ಶಿರ್ವ: ಸುಮಾರು 1.25 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶಿರ್ವ-ಪಿಲಾರು ಶ್ರೀ ಲಕ್ಷ್ಮೀನರಸಿಂಹ ಮಠದ ನವೀಕೃತ ಗರ್ಭಗುಡಿಯ ಸಮರ್ಪಣೆ,ಪುನಃಪ್ರತಿಷ್ಠೆ, ಪಂಚವಿಂಶತಿ ಕಳಶ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕುಲಪುರೋಹಿತ ವೇ|ಮೂ| ಕುತ್ಯಾರು ರಾಮಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶುಕ್ರವಾರ ಸಂಪನ್ನಗೊಂಡವು.
ಜ. 26ರಂದು ಬೆಳಗ್ಗೆ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇ|ಮೂ| ಕುತ್ಯಾರು ರಾಮಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಯಾಗ, ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಪಂಚ ವಿಂಶತಿ ಕಲಶಾಭಿಷೇಕ, ಕಲಾತತ್ವ ಹೋಮ, ಪ್ರಸನ್ನ ಪೂಜೆ, ಚಂಡಿಕಾಯಾಗ, ಮಹಾಪೂಜೆ, ಪಲ್ಲಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.
ಪುನಃ ಪ್ರತಿಷ್ಠಾ ಕಲಶಾಭಿಷೇಕದ ಬಳಿಕ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವವಚನ ನೀಡಿದರು. ಪ್ರಾಮಾಣಿಕತೆ ಇದ್ದಲ್ಲಿ ಭಗವಂತ ಒಲಿಯುತ್ತಾನೆ. ಪಿಲಾರು ಮಠದಲ್ಲಿ ನರಸಿಂಹ ದೇವರಿಗೆ ಗರ್ಭಗುಡಿ ಸಮರ್ಪಣೆಗೊಂಡು ಅಭಿಮಂತ್ರಿತ ವಾದ ಕಲಶಾಭಿಷೇಕ ನಡೆದಿದ್ದು, ಪ್ರಸನ್ನಗೊಂಡ ದೇವರು ಕಾಲಕಾಲಕ್ಕೆ ಮಳೆ ಬೆಳೆ ನೀಡಿ, ದೇಶ ಸುಭಿಕ್ಷೆಯಾಗಿ ಸಮಾಜಕ್ಕೆ ಕ್ಷೇಮವಾಗಲಿ ಎಂದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾಸ್ತಿಕರಿಗೆ ಆಸ್ತಿಕ ಬುದ್ಧಿ ಬರಲು ಭಗವಂತನ ವಿಶಿಷ್ಟ ಪ್ರಭಾವ ಮನೋಗತವಾಗಬೇಕು. ಪಿಲಾರು ಮಠದಲ್ಲಿ ಶ್ರೀ ನರಸಿಂಹ ಪರಿವಾರ ದೇವರ ಸಮಗ್ರ ಸನ್ನಿಧಾನ ಆಲಯಬದ್ಧವಾಗಿ ನಿರ್ಮಾಣ ಗೊಂಡಿದ್ದು, ದೇವರ ಪರಮಾನು ಗ್ರಹವಿರಲಿ ಎಂದು ಹೇಳಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಘುಪತಿ ಉಡುಪ ದಂಪತಿ ಉಭಯ ಶ್ರೀಗಳ ಪಾದಪೂಜೆ ನೆರವೇರಿಸಿದರು. ವೇ|ಮೂ| ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ವಾದಿರಾಜ ಉಡುಪ, ಅರ್ಚಕ ಶ್ರೀಧರ ಉಡುಪ, ಪಿಲಾರು ಉಡುಪ ಮನೆತನದ ಸದಸ್ಯರು, ಗ್ರಾಮಸ್ಥರು, ಮಠದ ಭಕ್ತರು ಭಾಗವಹಿಸಿದ್ದರು.