Advertisement

ನೀನು ದೂರವಿದ್ದೇ ನನ್ನನ್ನು ಗೆಲ್ಲಿಸು..

04:26 PM Apr 10, 2018 | |

ನೀನೇ ಜಗತ್ತು, ನಿನ್ನಿಂದಾನೇ ನನ್ನ ಬದುಕು ಎಂದುಕೊಂಡಿದ್ದವನ ಬದುಕಲ್ಲಿ ಅರಗಿಸಿಕೊಳ್ಳಲಾಗದ ಘಟನೆ ನಡೆದು ಹೋಗಿದೆ. ನಿನ್ನನ್ನು ಪಡೆಯಲು ಸೋತು ಹೋದ ನಾನು ಭವಿಷ್ಯದಲ್ಲಿ ಸೋಲಬಾರದು…

Advertisement

ಪ್ರೀತಿಯ ಹೃದಯದೊಡತಿಗೆ, ನೀನು ನನ್ನಿಂದ ದೂರಾಗಿ 2 ವರ್ಷಗಳಾಯಿತು. ಕೆಲ ವರ್ಷಗಳ ಹಿಂದೆ ನೀನು ಹೃದಯಕ್ಕೆ ಹತ್ತಿರವಾಗಿದ್ದೆ. ಮಿಂಚಿನ ವೇಗದಲ್ಲಿ ಬೆಳೆದ ನಮ್ಮಿಬ್ಬರ ಸಂಬಂಧ ಅಷ್ಟೇ ವೇಗದಲ್ಲಿ ಒಡೆದು ಚೂರಾಯಿತು. ನಿನ್ನ ಜೊತೆಗೆ ಮೂಡಿದ ಸಲುಗೆ, ಪ್ರೀತಿಗೆ ಜಾಗ ಮಾಡಿಕೊಟ್ಟಿತ್ತು. ದಿನ ಕಳೆದಂತೆ ಜೀವನಕ್ಕೆ ಆಸರೆ ನೀಡುವಾಕೆಯ ರೂಪದಲ್ಲಿ ನೀನು ಕಂಡೆ.

ಅಂದಿನಿಂದಲೇ ನಾನು ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದೆ. ಪ್ರತಿದಿನ, ಪ್ರತಿಕ್ಷಣ ನಿನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ನಿನ್ನ ಪ್ರತಿಯೊಂದು ವಿಷಯದ ಬಗ್ಗೆ ವಿಚಾರಿಸುತ್ತಿದ್ದೆ. ನೀನು ಕೂಡಾ ನನ್ನ ಬಗ್ಗೆ ಪ್ರತಿದಿನ, ಪ್ರತಿ ಕ್ಷಣ ಒಳ್ಳೆಯದನ್ನೇ ಬಯಸುತ್ತಿದ್ದೆ. ನಿನ್ನೊಟ್ಟಿಗೆ ಒಡನಾಟ ಹೆಚ್ಚಾಯ್ತು, ಸಲಿಗೆ ಅತಿಯಾಯ್ತು. ಸ್ನೇಹ ಮರೆಯಾಯ್ತು, ಪ್ರೀತಿಯ ಅಂಕುರವಾಯ್ತು.

ಸಮುದ್ರ ತೀರದಲ್ಲಿ ನಿನ್ನ ಜೊತೆ ನೀರಲ್ಲಿ ಹೆಜ್ಜೆ ಹಾಕುವ ಆಸೆ, ಮುಸ್ಸಂಜೆ ಕಡುಗೆಂಪು ಸೂರ್ಯನ ಪ್ರತಿಬಿಂಬವನ್ನು ನೀರಲ್ಲಿ ನೋಡುತ್ತಾ ನಿನ್ನ ಜೊತೆ ನಡೆಯುವಾಸೆ ಮೂಡಿತು. ಅದೇಕೋ ಗೊತ್ತಿಲ್ಲ, ಹಿಂದೊಮ್ಮೆ ನಿನ್ನ ಜೊತೆ ಆಡಿದ ಮಾತುಗಳೇ ಮತ್ತೆ ಮತ್ತೆ ಹೃದಯದಲ್ಲಿ ಪಿಸುಗುಡುತ್ತಿವೆ. ನೀನು ನನಗೆ ಮುದ್ದಾಗಿ “ಬಿಳಿಕೋತಿ’ ಅಂತ ಕರೀತಿದ್ದೆ. ಅದನ್ನೇ ಶಾರ್ಟ್‌ ಆಗಿ ಬಿ.ಕೆ ಅಂತ ಸಿಹಿಯಾಗಿ ಕರೆಯುತ್ತಿದ್ದೆ.

ಅದೊಂದು ದಿನ ನೀನು ಗಡಿಬಿಡಿಯಿಂದಲೇ ಬಂದವಳು, “ನನ್ನನ್ನು ಮರೆತುಬಿಡು ಬಿ.ಕೆ. ಪ್ಲೀಸ್‌, ನನ್ನನ್ನು ಕ್ಷಮಿಸು. ನಾವು ಇನ್ಮುಂದೆ ನಮ್ಮಿಷ್ಟದಂತೆ ಬದುಕೋಕೆ ಆಗಲ್ಲ ಎನ್ನುತ್ತಾ ನನ್ನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ನಿನ್ನ ಮಾತಿನಲ್ಲೇ ಏನೇನು ನಡೆದಿರಬಹುದೆಂದು ಅರಿತುಕೊಂಡೆ. ಹಿಂತಿರುಗಿಯೂ ನೋಡದೆ ನೀನು ಹೊರಟಾಗ, ನಿನ್ನೊಟ್ಟಿಗೆ ಕಳೆದ ಕ್ಷಣಗಳು ನೆನಪಾಗಿ ಸದ್ದಿಲ್ಲದೆ ಕೆನ್ನೆ ಮೇಲೆ ಕಣ್ಣ ಹನಿ ಜಾರಿತು.

