Advertisement

ಮಣ್ಣು ಅಳಿದರೆ ಜೀವ ಸಂಕುಲಕ್ಕೆ ಸಂಚಕಾರ

11:11 PM Dec 04, 2020 | mahesh |

ಮಣ್ಣು ಬರೀ ಮಣ್ಣಲ್ಲ. ಭೂಮಿಯ ಮೇಲೆ ವಾಸಿಸುವ ಸಕಲ ಜೀವರಾಶಿಗಳ ಜೀವನಾಧಾರವಾಗಿದೆ. ಸರಳವಾಗಿ ಹೇಳುವುದಾದರೆ ಯಾವ ಋಣವನ್ನಾದರೂ ತೀರಿಸಬಹುದು ಆದರೆ ಮಣ್ಣಿನ ಋಣವನ್ನು ತೀರಿಸುವುದು ಅಸಾಧ್ಯ. ಮಣ್ಣು ಅಳಿದರೆ ಮನುಕುಲ ಮಾತ್ರವಲ್ಲದೆ ಜೀವಸಂಕುಲವೇ ಅಳಿದಂತೆ ಎಂಬ ಮಾತು ಇದೆ. ಪ್ರತೀ ಮನುಷ್ಯನ ಆಹಾರ ಅಗತ್ಯವನ್ನು ಮಣ್ಣು ನೀಗಿಸುತ್ತಾ ಬಂದಿದೆ. ಮಣ್ಣು ಒಮ್ಮೆ ನಾಶವಾದರೆ ಮರಳಿ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಮಣ್ಣು ಮಾತೃ ಸ್ವರೂಪಿ.

Advertisement

ಎಲ್ಲವೂ ಮಣ್ಣನಿಂದ
ಮಣ್ಣನಿಂದ ಮಣ್ಣಿಗೆ ಎಂಬ ಮಾತಿದೆ. ಮಾನವ ಸೇರಿದಂತೆ ಸಕಲ ಜೀವರಾಶಿಗಳಿಗೂ ಮಣ್ಣಿಗೂ ಬಿಡಿಸಲಾಗದ ನಂಟು. ಇಡೀ ಜೀವ ಸಂಕುಲಕ್ಕೂ ಮಣ್ಣಿಗೂ ತಾಯಿ-ಮಕ್ಕಳ ಸಂಬಂಧ. ತಿನ್ನುವ ವಸ್ತು, ಉಡುವ ಬಟ್ಟೆ, ವಾಸಿಸುವ ಮನೆ ಎಲ್ಲವೂ ಮಣ್ಣುಜನ್ಯವೇ ಆಗಿದೆ. ಆದರೆ ಮಣ್ಣು ಇಂದು ವಿವಿಧ ಕಾರಣಗಳಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು, ಪೋಷಕಾಂಶ ಮಟ್ಟ ಕಡಿಮೆಯಾಗುತ್ತಿದೆ. ಇದನ್ನು ಅರಿತುಕೊಳ್ಳುವ ಸಲುವಾಗಿ “ವಿಶ್ವ ಮಣ್ಣು ದಿನ’ ಆಚರಿಸಲಾಗುತ್ತಿದೆ. ಮಣ್ಣಿನ ಪ್ರಮಾಣ, ಗುಣಮಟ್ಟಗಳಲ್ಲಿ ವ್ಯತ್ಯಯವುಂಟಾದರೆ ಅದು ನಮ್ಮ ಆಹಾರ, ನೀರು, ಗಾಳಿ..ಹೀಗೆ ಒಟ್ಟಿನಲ್ಲಿ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮವುಂಟು ಮಾಡುತ್ತದೆ. ಆದ್ದರಿಂದ ಮಣ್ಣಿನ ರಕ್ಷಣೆಯೇ ನಮ್ಮೆಲ್ಲರ ಧ್ಯೇಯವಾಗಬೇಕು.

ಮಣ್ಣಿನ ಪ್ರಯೋಜನ
ಮಣ್ಣು ಭೂಮಿಯಲ್ಲಿನ ಸಕಲ ಜೀವ ಗಳಿಗೆ ಆಶ್ರಯ ನೀಡುತ್ತದೆ. ಆಹಾರ, ಮೇವು, ವಸತಿ, ಇಂಧನ ಇತ್ಯಾದಿಗಳನ್ನು ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸಿ ಸಸ್ಯಗಳಿಗೆ ಧಾರೆಯೆರೆಯುತ್ತದೆ. ಪ್ರಕೃತಿ ವಿಕೋಪಗೊಂಡಾಗ ಹವಾಮಾನದ ಏರುಪೇರನ್ನು ತಡೆಯುತ್ತದೆ.

ಫ‌ಲವತ್ತತೆ ಎಂದರೇನು?
ಮಣ್ಣಿನ ಫ‌ಲವತ್ತತೆ ಎಂದರೆ ಪೋಷಕಾಂಶಗಳು ಮಾತ್ರವಲ್ಲದೇ ಅದರಲ್ಲಿನ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂಧಗಳನ್ನು ಒಳಗೊಂಡಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾದ ಪ್ರಮುಖ ಅಂಶ. ಈ ಮೂರು ಅಂಶಗಳು ಅನ್ಯೋನ್ಯ ವಾಗಿದ್ದರೆ ಮಾತ್ರ ಭೂಮಿಯು ಫ‌ಲ ಭರಿತವಾಗಿರುತ್ತದೆ.

