಿದ್ದಂತೆ. ನಿಮ್ಮ ಆಲೋಚನೆ, ಸಾಧನೆಯನ್ನು ಹೊಸ ಚಿಗುರಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸ್ಫೂರ್ತಿಯಾಗಬೇಕು. ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸಬೇಕು. ಉದ್ಯೋಗ ಮಾಹಿತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತುಗೊಳಿಸಿ ಮತ್ತು ಜೀವನವನ್ನು ಅರ್ಥೈಸಿಕೊಡಬೇಕು. ಈ ಮೂಲಕ ತಾವು ಓದಿದ ಶಾಲಾ-ಕಾಲೇಜುಗಳ ಪ್ರಗತಿಗೆ ನೆರವಾಗಿ ಎಂದು ಕೋರಿದರು.
ನಾನು ಹಳೇ ವಿದ್ಯಾರ್ಥಿ: ನಾನು ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೆ ಎಂದು ಸ್ಮರಿಸಿದ ಶಾಸಕರು, 2007ರಲ್ಲಿ ಮಹಿಳಾ ಕಾಲೇಜು ಆಗಿ ಪರಿವರ್ತನೆಯಾದ ನಂತರ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿದ್ದು, ಈಗಾಗಲೇ ಒಂದು ಭಾಗದ ಹಳೇ ಕಟ್ಟಡವನ್ನು ಕೆಡವಿ ಹೊಸ ಸುವ್ಯವಸ್ಥಿತ ಕಟ್ಟಡ ನಿರ್ಮಿಸಲಾಗಿದೆ. ಈಗ ಮತ್ತೂಂದು ಬದಿಯಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಿ, ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
1300 ವಿದ್ಯಾರ್ಥಿಗಳು: ಶೈಕ್ಷಣಿಕವಾಗಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ಕಾಲೇಜು ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. 1,300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಮತ್ತಷ್ಟು ಮೂಲಭೂತ ಸೌಕರ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಡಾ.ಕೆ.ಎಸ್.ಭಾಸ್ಕರ್ ಮಾತನಾಡಿ, ಕಾಲೇಜಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಸಂಘದ ಮೂಲಕ ವಿವಿಧ ಶೈಕ್ಷಣಿಕ ಚಟುವಟಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಮಧುಶ್ರೀ, ಈ ಕಾಲೇಜಿನಲ್ಲಿ ಓದಿರುವುದು ಹೆಮ್ಮಯ ಸಂಗತಿ. ಹಿರಿಯ ವಿದ್ಯಾರ್ಥಿಗಳಾಗಿ ಕಿರಿಯ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಿಭಾಶ್ರೀ, ಸಾಧಕ ವಿದ್ಯಾರ್ಥಿನಿಯರಾದ ರಶ್ಮಿ, ತಸ್ಮಿಯಾಬಾನು, ಅಂಜನಾ, ಸಾರಾ, ನಿರ್ಮಲಾ ಮತ್ತಿತರರು ಮಾತನಾಡಿದರು.
ಹಿರಿಯ ವಿದ್ಯಾರ್ಥಿಗಳಿಗಾಗಿ ಫನ್ನಿಗೇಮ್ಸ್, ಸಾಂಸ್ಕೃತಿಕ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ನಿವೃತ್ತ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಪ್ರೊ.ಬಿ.ಎಂ.ನಾಗರಾಜ್, ಗ್ರಾಂಥಾಲಯ ಅಧಿಕಾರಿ ಕರುಣಾಕರ್, ಸಹಾಯಕ ಪ್ರಾಧ್ಯಾಪಕರಾದ ನಾಗಣ್ಣ, ಡಾ.ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.