Advertisement

ತ್ಯಾಜ್ಯ ವಿಂಗಡಿಸದಿದ್ದರೆ 5,000 ರೂ.ವರೆಗೆ ದಂಡ

10:49 PM Sep 30, 2020 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಜನರು ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಪ್ರತ್ಯೇಕಿಸಿ ನೀಡಬೇಕು. ಇನ್ನು ಪ್ರತ್ಯೇಕಿಸದೆ ನೀಡಿದರೆ ಅ. 2ರಿಂದ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದ್ದಾರೆ.

Advertisement

ಬುಧವಾರ ಮಂಗಳೂರು ಪಾಲಿಕೆ ಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆಯಿಂದ ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿಕಸದ ಸಂಗ್ರಹ ಹಾಗೂ ಶುಕ್ರವಾರ ಮಾತ್ರ ಒಣಕಸದ ಸಂಗ್ರಹ ಕಾರ್ಯ ನಡೆಯಲಿದೆ. ಹೀಗಿರುವಾಗ, ನಗರವಾಸಿಗಳು ಆ ಪ್ರಕಾರ ತಮ್ಮ ಮನೆ ಅಥವಾ ವಾಣಿಜ್ಯ ಬಳಕೆ ಜಾಗದ ಕಸವನ್ನು ವಿಂಗಡಿಸಿ ನೀಡಬೇಕು ಎಂದರು.

ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲೀಕರಣ ಬೈಲಾ 2019 ರಂತೆ ದಂಡ ವಿಧಿಸಲಾಗುವುದು. ಅದರಂತೆ ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1,500ರಿಂದ 5,000 ರೂ. ಗಳ ವರೆಗೆ ವಿಧಿಸಲಾಗುವುದು. ಭಾರೀ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡನೆ ಮಾಡದಿದ್ದಲ್ಲಿ 15,000ದಿಂದ 25,000 ರೂ. ಗಳ ವರೆಗೆ, ತೆರೆದ ಪ್ರದೇಶದಲ್ಲಿ ತ್ಯಾಜ್ಯ ಬಿಸಾಕಿದರೆ 1,500ರಿಂದ 25,000 ರೂ. ಗಳ ವರೆಗೆ, ಬಯೋ ಮೆಡಿಕಲ್‌ ತ್ಯಾಜ್ಯ ಘನತ್ಯಾಜ್ಯದೊಂದಿಗೆ ಮಿಶ್ರಣಗೊಳಿಸಿದರೆ 10,000ದಿಂದ 25,000 ರೂ. ಗಳ ವರೆಗೆ, ಕಟ್ಟಡ ಭಗ್ನಾವಶೇಷಗಳನ್ನು ತೆರೆದ ಪ್ರದೇಶದಲ್ಲಿ ಬಿಸಾಕಿದರೆ 25,000 ರೂ. ದಂಡ ವಿಧಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಭಾರೀ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಯನ್ನು ಕಲ್ಪಿಸಲು ಸೂಚಿಸಲಾಗಿತ್ತು. ಕೋವಿಡ್‌ನಿಂದಾಗಿ ಅನುಷ್ಠಾನದಲ್ಲಿ ವಿಳಂಬವಾಗಿದೆ. ಆದರೆ ಅ. 2ರಿಂದ ಎಲ್ಲ 60 ವಾರ್ಡ್‌ಗಳಲ್ಲಿಯೂ ಕಡ್ಡಾಯವಾಗಿ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡವನ್ನು ವಿಧಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಘನತ್ಯಾಜ್ಯ ಸಂಸ್ಕರಿಸುವ ಎಲ್ಲ ಮನೆಗಳು, ಉದ್ದಿಮೆದಾರರಿಗೆ ಪಾಲಿಕೆ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಉಪಕರ/ ಸೇವಾ ಶುಲ್ಕದಿಂದ ಶೇ. 50ರಷ್ಟು ವಿನಾಯಿತಿ ನೀಡುವ ಬಗ್ಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದರು.

