Advertisement

Marriage: `ಸಪ್ತಪದಿ’ ಶಾಸ್ತ್ರ ನಡೆಯದಿದ್ದರೆ ಆ ವಿವಾಹಕ್ಕಿಲ್ಲ ಮಾನ್ಯತೆ

09:17 PM Oct 05, 2023 | Team Udayavani |

ಪ್ರಯಾಗ್‌ರಾಜ್‌: “ಹಿಂದೂಗಳಲ್ಲಿ ಸಪ್ತಪದಿ ತುಳಿಯುವ ಶಾಸ್ತ್ರ ಮಾಡಿಲ್ಲವೆಂದಾದರೆ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲು ಆಗುವುದಿಲ್ಲ’.

Advertisement

ಹೀಗೆಂದು ಹೇಳಿದ್ದು ಅಲಹಾಬಾದ್‌ ಹೈಕೋರ್ಟ್‌. ನನ್ನಿಂದ ವಿಚ್ಛೇದನ ಪಡೆಯದೆಯೇ ನನ್ನ ಪರಿತ್ಯಕ್ತ ಪತ್ನಿಯು ಎರಡನೇ ವಿವಾಹವಾಗಿದ್ದು, ಆಕೆಗೆ ಶಿಕ್ಷೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಸಂಪೂರ್ಣ ವಿಚಾರಣೆಯನ್ನೇ ಹೈಕೋರ್ಟ್‌ ರದ್ದು ಮಾಡಿದೆ.

ಸ್ಮತಿ ಸಿಂಗ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾ.ಸಂಜಯ್‌ ಕುಮಾರ್‌ ಸಿಂಗ್‌ ಅವರು, “ಶಾಸ್ತ್ರೋಕ್ತ ವಿವಾಹ ಎಂದರೆ, ಸೂಕ್ತ ರೀತಿಯಲ್ಲಿ ಸಮರ್ಪಕ ಸಮಾರಂಭಗಳೊಂದಿಗೆ ಮದುವೆ ಆಗುವುದು. ಈ ರೀತಿ ವಿವಾಹವಾಗಿಲ್ಲ ಎಂದಾದರೆ ಅದನ್ನು ಶಾಸ್ತ್ರೋಕ್ತ ವಿವಾಹ ಎಂದು ಹೇಳಲಾಗದು. ಹಿಂದೂ ವಿವಾಹ ಕಾನೂನಿನ ಪ್ರಕಾರ, ಮದುವೆಯು ಮಾನ್ಯವಾಗಲು ಇರುವ ಪ್ರಕ್ರಿಯೆಗಳ ಪೈಕಿ ಸಪ್ತಪದಿ ತುಳಿಯುವ ಶಾಸ್ತ್ರವೂ ಒಂದಾಗಿದೆ. ಇದೇ ನಡೆದಿಲ್ಲವೆಂದರೆ, ಆ ಮದುವೆ ಕಾನೂನಿನ ಪ್ರಕಾರವೂ ಮಾನ್ಯವಾಗುವುದಿಲ್ಲ’ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪತಿಯು ತನ್ನ ಪತ್ನಿ ವಿರುದ್ಧ ಮಾಡಿರುವ ದೂರಿನಲ್ಲಿ ಎಲ್ಲೂ ತಾವು ಸಪ್ತಪದಿ ತುಳಿದು ವಿವಾಹವಾಗಿದ್ದೇವೆ ಎಂಬ ಬಗ್ಗೆ ಉಲ್ಲೇಖವಿಲ್ಲ, ಕೋರ್ಟ್‌ ಮುಂದೆ ನೀಡಿರುವ ಹೇಳಿಕೆಯಲ್ಲೂ ಅದನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ, ಅರ್ಜಿಯಲ್ಲಿ ಅಪರಾಧ ಎಂದು ಪರಿಗಣಿಸುವ ಅಂಶಗಳೇ ಕಾಣಿಸುತ್ತಿಲ್ಲ. ಈ ಕಾರಣಕ್ಕಾಗಿ, ಪತ್ನಿ ವಿರುದ್ಧ ಹೊರಡಿಸಲಾಗಿರುವ ಸಮನ್ಸ್‌ ರದ್ದು ಮಾಡುವುದರ ಜೊತೆಗೆ, ಮಿರ್ಜಾಪುರ ಕೋರ್ಟ್‌ನಲ್ಲಿ ಆಕೆಯ ವಿರುದ್ಧ ಸಲ್ಲಿಸಲಾಗಿರುವ ದೂರಿನ ವಿಚಾರಣೆಯನ್ನೂ ಕೈಬಿಡುವಂತೆ ಆದೇಶಿಸುತ್ತಿದ್ದೇವೆ ಎಂದೂ ನ್ಯಾ. ಸಂಜಯ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next