Advertisement

UV Fusion: ಮನಸ್ಸೊಂದಿದ್ದರೆ ಮಾರ್ಗವೂ ಉಂಟು

10:29 AM Dec 01, 2023 | Team Udayavani |

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಕೆಚ್ಚೆದೆ ಇರಬೇಕೆಂದೆಂದು ಎಂಬ ಅಣ್ಣಾವ್ರ ಸಿನೆಮಾದಲ್ಲಿ ಬಳಸಿರುವ ಹಾಡು ಮನುಷ್ಯನ ಮನಸ್ಸಿನ ಶಕ್ತಿಯನ್ನು ತಿಳಿಸುತ್ತದೆ.

Advertisement

“ಮನೋಬಲ ಮಹಾಬಲ’ ಅಂದರೆ ಮನಸ್ಸು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲವಾದ ಹಾಗೆಯೇ ಶಕ್ತಿಯುತವಾದ ಆಯುಧವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ. ಇದಕ್ಕೆ ಅನ್ವರ್ಥವಾಗುವಂತೆ 16 ವರ್ಷದ ಶೀತಲ್‌ ದೇವಿ ಏಷ್ಯನ್‌ ಪ್ಯಾರಾ ಗೇಮ್ಸ್  2023ರಲ್ಲಿ ಆರ್ಚರಿಯಲ್ಲಿ 2 ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಶೀತಲ್‌ ದೇವಿಗೆ ಎರಡೂ ಕೈಗಳಿಲ್ಲ.

ಕಾಶ್ಮೀರದ ಕುವರಿ ಶೀತಲ್

ಶೀತಲ್‌ ದೇವಿ ಅವರು ಮೂಲತಃ ಕಾಶ್ಮೀರದವರು. ಜನವರಿ 10, 2007ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ಚಾರ್‌ ಜಿಲ್ಲೆಯ ಲೋಯಿ ಧಾರ್‌ ಎಂಬ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದು ಮತ್ತು ಅವರ ತಾಯಿ ಮನೆಯಲ್ಲಿ ಮೇಕೆಗಳನ್ನು ಸಾಕುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಈಕೆಗೆ ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆ ಇದ್ದಿದ್ದರಿಂದ ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ.

ಶೀತಲ್‌ ಬಿಲ್ಲುವಿದ್ಯೆ ಕಲಿತದ್ದು ಆಕಸ್ಮಿಕ

Advertisement

ಶೀತಲ್‌ ದೇವಿಗೆ 14ನೇ ವಯಸ್ಸಿನವರೆಗೆ, ಬಿಲ್ಲುಗಾರಿಕೆ ಕುರಿತಾಗಿ ಏನೂ ತಿಳಿದಿರಲಿಲ್ಲ, ಆದರೆ 2021 ಅವಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಆ ವರ್ಷ ಶೀತಲ್‌ ಸೇನೆಯ ಕಾರ್ಯಕ್ರಮವೊಂದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಅಲ್ಲಿ ಒಂದು ಎನ್‌ಜಿಒ ಆಕೆಯನ್ನು ಗಮನಿಸಿ, ಶೀತಲ್‌ ಅವರ ಬದುಕನ್ನು ಸುಧಾರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಆರಂಭದಲ್ಲಿ ಕೃತಕ ಕೈ ಪಡೆಯುವ ಯೋಜನೆ ಇತ್ತು, ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದಾದ ಬಳಿಕ ಇನ್ನೂ ಕೆಲವು ಪರೀಕ್ಷೆಗಳನ್ನು ನಡೆಸಿದಾಗ ಶೀತಲ್‌ ಅವರ ಕಾಲುಗಳು ತುಂಬಾ ಬಲಿಷ್ಠವಾಗಿರುವುದು ತಿಳಿಯುತ್ತದೆ. ಅನಂತರದಲ್ಲಿ ಪಾದಗಳಿಂದ ಬಿಲ್ಲುಗಾರಿಕೆ ಮಾಡಲು ಎನ್‌ಜಿಒ ಸಲಹೆ ನೀಡಿತು. ಇಲ್ಲಿಂದ ಶೀತಲ್‌ ಜೀವನವೇ ಬದಲಾಯಿತು.