Advertisement

ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ನಿಷೇಧ
ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಮಾರಾಟ ಅಥವಾ ಉಪಯೋಗವನ್ನು ನಿಷೇಧಿಸಲಾಗಿದೆ. ಉದ್ದಿಮೆದಾರರು/ ನಾಗರಿಕರು ಮಾರಾಟ ಅಥವಾ ಉಪಯೋಗಿಸುವುದು ಕಂಡುಬಂದಲ್ಲಿ 1,500ರಿಂದ 25,000 ರೂ.ಗಳ ವರೆಗೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯ ಎಲ್ಲೆಂದರಲ್ಲಿ ಜಾಹೀರಾತು, ಕಟೌಟ್‌, ಫ್ಲೆಕ್ಸ್‌ಗಳನ್ನು ಪರವಾನಿಗೆ ರಹಿತವಾಗಿ ಹಾಕಲು ಅವಕಾಶ ಇಲ್ಲ. ಈಗಾಗಲೇ ಈ ಬಗ್ಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸಾರ್ವಜನಿಕರು ಅಕ್ರಮವಾಗಿ ಹಾಕಿರುವ ಫ್ಲೆಕ್ಸ್‌, ಕಟೌಟ್‌ಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದರು. ಮನಪಾ ಉಪ ಆಯುಕ್ತ ಡಾ| ಸಂತೋಷ್‌ ಕುಮಾರ್‌, ಕಂದಾಯ ಅಧಿಕಾರಿ ಬಿನೊಯ್‌, ಪರಿಸರ ಅಭಿಯಂತರ ಮಧು ಉಪಸ್ಥಿತರಿದ್ದರು.

ಉದ್ದಿಮೆ ಪರವಾನಿಗೆ ಆನ್‌ಲೈನ್‌: ಅ. 2ರಂದು ಪ್ರಾಯೋಗಿಕ ಚಾಲನೆ
ಪಾಲಿಕೆ ವ್ಯಾಪ್ತಿಯ ಎಲ್ಲ ಉದ್ದಿಮೆದಾರರಿಗೆ ವ್ಯಾಪಾರ ಪರವಾನಿಗೆಯನ್ನು ಆನ್‌ಲೈನ್‌ ಮೂಲಕ ನೀಡಲು ಸಾಫ್ಟ್ವೇರ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ ಮನಪಾ ಸಭೆಯಲ್ಲಿ ಇದಕ್ಕೆ ಮಂಜೂರಾತಿ ದೊರಕಿದ್ದು, ಅ. 2ರಿಂದ ಪ್ರಾಯೋಗಿಕ ಚಾಲನೆ ನೀಡಲಾಗುವುದು. ಉದ್ದಿಮೆದಾರರಿಗೆ, ಅಧಿಕಾರಿಗಳಿಗೆ ವ್ಯಾಪಾರ ಪರವಾನಿಗೆಯ ಸಾಫ್ಟ್ವೇರ್‌ ತರಬೇತಿಯನ್ನು ಮುಂದಿನ ಒಂದು ವಾರದೊಳಗೆ ನಡೆಸಲಾಗುವುದು. ಹೊಸ ವ್ಯಾಪಾರ ಪರವಾನಿಗೆಗೆ ಅರ್ಜಿ ಸಲ್ಲಿಸುವುದು, ವ್ಯಾಪಾರ ಪರವಾನಿಗೆಯನ್ನು ನವೀಕರಿಸುವುದು, ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸುವುದು, ದಾಖಲಾತಿಗಳನ್ನು ಹಾಗೂ ಉದ್ದಿಮೆಯ ಫೋಟೋ ಅಪ್‌ಲೋಡ್‌ ಮಾಡುವುದು, ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು, ವ್ಯಾಪಾರ ಪರವಾನಿಗೆಯನ್ನು ಅನುಮೋದಿಸುವುದು, ವ್ಯಾಪಾರ ಪರವಾನಿಗೆಯನ್ನು ಮುದ್ರಿಸುವುದು, ವೆಬ್‌ ಪೋರ್ಟಲ್‌ ಮೂಲಕ ಪರವಾನಿಗೆಯ ಸ್ಥಿತಿಯನ್ನು ಪತ್ತೆಹಚ್ಚು ವುದು, ಪ್ರತಿ ಉದ್ದಿಮೆಯನ್ನು ಗುರುತಿಸಲು ಜಿಯೋ ಟ್ಯಾಗಿಂಗ್‌ ವ್ಯವಸ್ಥೆಗಳನ್ನು ಸಾಫ್ಟ್ ವೇರ್‌ನಲ್ಲಿ ಅಳವಡಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

