ಇತ್ತೀಚೆಗೆ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪೂಜ್ಯ ಪಲಿಮಾರು ಶ್ರೀಗಳ ಜನ್ಮನಕ್ಷತ್ರದ ಅಂಗವಾಗಿ ಶ್ರೀಗಳ ಅಭಿಮಾನಿ ಬಳಗದವರಿಂದ ಪ್ರದರ್ಶಿಸಲ್ಪಟ್ಟ ಯಕ್ಷಗಾನ ಕಾರ್ಯಕ್ರಮವು ಸರ್ವ ಕಲಾವಿದರ ಮೇರು ವ್ಯಕ್ತಿತ್ವ, ಪ್ರತಿಭಾಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸಭ್ಯ ಕಲಾವಿದನೊಬ್ಬ ತನ್ನಲ್ಲಿ ಅಡಕವಾಗಿರುವ ಕಲಾಪ್ರೌಢಿಮೆಯನ್ನು ಯಾವ ರೀತಿಯಲ್ಲಿ ಅಭಿವ್ಯಕ್ತಿ ಪಡಿಸಬಹುದೆಂಬುದನ್ನು ಅಂದು ಪಾತ್ರ ವಹಿಸಿದ್ದ ಹಾಸ್ಯ ಕಲಾವಿದರು ತೋರಿಸಿಕೊಟ್ಟರು. ತನ್ನ ಹಾವ- ಭಾವ-ಮಾತುಗಳಿಂದ ನೆರೆದ ಕಲಾಭಿಮಾನಿಗಳ ಹೃನ್ಮನವನ್ನು ತಣಿಸುವಲ್ಲಿ ಸೈ ಎನಿಸಿಕೊಂಡರು.
ಹಾಸ್ಯ ಎಂಬುದು ದ್ವಂದ್ವಾರ್ಥದ ಮಾತುಗಳು, ವಿಕಾರ ಭಾವಭಂಗಿ ಎಂಬಷ್ಟಕ್ಕೆ ಸೀಮಿತವಾದ ಈ ಕಾಲಘಟ್ಟದಲ್ಲಿ ಇಂತಹ ಒಂದಾದರೂ ಸಭ್ಯ ಪ್ರದರ್ಶನವನ್ನು ಕಾಣುವ ಅವಕಾಶ ಪ್ರೇಕ್ಷಕರ ಕಣ್ಣುಗಳಿಗೆ ಒದಗಿಬಂದದ್ದು ಭಾಗ್ಯವೇ ಸರಿ.
ಇನ್ನೊಂದು ಅಪರೂಪದ ಸನ್ನಿವೇಶವಾಗಿ ಇಬ್ಬರು ಹಿರಿಯ ಮೇರು ಕಲಾವಿದರು ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪರಸ್ಪರ ವಿರೋಧ ಪಕ್ಷದ ಸನ್ನಿವೇಶದಲ್ಲಿದ್ದರೂ ಒಬ್ಬರಿಗೊಬ್ಬರು ಗೌರವಪೂರ್ಣವಾದ ಮಾತುಗಳು, ಹಾವಭಾವಗಳಿಂದ ಅಭಿನಯಿಸಿದ್ದು ಪ್ರೇಕ್ಷಕರಲ್ಲಿ ಧನ್ಯತಾಭಾವನೆ ಮೂಡಿಸಿತು. ಅಷ್ಟೇ ಅಲ್ಲದೆ ಉಳಿದ ಎಲ್ಲ ಹಿಮ್ಮೇಳ- ಮುಮ್ಮೇಳ ಕಲಾವಿದರು ಪ್ರೇಕ್ಷಕ ವರ್ಗಕ್ಕೆ ಅಪರೂಪದ ಒಳ್ಳೆಯ ಯಕ್ಷಗಾನ ಪ್ರದರ್ಶನವನ್ನು ಆಸ್ವಾದಿಸಲು ಅವಕಾಶ ಮಾಡಿಕೊಟ್ಟರು. ಇಂತಹ ಅಪರೂಪದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವೀಕ್ಷಿಸಿದ ಪೂಜ್ಯ ಶ್ರೀಗಳು ಎಲ್ಲ ಕಲಾವಿದರನ್ನು ಮನಃಪೂರ್ವಕವಾಗಿ ಆಶೀರ್ವದಿಸಿದ್ದು ಕಲಾವಿದರ ಸುಯೋಗವೇ ಸರಿ. ಇಂತಹ ಸದಭಿರುಚಿಯ ಪ್ರದರ್ಶನಗಳು ಕೇವಲ ಪಿ.ಪಿ.ಸಿ. ಹಾಲ್‌ಗೆ ಮಾತ್ರ ಸೀಮಿತವಾಗದೆ ಎಲ್ಲ ಕಡೆ ನಡೆಯಲಿ.
ಓರ್ವ ಅಭಿಮಾನಿ ಪ್ರೇಕ್ಷಕ