Advertisement

ರಸ್ತೆಗೆ ಕಾಲಿಟ್ಟರೆ ಕೊಳಚೆ, ಶೌಚ ನೀರು ಮೈಗೆ ರಾಚುತ್ತೆ!

08:54 PM Oct 16, 2019 | Lakshmi GovindaRaju |

ನಂಜನಗೂಡು: ನಗರದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 12 ಒಳ ಚರಂಡಿ ಮ್ಯಾನ್‌ಹೋಲ್‌ಗ‌ಳು ಕಟ್ಟಿಕೊಂಡು ಕೊಳಚೆ ಹಾಗೂ ಶೌಚಾಲಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ನಾಗರಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ರಸ್ತೆಗೆ ಕಾಲಿಟ್ಟರೆ ಕೊಳಚೆ ಹಾಗೂ ಶೌಚ ನೀರು ಮೈಮೇಲೆ ರಾಚುತ್ತದೆ. ಈ ಒಳ ಚರಂಡಿ ಮ್ಯಾನ್‌ಹೋಲ್‌ಗ‌ಳ ಅವ್ಯವಸ್ಥೆ ತಿಳಿಸಿದ್ದರೂ ನಗರಸಭೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಒಳ ಚರಂಡಿ ಕಾಮಗಾರಿಗಳ ಹೊಣೆ ಹೊತ್ತಿರುವ ಒಳ ಚರಂಡಿ ಮಂಡಳಿಯ ಬೇಜವಾಬ್ದಾರಿತನವೇ ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿದೆ.

Advertisement

ನಿತ್ಯ ಕಿರಿಕಿರಿ: ನಗರ ವ್ಯಾಪ್ತಿಯ ಕೆಎಚ್‌ಬಿ ಕಾಲೋನಿಯ ಮುಖ್ಯ ರಸ್ತೆಯಲ್ಲಿನ ಒಳಚರಂಡಿಯ ಮ್ಯಾನ್‌ಹೋಲ್‌ ತುಂಬಿ ತುಳುಕಿ ಶೌಚಾಲಯ ನೀರು ಸಹಿತ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯತ್ತ ಹರಿಯುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ರಸ್ತೆಗೆ ಕಾಲಿಟ್ಟರೆ ಕೊಳಚೆ ನೀರು ಮೈಗೆ ರಾಚುತ್ತದೆ. ಈ ಅವ್ಯವಸ್ಥೆಗೆ ನಾಗರಿಕರು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಪರಿಹರಿಸುವಲ್ಲಿ ವಿಫ‌ಲರಾಗಿದ್ದಾರೆ. ಈ ಭಾಗದ ನಿವಾಸಿಗಳು ಗೋಳು ಹೇಳ ತೀರದಾಗಿದೆ. ಈ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಸಾರ್ವಜನಿಕರಿಗೆ ತೋಚುತ್ತಿಲ್ಲ.

ಡಜನ್‌ಗೂ ಹೆಚ್ಚು ಮ್ಯಾನ್‌ಹೋಲ್‌ಗ‌ಳ ಅವ್ಯವಸ್ಥೆ: ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಅಧಿಕಾರಿಗಳು, ಈ ರಸ್ತೆ ಮಾತ್ರವಲ್ಲ, ನಗರದ ವಿವಿಧೆಡೆ 12ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಒಳ ಚರಂಡಿ ಮ್ಯಾನ್‌ಹೋಲ್‌ಗ‌ಳು ಕಟ್ಟಿಕೊಂಡು ತ್ಯಾಜ್ಯ ಹಾಗೂ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಕುರಿತು ತಾವು ಒಳಚರಂಡಿ ಮಂಡಳಿಗೆ ದೂರು ನೀಡಿದ್ದು, ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಅಪೂರ್ಣ ಕಾಮಗಾರಿಗೆ ಸಂಪರ್ಕ: ಅಪೂರ್ಣಗೊಂಡಿರುವ ಈ ಒಳಚರಂಡಿ ಕಾಮಗಾರಿಗಳಿಗೆ ಮನೆಗಳ ತ್ಯಾಜ್ಯ ನೀರು ಹರಿಸಲು ಸಂಪರ್ಕ ಕೊಡಿಸಿದ್ದು, ಮತ್ತಷ್ಟು ಅವ್ಯವಸ್ಥೆಗೆ ಕಾರಣವಾಗಿದೆ. ಈ ತ್ಯಾಜ್ಯಗಳು ಅಲ್ಲಲ್ಲಿ ಕಟ್ಟಿಕೊಳ್ಳುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಲ್ಲಲಿದೆ. ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ದೊರೆಸ್ವಾಮಿ ಆಗ್ರಹಿಸಿದ್ದಾರೆ.

