ಬೆಂಗಳೂರು: ರಾಜ್ಯಗಳ ನಡುವೆ ಅಭಿವೃದ್ಧಿಯ ಸ್ಪರ್ಧೆ ನಡೆದರೆ ದೇಶ ಬೆಳವಣಿಗೆ ಕಾಣುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ “ನವೋದ್ಯಮ ಮತ್ತು ಉದ್ಯಮಶೀಲತೆ'(ವಿಜನ್ ಇಂಡಿಯಾ-2047) ಕಾರ್ಯಗಾರದ ಸಮಾರೋಪದಲ್ಲಿ ಮಾತನಾಡಿದರು. ಭಾರತವು ಜಿ-20 ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಇನ್ನೂ ಜಾಸ್ತಿಯಾಗುತ್ತದೆ. ಮಾತುಕತೆ ಮೂಲಕ ಶಾಂತಿ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತವು ಆರ್ಥಿಕವಾಗಿ ಸಧೃಢರಾಗುವ ಜತೆಗೆ ಜಾಗತಿಕವಾಗಿ ಇತರ ದೇಶಗಳಿಗೂ ಸಹಕಾರ ನೀಡಬೇಕು ಎಂದರು.
ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಅಭಿವೃದ್ಧಿ ಕಂಡು ಬರುತ್ತಿದೆ. ದೇಶದ ಆರ್ಥಿಕತೆ ಸಕಾರಾತ್ಮಕವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲಿದೆ ಎಂದರು.
ದೇಶದ ಆರ್ಥಿಕತೆಯು ಏರಿಕೆಯಾಗುತ್ತಿದ್ದು, 2047ಕ್ಕೆ ಇದರ ಪ್ರಮಾಣ 47.8 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆಗಳಿವೆ. ಶೇ.8 ಜಿಡಿಪಿಯೊಂದಿಗೆ ಹಣದುಬ್ಬರ ನಿಯಂತ್ರಣಕ್ಕೆ ತರಲಾಗುವುದು. ಡಾಲರ್ ವಿರುದ್ಧ ಕುಸಿಯುತ್ತಿರುವ ರೂಪಾಯಿ ಮೌಲ್ಯ ಮುಂದಿನ 10 ವರ್ಷಗಳಲ್ಲಿ ಇದು ಗಣನೀಯ ಏರಿಕೆಯಾಗಲಿದೆ ಎಂದು ಹೇಳಿದರು.
ದೆಹಲಿಯಲ್ಲಿ 35 ಯೂನಿಕಾರ್ನ್ ಗಳಿವೆ. ಬೆಂಗಳೂರು 40 ಯೂನಿಕಾರ್ನ್ ಗಳನ್ನು ಹೊಂದಿದೆ. ಇತರ ನಗರಗಳಲ್ಲಿ ಯೂನಿಕಾರ್ನ್ ಗಳು ಇನ್ನೂ ಹೆಚ್ಚಲಿವೆ. ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ರಾಜ್ಯಗಳ ನಗರಗಳಲ್ಲಿ ಯೂನಿಕಾರ್ನ್ ಹಾಗೂ ನವೋದ್ಯಮಗಳು ಹೆಚ್ಚುತ್ತಿರುವ ಕಾರಣಕ್ಕೆ ಬೆಂಗಳೂರು ಮೈಮರೆಯುವಂತಿಲ್ಲ. ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.