ಸೂಕ್ಷ್ಮಜೀವಿಗಳು ಮತ್ತು ಮಣ್ಣು
ಸೂಕ್ಷ್ಮಾಣು ಜೀವಿಗಳು-ಇದು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಆಕ್ಟಿನೊಮೈಸಿಟಸ್‌, ಶಿಲೀಂದ್ರ, ಬ್ಯಾಕ್ಟೀರಿಯಾ, ಪಾಚಿ, ಪ್ರೊಟೋಜೋವ ಮೊದಲಾದವುಗಳು ಮಣ್ಣಿನಲ್ಲಿರುವ ಅತ್ಯಂತ ಪ್ರಮುಖ ಸೂಕ್ಷ್ಮಜೀವಿಗಳು. ಇವುಗಳ ಜತೆ ಜೀರುಂಡೆ, ಇರುವೆ, ಗೆದ್ದಲು ಇತ್ಯಾದಿ ಕೀಟಗಳು, ಜಂತುಹುಳು, ಎರೆಹುಳುಗಳು, ಸಹಸ್ರಪದಿಗಳು ಮೊದಲಾದ ಕಣ್ಣಿಗೆ ಗೋಚರಿಸುವ ಪುಟ್ಟ ಪ್ರಾಣಿಗಳು ಮಣ್ಣಿನಲ್ಲಿ ವಾಸವಾಗಿರುತ್ತವೆ. ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಮಣ್ಣಿನ ಉತ್ಪಾದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನ್‌ ಮತ್ತು ಕಿಣ್ವಗಳು ಈ ಸೂಕ್ಷ್ಮಾಣುಗಳಲ್ಲಿದ್ದು, ಮಣ್ಣಿನ ಗುಣಧರ್ಮಗಳನ್ನು ಸುಧಾರಿಸಿ ಫ‌ಲವತ್ತತೆಯನ್ನು ಕಾಪಾಡುತ್ತವೆ.

Advertisement

ರಾಸಾಯನಿಕ ಬೇಡ, ಸಾವಯವ ಬಳಸಿ
ಮಣ್ಣು ಇಂದು ತನ್ನ ಫ‌ಲವತ್ತತೆಯನ್ನು ಕಳೆದುಕೊಳ್ಳಲು ಮುಖ್ಯ ಕಾರಣವೆಂದರೆ ರಾಸಾಯನಿಕಗಳ ಬಳಕೆ. ಭೂಮಿಯಲ್ಲಿ ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಮಾತ್ರ ಮಣ್ಣಿನ ಫ‌ಲವತ್ತತೆ ಉಳಿಯುತ್ತದೆ. ಪ್ರಾಣಿಗಳ ಮಲಮೂತ್ರ, ತರಗೆಲೆ, ಹಸುರೆಲೆಗಳು, ತ್ಯಾಜ್ಯವಸ್ತು, ಮೀನಿನ ಹುಡಿ, ಹಿಂಡಿ, ಕಾಂಪೋಸ್ಟ್‌, ಎರೆಗೊಬ್ಬರ, ಜೈವಿಕ ಗೊಬ್ಬರ ಮೊದಲಾದ ಪ್ರಾಣಿಜನ್ಯ ವಸ್ತುಗಳು ಸಾವಯವ ಗೊಬ್ಬರಗಳಾಗಿದ್ದು ಇವುಗಳನ್ನು ಹೆಚ್ಚಾಗಿ ಬಳಸಿದಲ್ಲಿ ಮಣ್ಣಿನ ಸಾರವನ್ನು ಉಳಿಸಿಕೊಳ್ಳಲು ಸಾಧ್ಯ. ಪ್ರಾಣಿ ಮತ್ತು ಸಸ್ಯ ಮೂಲದ ಸಾವಯವ ವಸ್ತುಗಳು ಕೊಳೆತು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಇವುಗಳು ಮಣ್ಣಿನ ಸ್ವರೂಪವನ್ನು ಸ್ಥಿರವಾಗಿರಿಸಿ, ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.

ಮೊದಲ ದಿನಾಚರಣೆ
2002ರಲ್ಲಿ ಇಂಟರ್‌ನ್ಯಾಶನಲ್‌ ಯೂನಿಯನ್‌ ಆಫ್ ಸಾಯಿಲ್‌ ಸೈನ್‌ ಸಂಸ್ಥೆ ಈ ದಿನಾಚರಣೆಯನ್ನು ಪ್ರಾರಂಭಿಸಿತು. 2014ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಡಿಸೆಂಬರ್‌ 5 ಅನ್ನು ವಿಶ್ವ ಮಣ್ಣಿನ ದಿನ ಎಂದು ಘೋಷಿಸಿತು. ಈ ವರ್ಷ “ಮಣ್ಣನ್ನು ಜೀವಂತವಾಗಿರಿಸಿಕೊಳ್ಳಿ, ಮಣ್ಣಿನ ಜೀವವೈವಿಧ್ಯವನ್ನು ರಕ್ಷಿಸಿ’ ಎಂಬ ಧ್ಯೇಯವನ್ನಿಟ್ಟುಕೊಂಡು ಆಚರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next