Advertisement

ಮಾತು ಕೇಳದಿದ್ದರೆ ಲಾಠಿ ರುಚಿ ತೋರಿಸಿ

06:11 PM Apr 13, 2020 | Team Udayavani |

ನೆಲಮಂಗಲ: ಲಾಕ್‌ಡೌನ್‌ ಮುಗಿಯುವವರೆಗೂ ನಿಯಮ ಮೀರಿ ಸಂಚರಿಸುವ ವಾಹನಗಳನ್ನು ಮುಲಾಜಿಲ್ಲದೆ ವಶಕ್ಕೆ ಪಡೆದು ಕೇಸ್‌ ದಾಖಲಿಸಿ, ಮುಖ್ಯ ರಸ್ತೆಗಳನ್ನು ಬಂದ್‌ ಮಾಡಿ, ಅನಿವಾರ್ಯವಾದರೆ ಲಾಠಿ ಪ್ರಯೋಗಿಸಿ ಎಂದು ಬೆಂ.ಗ್ರಾಮಾಂತರ ಎಸ್‌ಪಿ ರವಿ ಡಿ. ಚೆನ್ನಣ್ಣನವರ್‌ ಆದೇಶ ನೀಡಿದ್ದಾರೆ.

Advertisement

ನಗರದ ಗ್ರಾಮಾಂತರ ಪೊಲೀಸ್‌ ಠಾಣೆ ಆವರಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್‌ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು. ಕೋವಿಡ್-19 ನಿಯಂತ್ರಣದ ಲಾಕ್‌ಡೌನ್‌ ಕಠಿಣ ನಿರ್ಧಾರ ಮುಂದುವರಿಯಲಿದೆ. ಮಾನವೀಯತೆಯಿಂದ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ರಸ್ತೆಗಳಲ್ಲಿ ಕೆಲಸ ಮಾಡುವಾಗ ಜನರಿಂದ ಅಂತರ ಕಾಪಾಡಿಕೊಂಡು ರೈತರು, ಔಷಧ, ಆಸ್ಪತ್ರೆ, ದಾಸ್ತಾನುಗಳ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಬೇಕು. ನಿಯಮಗಳನ್ನು ಓದಿ ತಿಳಿದುಕೊಂಡು ಬದಲಾಗುವ ನಿಯಮ ಪಾಲಿಸಬೇಕು ಎಂದರು.

ಅಂತರ ಕಾಪಾಡಿ: ಪೊಲೀಸರ ಕುಟುಂಬದಲ್ಲಿ ಸಣ್ಣ ಮಕ್ಕಳು ಹಾಗೂ 60 ವರ್ಷದ ವಯೋವೃದ್ಧರಿದ್ದರೆ ಕೆಲಸ ಮುಗಿಸಿ ಮನೆಗೆ ಹೋಗಿದ ತಕ್ಷಣ ಸುರಕ್ಷತೆ ಕ್ರಮ
ಕಡ್ಡಾಯವಾಗಿ ಪಾಲಿಸಿ. ಎರಡು ಬಾರಿ ಸ್ನಾನ ಮಾಡಿ, ಕೊರೊನಾ ಸಮಸ್ಯೆ ಮುಗಿಯುವವರಿಗೂ ಸ್ವಲ್ಪ ಅಂತರದಲ್ಲಿದ್ದರೆ ಉತ್ತಮ. ನಮ್ಮ ಕುಟುಂಬಗಳಿಗೆ ನಮ್ಮಿಂದಲೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ ಎಂದರು.

ಲಾಠಿ ಪ್ರಯೋಗಿಸಿ: ಲಾಕ್‌ಡೌನ್‌ ಆದೇಶ ಪಾಲನೆ ಮಾಡದೇ ಸುತ್ತಾ ಡುವ ಜನರಿಗೆ ಕೈಮುಗಿದು ಮನೆ ಯಿಂದ ಹೊರಬರದಂತೆ ತಿಳಿಸಿ. ಲಾಠಿ ಪ್ರಯೋಗ ಅನಿವಾರ್ಯವಾದರೇ ಪ್ರಯೋಗಿಸಿ, ಕೇಸ್‌ ದಾಖಲಿಸಿ ಲಾಕ್‌ಡೌನ್‌ ಮುಗಿಯುವವರೆಗೂ ವಾಹನಗಳನ್ನು ವಾಪಸ್‌
ನೀಡಬೇಡಿ ಎಂದರು.

ಹಲ್ಲೆ ಯತ್ನ: ನಗರದ ರಸ್ತೆಗಳಲ್ಲಿ ವಾಹನಗಳನ್ನು ನಿಯಂತ್ರಣ ಮಾಡಲು ಮುಂದಾದ ಪೊಲೀಸರಿಗೆ ಗ್ರಾಪಂ ಸದಸ್ಯನ ಮಗ ಹಲ್ಲೆ ಯತ್ನ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ಎಸ್‌ಪಿ ರವಿ ಡಿ. ಚೆನ್ನಣ್ಣನವರಿಗೆ ಸಭೆಯಲ್ಲಿ ದೂರು ನೀಡಿದ್ದು, ತಕ್ಷಣ ಪ್ರಕರಣ
ದಾಖಲಿಸುವಂತೆ ತಿಳಿಸಿದ್ದಾರೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಪ್ರಕರಣ ಮುಚ್ಚುವ ಪ್ರಯತ್ನ ಮಾಡಬೇಡಿ, ಪ್ರಭಾವಿಗಳಿಗೆ ಪಾಠವಾಗಬೇಕು ಎಂದು ಮನವಿ ಮಾಡಲಾಗಿದೆ.

Advertisement

ದಿನಸಿ ವಿತರಣೆ: ಪೊಲೀಸ್‌ ಇಲಾಖೆ ಎಲ್ಲಾ ಸಿಬ್ಬಂದಿ ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌, ಅಡುಗೆಗೆ ಬೇಕಾದ ದಿನಸಿ ಪದಾರ್ಥ ನೀಡಲು ಸೂಚಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಕುಟುಂಬಗಳಿಗೆ ಸಮಸ್ಯೆಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದರು. ಡಿವೈಎಸ್‌ಪಿ ಮೋಹನ್‌ ಕುಮಾರ್‌, ಸಿಪಿಐ ಶಿವಣ್ಣ, ವಿರೇಂದ್ರ ಪ್ರಸಾದ್‌, ಪಿಎಸ್‌ಐ ಡಿ.ಆರ್‌. ಮಂಜುನಾಥ್‌, ಅಂಜನ್‌ಕುಮಾರ್‌, ಮೋಹನ್‌ ಕುಮಾರ್‌, ಗೋವಿಂದರಾಜು ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next