ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿರುವಂತೆ ಇನ್ನು ಮುಂದೆ ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುವ ಸ್ವತ್ಛತಾ ಸಿಬ್ಬಂದಿಯೂ ಕೆಲಸ ಮಾಡುವಾಗ ಕಡ್ಡಾಯವಾಗಿ ಅಗತ್ಯ ರಕ್ಷಣಾತ್ಮಕ ಸಾಮಗ್ರಿ ಹಾಗೂ ಸುರಕ್ಷತಾ ಸಲಕರಣೆ ಉಪಯೋಗಿಸಬೇಕು.
ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ ಇಲ್ಲವೇ ಗುತ್ತಿಗೆದಾರ 10ರಿಂದ 50 ಸಾವಿರ ರೂ. ವರೆಗೂ ದಂಡ ಕಟ್ಟಬೇಕಾಗುತ್ತದೆ! ಹೌದು, ಇಂಥದ್ದೊಂದು ಕಠಿಣ ಆದೇಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಹೊರಡಿಸಿದ್ದು, ಇದರ ಕಡ್ಡಾಯ ಪಾಲನೆಗೆ ಸೂಚಿಸಿದೆ. ಈವರೆಗೆ ನಗರ, ಪಟ್ಟಣ, ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಸ್ವತ್ಛತಾ ಕಾರ್ಮಿಕರಿಗೆ ಇದ್ದ ಈ ನಿಯಮವನ್ನು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಸ್ವತ್ಛತಾ ಕಾರ್ಮಿಕ ಸಿಬ್ಬಂದಿಗೂ ವಿಸ್ತರಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಗಳಲ್ಲಿ ವೈಯಕ್ತಿಕ, ಸಾರ್ವಜನಿಕ ಶೌಚಗೃಹ, ಮಲಗುಂಡಿಗಳು, ಸೆಪ್ಟಿಕ್ ಟ್ಯಾಂಕ್, ಚರಂಡಿ ಹಾಗೂಇನ್ನಿತರ ಸ್ವತ್ಛತಾ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸಿಬ್ಬಂದಿಗೆ ಅಗತ್ಯ ರಕ್ಷಣಾತ್ಮಕ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದರೆ ಇನ್ನು ಮುಂದೆ ಸಂಬಂಧಿಸಿದ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಇಲ್ಲವೇ ಏಜೆನ್ಸಿಗಳು ದಂಡ ತೆತ್ತಬೇಕಾಗಿದೆ.
ದೈನಂದಿನ ಸ್ವತ್ಛತಾ ಕಾರ್ಯ ನಿರ್ವಹಿಸುವ ಕಾಯಂ ಸಿಬ್ಬಂದಿಯಾಗಲಿ, ತಾತ್ಕಾಲಿಕ ಸಿಬ್ಬಂದಿಯಾಗಲಿ ಗುತ್ತಿಗೆ, ಹೊರಗುತ್ತಿಗೆ ಹೀಗೆ ಎಲ್ಲ ವರ್ಗದ ಸ್ವತ್ಛತಾ ಸಿಬ್ಬಂದಿಗೆ ರಕ್ಷಣಾತ್ಮಕ ಸಾಮಗ್ರಿ ಹಾಗೂ ಸುರಕ್ಷತಾ ಸಲಕರಣೆ ನೀಡುವುದು ಕಡ್ಡಾಯವಾಗಿದ್ದು, ಇದರ ಕಟ್ಟುನಿಟ್ಟಿನ ಪಾಲನೆಗಾಗಿ ಈ ದಂಡ ವಿಧಿಸುವ ಆದೇಶ ಹೊರಡಿಸಲಾಗಿದೆ.
ದಂಡ, ಶಿಸ್ತು ಕ್ರಮ: ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸ್ವತ್ಛತಾ ಸಿಬ್ಬಂದಿಗೆ ಅಗತ್ಯ ರಕ್ಷಣಾತ್ಮಕ ಸಾಮಗ್ರಿ ಹಾಗೂ ಸುರಕ್ಷತಾ ಸಲಕರಣೆಗಳು ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಸ್ವತ್ಛತಾ ಕಾರ್ಯ ವೈಫಲ್ಯ ಪ್ರಕರಣಗಳಲ್ಲಿ ಜಿಲ್ಲಾ, ತಾಲೂಕು, ಗ್ರಾಪಂಗಳು ಸಂಬಂಧಿಸಿದ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಇಲ್ಲವೇ ಏಜೆನ್ಸಿಗಳಿಗೆ ದಂಡ ವಿಧಿಸಬೇಕು. ಎಸ್‌ಟಿಪಿ/ಸೆಪ್ಟಿಕ್ zಪ್ರಕರಣಗಳಲ್ಲಿ 50,000 ರೂ., ಸ್ವತ್ಛತಾ ಕೆಲಸಗಾರರು ಹ್ಯಾಂಡ್‌ಗ್ಲೌಸ್, ಗಮ್ ಬೂಟ್ಸ್, ಹೆಲ್ಮೆಟ್, ಗಾಗಲ್, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳನ್ನು ಉಪಯೋಗಿಸದೆ ಕಾರ್ಯ ನಿರ್ವಹಿಸುವ ವೈಫಲ್ಯ ಪ್ರಕರಣಗಳಲ್ಲಿ 10,000ರೂ. ದಂಡ ವಿಧಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಸಿಬ್ಬಂದಿ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಹಾಗೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಹ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ನವೀನಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಎಚ್.ಕೆ. ನಟರಾಜ