Advertisement

ಅಮಾನತು ಮಾಡದಿದ್ದರೆ ಜಿಲ್ಲಾ ಬಂದ್‌

12:22 PM Jan 03, 2018 | Team Udayavani |

ಪುತ್ತೂರು: ಗ್ರಾಮಾಂತರ ಠಾಣೆ ಎಸ್‌ಐ ಹಾಗೂ ಸಿಬಂದಿಯನ್ನು ಮೂರು ದಿನದೊಳಗೆ ಅಮಾನತು ಮಾಡದಿದ್ದರೆ ಜಿಲ್ಲಾ ಬಂದ್‌ಗೆ ಕರೆ ನೀಡುವ ಚಿಂತನೆಯಿದೆ. ನಿದ್ರಾಮಯ್ಯ ಪುತ್ತೂರಿಗೆ ಆಗಮಿಸುವ ದಿನದಂದೇ ಜಿಲ್ಲಾ ಬಂದ್‌ ನಡೆಸಿದರೆ ಹೇಗೆ ಎಂಬ ನೆಲೆಯಲ್ಲಿ ಯೋಚಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಹೇಳಿದರು.

Advertisement

ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಮಂಗಳವಾರ ಸಂಜೆ ನಡೆದ ಬೃಹತ್‌ ಹಿಂದೂ ಜಾಗೃತ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತನ್ನ ಮೇಲೆ ಆರು ಪ್ರಕರಣ ದಾಖಲಾಗಿದೆ. ಇವೆಲ್ಲವೂ ಮಂಗಳೂರಿನಲ್ಲಿ. ಪುತ್ತೂರಿನಲ್ಲೂ ಪ್ರಕರಣ ದಾಖಲಾಗುವುದಾದರೆ ಆಗಲಿ. ನಾಳೆಯಿಂದ ಸಂಪ್ಯ ಠಾಣೆಯ ಮುಂಭಾಗವೇ ಪ್ರತಿಭಟನೆ ನಡೆಸಿದರೆ ಹೇಗೆ ಎಂದು ಸಭೆಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಕರಾತಾಡನದ ಮೂಲಕ ಸಭೆ ಸಮ್ಮತಿ ಸೂಚಿಸಿತು.

ಪೊಲೀಸರ ಹಿಂದೂ ವಿರೋಧಿ ನೀತಿ ಖಂಡಿಸಿ ಒಂದು ವಾರದಿಂದ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದು ದೊಡ್ಡವರ ಕಿವಿಗೆ ಬೀಳಲೇ ಇಲ್ಲ. ಅಲ್ಲಾನ ಕೃಪೆಯಿಂದ ಜಯಿಸಿ ಬಂದಿದ್ದೇನೆ ಎನ್ನುವವರಿಗೆ ಮುಂದಿನ ಚುನಾವಣೆಯಲ್ಲಿ ಮಹಾಲಿಂಗೇಶ್ವರ, ಗಣಪತಿ ದೇವರ ಕೃಪೆ ಏನೆಂದು ತೋರಿಸಿ ಕೊಡಬೇಕಾಗಿದೆ. ಎಸ್‌ಐ ಹಾಗೂ ಸಿಬಂದಿಯನ್ನು ವರ್ಗಾವಣೆ ನಡೆಸುವುದು ಬೇಕಿಲ್ಲ. ಅಮಾನತು ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಅಗತ್ಯ ಬಿದ್ದರೆ ಸಿದ್ದರಾಮಯ್ಯ ಪುತ್ತೂರಿಗೆ ಬರುವ ದಿನವೇ ಜಿಲ್ಲಾ ಬಂದ್‌ಗೆ ಕರೆ ಕೊಡುವ ಸಾಧ್ಯತೆ ಇದೆ ಎಂದರು.

ಒಬ್ಬ ದಕ್ಷ ಅಧಿಕಾರಿಯನ್ನು ಜಿಲ್ಲೆಗೆ ಎಸ್ಪಿಯಾಗಿ ನೀಡುತ್ತೇವೆ ಎಂದು ಈ ಮೊದಲು ಹೇಳಲಾಗಿತ್ತು. ಹಿಂದೂ ಪರಿವಾರ ಸಂಘಟನೆಗಳು ರಾಷ್ಟ್ರಪ್ರೇಮ ಹೊಂದಿವೆ ಎನ್ನುವುದು ಎಸ್ಪಿಗೆ ತಿಳಿದಿರಲಿ. ರಾಷ್ಟ್ರದ್ರೋಹದ ಕೆಲಸದಲ್ಲಿ ತೊಡಗಿಲ್ಲ. ಸಂಘಟನೆ ಕಾರ್ಯಕರ್ತ ರತ್ನಾಕರ ಶೆಟ್ಟಿ ಅವರನ್ನು ಗಡೀಪಾರು ಮಾಡಿ ದೊಡ್ಡ ಜನ ಎಂದು  ಬಿಸಿಕೊಳ್ಳಬೇಕಾಗಿಲ್ಲ ಎಂದರು.