2022ರ ನವೆಂಬರ್‌ನಲ್ಲಿ ಜೂನಿಯರ್‌ ನ್ಯಾಶನಲ್‌ ಗೇಮ್ಸ್ ಗೆ ಪದಾರ್ಪಣೆ

ಶೀತಲ್‌ ದೇವಿ ನವೆಂಬರ್‌ 2022ರಲ್ಲಿ ಮೊದಲ ಬಾರಿಗೆ ಜೂನಿಯರ್‌ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದಳು. ಅನಂತರದಲ್ಲಿ ಆಕೆ ಹಿಂತಿರುಗಿ ನೋಡಲಿಲ್ಲ. ಈ ವರ್ಷ ಜುಲೈನಲ್ಲಿ ಜೆಕ್‌ ಗಣರಾಜ್ಯದಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿಯಲ್ಲಿ ಫೈನಲ್‌ ತಲುಪಿದ ವಿಶ್ವದ ಮೊದಲ ತೋಳಿಲ್ಲದ ಮಹಿಳಾ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶೀತಲ್‌ ಈಗ ಪ್ಯಾರಾ ಒಲಂಪಿಕ್‌ ಗೇಮ್ಸ್ ಮೇಲೆ ತನ್ನ ದೃಷ್ಟಿ ನೆಟ್ಟಿದ್ದಾಳೆ. 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಈಗಾಗಲೇ ಅರ್ಹತೆ ಪಡೆದಿದ್ದಾಳೆ.

ನಿರಂತರ ಅಭ್ಯಾಸದಿಂದ ಯಶಸ್ಸು

ಶೀತಲ್‌ ಪ್ರತಿದಿನ ಅಭ್ಯಾಸಕ್ಕಾಗಿ ಸೂರ್ಯೋದಯಕ್ಕೂ ಮೊದಲೇ ಅಕಾಡೆಮಿಗೆ ತಲುಪಿ, ಅನಂತರ ಅಲ್ಲಿಂದ ಶಾಲೆಗೆ ಹೋಗುತ್ತಿದ್ದಳು. ರಜೆ ಇದ್ದಾಗಲೆಲ್ಲ ಸಂಜೆಯವರೆಗೆ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಹೀಗೆ ಆರೇ ತಿಂಗಳಗಳಲ್ಲಿ ಶೀತಲ್‌ ತನ್ನ ಪರಿಶ್ರಮ ಮತ್ತು ಶ್ರದ್ಧೆಯಿಂದ ದಾಖಲೆ ನಿರ್ಮಿಸಿದಳು.

ಆರ್ಚರಿ ಕೋಚ್‌ ಪ್ರೋತ್ಸಾಹ

ಶೀತಲ್‌ ದೇವಿ ಕತ್ರದ ಮಾತಾ ವೈಷ್ಟೋದೇವಿ ಶೈನ್‌ ಬೋರ್ಡ್‌ ಆರ್ಚರಿ ಅಕಾಡೆಮಿಯ ತರಬೇತುದಾರ ಕುಲದೀಪ್‌ ವೆದ್ವಾನ್‌ ಅವರ ಸಂಪರ್ಕಕ್ಕೆ ಬರುತ್ತಾರೆ. ಆಕೆಯ ಪ್ರತಿಭೆಯನ್ನು ಕಂಡ ಕುಲದೀಪ್‌ ಸಾಕಷ್ಟು ಸಂಶೋಧನೆ ನಡೆಸಿ ಕೈಯಿಂದ ಗುಂಡು ಹಾರಿಸುವ ವಿಶೇಷ ಬಿಲ್ಲನ್ನು ಸಿದ್ಧಪಡಿಸಿದರು. 27.50 ಕೆ.ಜಿ. ತೂಕದ ಬಿಲ್ಲನ್ನು ಪಾದಗಳಿಂದ ಹಿಡಿದು ಸ್ಥಿರವಾಗಿಟ್ಟು ಬಾಯಿಂದ ಬಾಣ ಬಿಡುವುದು ಶೀತಲ್‌ ದೇವಿಗೆ ಸುಲಭವಾಗಿರಲಿಲ್ಲ. ಇದಕ್ಕೂ ಕುಲದೀಪ್‌ ಅವರು ಒಂದು ಪರಿಹಾರ ಕಂಡುಕೊಳ್ಳುತ್ತಾರೆ.

ಅದೇನೆಂದರೆ ಕೈಗಳಿಲ್ಲದ ವಿಶ್ವದ ಮೊದಲ ಬಿಲ್ಲುಗಾರ ಅಮೆರಿಕದ ಮ್ಯಾಟ್‌ ಸ್ಟಟ್ಸ್ಮನ್‌ ಅವರ ವೀಡಿಯೊವನ್ನು ಅವರು ಶೀತಲ್‌ಗೆ  ತೋರಿಸಿ ಆಕೆಯನ್ನು ಸಾಕಷ್ಟು  ಹುರಿದುಂಬಿಸುತ್ತಾರೆ.

-ವರುಣ್‌ ಜಿ.ಜೆ.

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next