“ಆಸ್ತಿ ತೆರಿಗೆ ದಂಡ ರಹಿತ ಪಾವತಿಗೆ ತಿಂಗಳ ಕಾಲಾವಕಾಶ’
ಮೇಯರ್‌ ದಿವಾಕರ ಪಾಂಡೇಶ್ವರ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಸೆಪ್ಟಂಬರ್‌ 30ರ ವರೆಗೆ ನೀಡಲಾಗಿದ್ದ ದಂಡ ರಹಿತ ಪಾವತಿಯ ಅವಕಾಶವನ್ನು ಅಕ್ಟೋ ಬರ್‌ ಅಂತ್ಯದವರೆಗೆ ವಿಸ್ತರಿಸ ಲಾಗಿದೆ. ನವೆಂಬರ್‌ 1ರಿಂದ ದಂಡ ವಿಧಿಸಲಾಗುವುದು ಎಂದರು.

ಸೆಂಟ್ರಲ್‌ ಮಾರುಕಟ್ಟೆ ; ಅಧಿಕೃತ ಪರವಾನಿಗೆದಾರರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ
ಮಹಾನಗರ: ನಗರದ ಸೆಂಟ್ರಲ್‌ ಮಾರುಕಟ್ಟೆಗೆ ಸಂಬಂಧಿಸಿ ಹೈಕೋರ್ಟ್‌ ಆದೇಶದಂತೆ ಕಾನೂನುಬದ್ಧ ವ್ಯಾಪಾರ ಪರವಾನಿಗೆ ಹೊಂದಿರುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 100ಕ್ಕೂ ಅಧಿಕ ಮಂದಿ ಪರವಾನಿಗೆ, ಆಧಾರ್‌ ಕಾರ್ಡ್‌ ನೀಡಿದ್ದಾರೆ. ಈ ಪೈಕಿ ಸುಮಾರು 35 ಜನರ ಪರವಾನಿಗೆ ಮಾತ್ರ ಕ್ರಮಬದ್ಧವಾಗಿದೆ. ಹೀಗಾಗಿ ಅಧಿಕೃತವಾಗಿರುವ ವ್ಯಾಪಾರಿಗಳಿಗೆ ಅಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ ಎಂದರು.

ಉದ್ದಿಮೆ ಪರವಾನಿಗೆ ಯಾರ ಹೆಸರಲ್ಲಿದೆಯೋ ಅವರೇ ಅಲ್ಲಿ ವ್ಯಾಪಾರ ನಡೆಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅದು ಸುರಕ್ಷಿತ ತಾಣವಲ್ಲ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಸೆಂಟ್ರಲ್‌ ಮಾರುಕಟ್ಟೆಯ ಕಟ್ಟಡವು ಸುರಕ್ಷಿತವಲ್ಲ ಎಂದು ಪಾಲಿಕೆಯ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನೂತನ ಮಾರುಕಟ್ಟೆ ನಿರ್ಮಾಣದ ಸಂದರ್ಭ ವ್ಯಾಪಾರಿ ಗಳಿಗೆ ಸೂಕ್ತ ಸ್ಥಳದಲ್ಲಿ ಮಾರುಕಟ್ಟೆ ಒದಗಿ ಸಲಾಗುವುದು ಎಂದರು.