ಇಂತಹ ಸಾವಿರಾರು ಕಾರ್ಯಕರ್ತರು ಹುಟ್ಟಿ ಬರುತ್ತಾರೆ ಎಂದು ಸವಾಲೆಸೆದರು. ಹಿಂಜಾವೇ ರಾಜ್ಯ ನಿಕಟಪೂರ್ವ ಸಂಚಾಲಕ ಸತ್ಯಜಿತ್‌ ಸುರತ್ಕಲ್‌ ಮಾತನಾಡಿ, ಸುಳ್ಯದ ಪ್ರಕರಣವೊಂದರಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ ಕಾರಣ ಇಬ್ಬರು ಪೊಲೀಸರನ್ನು ಅಮಾನತು ಮಾಡುವ ನೋಟಿಸ್‌ ಜಾರಿಯಾಗಿದೆ.

Advertisement

ಆದರೆ ಹಿಂದೂ ಕಾರ್ಯಕರ್ತರು ಇದಕ್ಕೆ ತದ್ವಿರುದ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನ್ಯಾಯ ಕೇಳಲು ಹೋದಾಗ ಅನ್ಯಾಯ, ಸರಕಾರದ ಬಳಿ ಹೋದಾಗ ಅಲ್ಲೂ ಅನ್ಯಾಯ. ಹಾಗಾದರೆ ನ್ಯಾಯ ಎಲ್ಲಿದೆ? ಸಮಾನತೆಯನ್ನು ಜಾರಿಗೆ ತಾರದಿರುವುದು ಯಾಕಾಗಿ? ಒಂದು ಹಂತದವರೆಗೆ ಇದನ್ನೆಲ್ಲ ಸಹಿಸಬಹುದು. ಕೊನೆಗೆ ಹಿಂದೂ ಸಮಾಜ ಸಿಡಿದೆದ್ದರೆ, ಎದುರಿಸಲು ನಿಮಗೆ ಸಾಧ್ಯವೇ ಎಂದು ಸವಾಲೆಸೆದರು. ಬಂಟ್ವಾಳದಲ್ಲಿ ಲಕ್ಷಕ್ಕೂ ಅಧಿಕ ಹಿಂದೂ ಮತದಾರರಿದ್ದಾರೆ ಎಂದು ಮರೆಯಬೇಡಿ ಎಂದು ರಮಾನಾಥ ರೈ ಅವರಿಗೆ ಟಾಂಗ್‌ ನೀಡಿದರು.

ಶಾಸಕಿ ಜವಾಬ್ದಾರಿ
ವಿಟ್ಲದಲ್ಲಿ ಗೋಪೂಜೆ ಮಾಡಿ ಬರುವ ಶಾಸಕಿ ಶಕುಂತಳಾ ಶೆಟ್ಟಿ, ಗೋಕಳ್ಳರಿಂದ ಹಾನಿಗೊಳಗಾದ ಮನೆಯವರನ್ನು ಭೇಟಿಯಾಗುವ ಕನಿಷ್ಠ ಸೌಜನ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮನೆ ಹಟ್ಟಿಯಿಂದ ದನ ಕಳ್ಳತನ, ಅಕ್ರಮ ಕಸಾಯಿಖಾನೆಯನ್ನು ತಡೆಯುವುದು ನಿಮ್ಮದೇ
ಇಲಾಖೆಯ ಜವಾಬ್ದಾರಿ ಎನ್ನುವುದನ್ನು ಮರೆಯಬೇಡಿ ಎಂದು ನೆನಪಿಸಿದರು.

ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ಹಿಂಜಾವೇ ಪ್ರಾಂತ ಕಾರ್ಯದರ್ಶಿ ರಾಧಾ ಕೃಷ್ಣ ಅಡ್ಯಂತಾಯ ಉಪಸ್ಥಿತರಿದ್ದರು. ಹಿಂದೂ ಹಿತರಕ್ಷಣ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ ಆಚಾರ್ಯ ಆಶಯ ಗೀತೆ ಹಾಡಿದರು. ಬಜರಂಗದಳ ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ವಂದಿಸಿದರು.

3 ದಿನಗಳ ಕಾಲಾವಕಾಶ 
ಕೆಲ ವಿಷಯದಲ್ಲಿ ಎಸ್ಪಿ ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ ಎಸ್‌ಐ ಅಮಾನತಿಗೆ ಮೂರು ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಕಾರ್ಯಕರ್ತರಿಗೆ ಹಲ್ಲೆ ನಡೆಸಿ, ಲಾಠಿಚಾರ್ಜ್‌ ಎಂದು ಬಿಂಬಿಸುವ ಪೊಲೀಸರ ಕ್ರಮ ಸರಿಯಲ್ಲ. ತಾಕತ್ತಿದ್ದರೆ ಹಲ್ಲೆ ನಡೆಸಿದ್ದು ಹೌದೆಂದು ಒಪ್ಪಿಕೊಳ್ಳಲಿ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next