8 ಕೋಟಿಯಿಂದ 28 ಕೋಟಿ ರೂ.ಗೆ ಏರಿಕೆ: 2008ರಲ್ಲಿ ಸುಮಾರು 8 ಕೋಟಿ ರೂ. ವೆಚ್ಚದ ಈ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಈ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ನಗರಸಭೆಯೇ ಈ ಯೋಜನೆಗಳಿಗೆ ಸುಮಾರು 28 ಕೋಟಿ ರೂ. ಪಾವತಿಸಿದೆ. ತನ್ನ ಅಭಿವೃದ್ಧಿ ಕಾರ್ಯಗಳನ್ನು ಬದಿಗಿಟ್ಟು ಈ ಕಾಮಗಾರಿಗಳಿಗೇ ಇಷ್ಟು ಪ್ರಮಾಣದ ಹಣ ಪಾವತಿಸಿದ್ದರೂ ಪೂರ್ಣಗೊಂಡಿಲ್ಲ. ಯಾವುದಕ್ಕೆ ಎಷ್ಟು ಹಣ ವ್ಯಯಿಸಲಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈ ವಿಷಯದಲ್ಲಿ ಒಳ ಚರಂಡಿ ಮಂಡಳಿಯು ನಗರಸಭೆಯನ್ನು ಇಂದಿನವರೆಗೂ ಕತ್ತಲಿನಲ್ಲೇ ಇಟ್ಟಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಗಮನ ಹರಿಸಿ, ಒಳಚರಂಡಿ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಗರಸಭೆ ಸದಸ್ಯ ಮಹದೇವಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.

Advertisement

ಅವ್ಯವಸ್ಥೆ ಗೊತ್ತಿದ್ದರೂ ಏನೂ ಮಾಡಲಾಗುತ್ತಿಲ್ಲ – ನಗರಸಭೆ: ಒಳಚರಂಡಿ ಮಂಡಳಿ ನಂಜನಗೂಡು ನಗರ ವ್ಯಾಪ್ತಿಯ ಒಳ ಚರಂಡಿ ಕಾಮಗಾರಿಯನ್ನು ಹೊಣೆ ವಹಿಸಿಕೊಂಡಿದ್ದು, ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ನಗರಸಭೆಗೆ ಹಸ್ತಾಂತರ ಮಾಡಿಲ್ಲ, ನಮಗೆ ಹಸ್ತಾಂತರ ಆಗದ ಕಾರಣ ನಾವು ಅಲ್ಲಿ ಕಾಮಗಾರಿ ನಡೆಸುವಂತಿಲ್ಲ. ಹೀಗಾಗಿ ನಗರದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗ‌ಳು ತುಂಬಿ ಹರಿಯುತ್ತಿರುವುದನ್ನು ನೋಡಿಯೂ ಸುಮ್ಮನೇ ಇರುವಂತಾಗಿದೆ ಎಂದು ನಗರಸಭೆ ಆಯುಕ್ತ ಕರಿಬಸವಯ್ಯ ಹಾಗೂ ಪರಿಸರ ಅಧಿಕಾರಿ ಅರ್ಚನಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

* ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next