ಮಂದಾರ ತ್ಯಾಜ್ಯ ವಿಲೇ; ಸರಕಾರಕ್ಕೆ ವರದಿ
ಕಳೆದ ವರ್ಷ ಪಚ್ಚನಾಡಿಯ ಮಂದಾರ ಪ್ರದೇಶಕ್ಕೆ ಸುಮಾರು 6 ಲಕ್ಷ ಟನ್‌ ಕಸ ಜರಿದು ಬಂದಿರುವುದನ್ನು ವಿಲೇ ಮಾಡುವ ಕುರಿತಂತೆ ಸರಕಾರಕ್ಕೆ ಸಲ್ಲಿಸಲಾಗಿರುವ ವರದಿಗೆ ಅಂತಿಮ ಆದೇಶ ದೊರಕಿಲ್ಲ. ಬಯೋ ಮೈನಿಂಗ್‌ ಅಥವಾ ಬಯೋ ರೆಮಿಡೀಸ್‌ ಮೂಲಕ ಅದನ್ನು ವಿಲೇ ಮಾಡಲು ತಜ್ಞರ ಸಲಹೆಯನ್ನಾಧರಿಸಿ ವರದಿ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ತಿಳಿಸಿದರು.

ಇಲ್ಲಿನ 27 ಕುಟುಂಬಗಳಲ್ಲಿ ಈಗಾಗಲೇ 19 ಕುಟುಂಬಗಳಿಗೆ ಕೃಷಿ, ತೋಟಗಾರಿಕೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದ ಕುಟಂಬಗಳಿಗೆ ವಾರದೊಳಗೆ ಬೆಳೆ ಪರಿಹಾರ ನೀಡಲು ಸಿದ್ಧತೆ ನಡೆಸಲಾಗಿದೆ. ಇನ್ನುಳಿದವರು ದಾಖಲೆ ನೀಡಿಲ್ಲ. ದಾಖಲೆ ನೀಡಿದಾಕ್ಷಣ ಅವರಿಗೂ ವಿತರಿ ಸಲು ಕ್ರಮ ವಹಿಸಲಾಗುವುದು. ಇನ್ನು ಶಾಶ್ವತ ಪುನರ್ವಸತಿಗೆ ಸಂಬಂಧಿಸಿ ಕೆಲವು ಕುಟುಂಬಗಳು ಅಲ್ಲೇ ವಾಸಿಸಲು ಬಯಸಿದ್ದಾರೆ. ಉಳಿದವರಿಗೆ ಮನೆ ಪರಿಹಾರಕ್ಕೆ ಸಂಬಂಧಿಸಿ ಸರಕಾರಕ್ಕೆ ಮನವಿ ನೀಡಲಾಗಿದೆ ಎಂದರು.

ಫ‌ುಟ್‌ಪಾತ್‌ ಅತಿಕ್ರಮಣ; ವಾರದೊಳಗೆ ತೆರವಿಗೆ ಮೇಯರ್‌ ಸೂಚನೆ
ಮೇಯರ್‌ ದಿವಾಕರ್‌ ಪಾಂಡೇಶ್ವರ ಮಾತನಾಡಿ, ನಗರದ ಪ್ರಮುಖ ರಸ್ತೆಗಳು ಸಹಿತ ಹಲವು ಕಡೆಗಳಲ್ಲಿ ಫ‌ುಟ್‌ಪಾತ್‌ಗಳನ್ನು ಅತಿಕ್ರಮಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಗೂಡಂಗಡಿ ಸಹಿತ ಅಕ್ರಮ ವ್ಯವಸ್ಥೆಗಳನ್ನು ಮಾಡಲಾಗಿದೆ. ಹೀಗಾಗಿ ಅದನ್ನು ಒಂದು ವಾರದೊಳಗೆ ಸಂಬಂಧಪಟ್ಟವರು ತೆರವುಗೊಳಿಸಬೇಕು. ಅವರು ತೆಗೆಯದಿದ್ದರೆ ಪಾಲಿಕೆ ವತಿಯಿಂದ ಮುಂದಿನ ದಿನದಲ್ಲಿ ಕಾನೂನು ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next