Advertisement

ನಾನು ನಿನ್ನನ್ನು ಇನ್ನೂ ಮರೆತಿಲ್ಲ. ನೀನು ಎಲ್ಲೇ ಇದ್ದರೂ ಸುಖವಾಗಿರು. ತುಂಬಿದ ಮಂಟಪದಲ್ಲಿ ನೀನು ಬೇರೆಯವನ ಜೊತೆ ಸಪ್ತಪದಿ ತುಳಿಯುತ್ತಿದ್ದರೆ, ನಾನು ಕತ್ತಲ ಕೋಣೆ ಸೇರಿದ್ದೆ. ಹೇ ಹುಡುಗಿ, ಹೇಳು: ನೀನು ಮಾಡಿದ್ದು ಸರೀನಾ? ನಂಬಿದವನಿಗೆ ಕೈ ಕೊಟ್ಟೆಯಲ್ಲಾ? ಮೊದಲೇ ಹೇಳಬಹುದಿತ್ತಲ್ವಾ ನಾವು ಸ್ನೇಹಿತರಾಗಿರೋಣ ಅಂತ. ಗೊತ್ತು ತಾನೆ? ಸ್ನೇಹ ಪ್ರೀತಿಗಿಂತಲೂ ಶ್ರೇಷ್ಠ.

ನೀನು ಬಿಟ್ಟು ಹೋದ ಮೇಲೆ ನಾನು ನನ್ನ ಪ್ರಪಂಚವನ್ನೇ ಬದಲಿಸಿಕೊಂಡೆ. ನೀನಿಲ್ಲದೆ ಬದುಕೋದು ಕಷ್ಟವಾದರೂ, ಭವಿಷ್ಯದ ಸಾಧನೆ ಕಣ್ಮುಂದೆ ಕಾಣುತ್ತಿದೆ. ನಾನಂದುಕೊಂಡ ಕಾರ್ಯ ಸಾಧಿಸೋದು ಅನಿವಾರ್ಯವಾಗಿದೆ. ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಪಡಬೇಕು. ನೀನೇ ಆಗಾಗ ಹೇಳುತಿದ್ದೆಯಲ್ಲ; ನಿನ್ನ ಹೆತ್ತವರಿಗೋಸ್ಕರ ಬದುಕು ಅಂತ.

ನಿನ್ನ ತಿರಸ್ಕಾರದ ಭಾವ ನನ್ನನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತಿದ್ದರೂ ಅನಿವಾರ್ಯವಾಗಿ ಮುನ್ನುಗ್ಗಬೇಕಾಗಿದೆ. ನೀನೇ ಜಗತ್ತು, ನಿನ್ನಿಂದಾನೇ ನನ್ನ ಬದುಕು ಎಂದವನ ಬದುಕಲ್ಲಿ ಅರಗಿಸಿಕೊಳ್ಳಲಾಗದ ಘಟನೆ ನಡೆದು ಹೋಗಿದೆ. ನಿನ್ನನ್ನು ಪಡೆಯಲು ಸೋತು ಹೋದ ನಾನು ಭವಿಷ್ಯದಲ್ಲಿ ಸೋಲಬಾರದು. ಮುಂದೊಂದು ದಿನ ಸಂತೋಷ, ಸಮೃದ್ಧಿ ಪಡೆದು ಸಂತೃಪ್ತ ಮನುಷ್ಯನಾಗಿ ಬದಲಾಗಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ.

ಗಳಿಸುವ ಜ್ಞಾನ, ಸಂಪತ್ತು, ಹೆಸರು ಎಲ್ಲವೂ ನೀನು ಜೊತೆಗಿಲ್ಲವೆಂದು ನೊಂದಿರುವ ಹೃದಯಕ್ಕೆ ಕೊಡುವ ಉಡುಗೊರೆ ಎಂದು ಭಾವಿಸಿ ಬದುಕುವೆ. ಕನಸಿನಲ್ಲಿಯೂ, ಮನಸಿಸಲ್ಲಿಯೂ ಮತ್ತೆ ನನ್ನೆಡೆಗೆ ಮರಳಿ ಬರುವ ಯೋಚನೆ ಮಾಡಬೇಡ. ನನ್ನ ಬದುಕಿನಲ್ಲಿ ನಿನ್ನ ಸ್ಥಾನ ಸಾಧನೆಯಾಗಿ ಮಾರ್ಪಾಡಾಗಲಿ, ನೀ ದೂರವಿದ್ದೇ ನನ್ನನ್ನು ಗೆಲ್ಲಿಸು..

ಇಂತಿ ನಿನ್ನ ಬಿ.ಕೆ
ಎಸ್‌.ಕೆ. ಪತ್ತಾರ, ಲಿಂಗಸ್ಗೂರು

Advertisement

Udayavani is now on Telegram. Click here to join our channel and stay updated with the latest news.

Next