Advertisement

ಕಾಮಗಾರಿ ಲೋಪವಿದ್ದರೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

11:38 AM Mar 01, 2022 | Team Udayavani |

ರಾಯಚೂರು: ಜಲಜೀವನ್‌ ಮಿಶನ್‌ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪಗಳು ಕಂಡು ಬಂದಲ್ಲಿ ಗುತ್ತಿಗೆದಾರ ಸಂಸ್ಥೆಗಳನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾಮಗಾರಿ ಬಗ್ಗೆ ಕೆಲವೊಂದು ದೂರುಗಳು ಬರುತ್ತಿವೆ. ಕಾಮಗಾರಿ ನಡೆದ ಸ್ಥಳಕ್ಕೆ ತಾಪಂ ಇಒ ಹಾಗೂ ಸಂಬಂಧಿಸಿದ ಎಇಇ, ಜೆಇಗಳು ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ಇತ್ಯರ್ಥಪಡಿಸಿ ಕೆಲಸ ಮುಂದುವರಿಸಬೇಕು. ಸಂಬಂಧಿಸಿದ ತಾಲೂಕಿನ ಇಒಗಳು, ಎಇಇಗಳು 10 ದಿನದೊಳಗೆ ವರದಿ ತಯಾರಿಸಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಎಷ್ಟು ಶಾಲೆಗಳಲ್ಲಿ ಶೌಚಗೃಹ, ಕುಡಿವ ನೀರಿನ ಸಮಸ್ಯೆ ಇದೆ ಎಂದು ಸಚಿವರು ಪ್ರಶ್ನಿಸಿದರು. ಅದಕ್ಕೆ ಇಒಗಳು ಸರಿಯಾಗಿ ಉತ್ತರಿಸದಿದ್ದಾಗ ನಿಮಗೆ ನಿಮ್ಮ ಕೆಲಸ ಏನು ಎಂಬುದೇ ಸರಿಯಾಗಿ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಮೇಲೆ ಬಹುತೇಕ ಇಒಗಳು ಸಮಸ್ಯೆ ಇರುವ ಬಗ್ಗೆ ಒಪ್ಪಿಕೊಂಡಾಗ, ನರೇಗಾದಡಿ ಶೌಚಾಲಯ ನಿರ್ಮಿಸಬೇಕು. ಕುಡಿವ ನೀರು ಒದಗಿಸಲು ಏನು ಕ್ರಮ ಬೇಕು ಕೂಡಲೇ ಕೈಗೊಳ್ಳಬೇಕು. ಸ್ವತ್ಛ ಭಾರತ್‌ ಯೋಜನೆಯಡಿ ಯಾವ ಮನೆಗಳಿಗೆ ಶೌಚಾಲಯ ಇಲ್ಲವೋ ಅಂತ ಮನೆಗಳನ್ನು ಸರ್ವೇ ಮಾಡಿ ಕೂಡಲೇ ಆ ಮನೆಗಳಿಗೆ ಶೌಚಾಲಯ ಮಂಜೂರು ಮಾಡಲಾಗುವುದು ಎಂದು ಸೂಚಿಸಿದರು.

ಜಿಪಂ ಯೋಜನಾಧಿಕಾರಿ ಮಡೋಳಪ್ಪ ಮಾತನಾಡಿ, ನಾವು ಗುರಿ ಹಾಕಿಕೊಂಡಿದ್ದಕ್ಕಿಂತ ಹೆಚ್ಚಾದ ಕಾರಣ ಶೌಚಗೃಹಗಳನ್ನು ನಿರ್ಮಿಸಲು ಸಮಸ್ಯೆಯಾಗುತ್ತಿದೆ ಎಂದು ವಿವರಣೆ ನೀಡಿದರು. ಇದಕ್ಕೆ ಶಾಸಕ ಶಿವರಾಜ್‌ ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿ, ನೀವು ಯಾಕೆ ಗುರಿ ನಿಗದಿ ಮಾಡುತ್ತೀರಾ?. ಎಷ್ಟು ಬೇಕು ಅಷ್ಟು ಬೇಡಿಕೆ ಸಲ್ಲಿಸಿ ಎಂದರು.

Advertisement

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಮಂಜೂರಾದ 80 ಕೋಟಿ ಹಣದಲ್ಲಿ ಕೇವಲ 3.5 ಕೋಟಿ ಖರ್ಚಾಗಿರುವುದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಯನ್ನು ಪ್ರಶ್ನಿಸಿದರೆ, ಅವರು ನಾನು ಕಲಬುರಗಿ ಜಿಲ್ಲೆಯ ಅಧಿಕಾರಿಯಾಗಿದ್ದು, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಪ್ರಭಾರ ಹೊಣೆ ನೀಡಿದ್ದಾರೆ ಎಂದರು.

ಕೂಡಲೇ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿದ ಸಚಿವರು, ಸರ್ಕಾರ ಕೋಟ್ಯಂತರ ಹಣ ಕೊಟ್ಟರೂ ಇಲ್ಲಿ ಖರ್ಚು ಮಾಡಿಲ್ಲ. ಒಬ್ಬ ಅಧಿಕಾರಿಯನ್ನು ನಿಯೋಜಿಸಿಲ್ಲ ಎಂದರ ಹೇಗೆ ಎಂದು ಪ್ರಶ್ನಿಸಿದರು.

ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹಣ ಖರ್ಚು ಮಾಡಲು ಎಷ್ಟು ಕಾಲಾವಕಾಶ ಬೇಕು ಎಂದು ಸಚಿವರ ಕೇಳಿದ್ದಕ್ಕೆ ಮೂರು ತಿಂಗಳೊಳಗೆ 40 ಕೋಟಿ ಖರ್ಚು ಮಾಡುವುದಾಗಿ ಅಧಿಕಾರಿ ತಿಳಿಸಿದರು.

ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಮ್‌, ಜಿಪಂ ಸಿಇಒ ನೂರಜಹಾನ್‌ ಖಾನಂ, ಜಿಪಂ ಯೋಜನಾ ನಿರ್ದೇಶಕರಾದ ಮಡೋಳಪ್ಪ ಪಿ.ಎಸ್‌ ಸೇರಿ ಇತರರಿದ್ದರು.ಅರಣ್ಯೀಕರಣ ಗ್ರಾಪಂಗೆ ವಹಿಸಿ ಅರಣ್ಯ ಇಲಾಖೆ ಕಾರ್ಯವೈಖರಿಗೆ ಶಾಸಕ ಡಾ| ಶಿವರಾಜ್‌ ಪಾಟೀಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು ತಾಲೂಕಿನಲ್ಲಿ ಎಲ್ಲೆಲ್ಲಿ ಸಸಿ ನೆಟ್ಟಿದ್ದೀರಿ, ಎಷ್ಟು ಮರಗಳು ಬೆಳೆದಿವೆ ವಿವರ ತಿಳಿಸಿ ಎಂದಾಗ ಅರಣ್ಯ ಇಲಾಖೆ ಅಧಿಕಾರಿಗಳು ತಡಬಡಾಯಿಸಿದರು. ಒಂದು ಸಸಿಗೆ ನೀರುಣಿಸಲು 2 ರೂ. ಖರ್ಚು ಹಾಕುತ್ತೀರಿ. ಒಂದೇ ಟ್ರ್ಯಾಕ್ಟರ್‌ನಿಂದ ಇಡೀ ತಾಲೂಕಿಗೆ ಹೇಗೆ ನೀರುಣಿಸಲು ಸಾಧ್ಯ. ಹೇಗಿದ್ದರೂ ಗ್ರಾಪಂಗಳ 15ನೇ ಹಣಕಾಸು ಯೋಜನೆಯಡಿಯೇ ಇವರಿಗೆ ಅರಣ್ಯೀಕರಣಕ್ಕೆ ಹಣ ನೀಡುತ್ತಿದ್ದು, ಈ ಹೊಣೆಯನ್ನು ಗ್ರಾಪಂಗಳಿಗೆ ನೀಡುವಂತೆ ಒತ್ತಾಯಿಸಿದರು.

ಪಿಕ್ಚರ್‌ ನಿಮ್ಮ ಥರ; ಫೀಲ್ಡ್‌ ನಮ್ಮ ಥರ

ನರೇಗಾಕ್ಕೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ´ಫೋಟೋಗಳನ್ನು ಎಲ್‌ಇಡಿ ಪರದೆ ಮೇಲೆ ಪ್ರದರ್ಶಿಸುವಾಗ ಸಚಿವ ಕೆ.ಎಸ್‌. ಈಶ್ವರಪ್ಪ ನೋಡಿ ತುಂಬಾ ಚನ್ನಾಗಿ ಮಾಡಿದ್ದಾರೆ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಶಾಸಕ ಡಾ| ಶಿವರಾಜ್‌ ಪಾಟೀಲ್‌ ´ಫೋಟೋದಲ್ಲಿ ಎಲ್ಲವೂ ಚನ್ನಾಗಿ ಕಾಣಿಸುತ್ತವೆ. ಸ್ಥಳಕ್ಕೆ ಹೋದರೆ ವಾಸ್ತವಾಂಶ ಗೊತ್ತಾಗಲಿದೆ ಎಂದರು. ಅದಕ್ಕೆ ಸಚಿವ ಪಿಕ್ಚರ್‌ ನೋಡಿದರೆ ಥರ; ಫೀಲ್ಡ್‌ಗೆ ಹೋದರೆ ನಮ್ಮ ಥರ ಕಾಣಿಸುತ್ತೆ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next